World Tourism Day 2024: ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆ ಕರ್ನಾಟಕದ ಸುಪ್ರಸಿದ್ಧ ಶಿವನ ಪ್ರಮುಖ ಐದು ದೇವಾಲಯಗಳ ವಿಶೇಷ ಮಾಹಿತಿ ನಿಮಗೆ ಒದಗಿಸಿದ್ದೇವೆ. ಶಿವನು ನೆಲೆಸಿರುವ ಕ್ಷೇತ್ರಗಳಾದ ಮುರುಡೇಶ್ವರ ದೇವಸ್ಥಾನ, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ, ಕೋಟಿಲಿಂಗೇಶ್ವರ ದೇವಸ್ಥಾನ, ಗೋಕರ್ಣ ಆತ್ಮಲಿಂಗ ಮಹಾಬಲೇಶ್ವರ ದೇವಸ್ಥಾನ ಮತ್ತು ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ಕುರಿತು ಇದೀಗ ತಿಳಿದುಕೊಳ್ಳೋಣ.
ಮುರುಡೇಶ್ವರ ದೇವಸ್ಥಾನ: ಹೊನ್ನಾವರ ಹಾಗೂ ಭಟ್ಕಳದ ಮಧ್ಯೆ ಮುರುಡೇಶ್ವರ ಇದೆ. ಮುರುಡೇಶ್ವರವು ಹಿಂದೂಗಳ ಪ್ರಸಿದ್ಧ ಪವಿತ್ರ ಯಾತ್ರಾ ಸ್ಥಳವಾಗಿದೆ. ಕಂಡುಕಾಗಿರಿ ಶಿಖರದಲ್ಲಿರುವ ಮುರುಡೇಶ್ವರ ದೇವಾಲಯ ಹಾಗೂ ರಾಜಗೋಪುರ ಮುರುಡೇಶ್ವರದ ಮುಖ್ಯ ಆಕರ್ಷಣೆಯಾಗಿದೆ. ಈ ದೇವಾಲಯವು ಮೂರು ಕಡೆಯಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿರುವುದು ಮತ್ತೊಂದು ವಿಶೇಷ. ಪೌರಾಣಿಕ ಇತಿಹಾಸದ ಪ್ರಕಾರ, ಈ ಪ್ರದೇಶದಲ್ಲಿ ಗಣೇಶನು ಬ್ರಾಹ್ಮಣ ಹುಡುಗನ ಅವತಾರದಲ್ಲಿ ಬಂದು ರಾವಣನ ಬೇಡಿಕೆಯಂತೆ ಕೈಯಲ್ಲಿ ಹಿಡಿದುಕೊಂಡಿದ್ದ ಆತ್ಮಲಿಂಗವನ್ನು ಕೆಳಗೆ ಇಟ್ಟಿರುವ ಪವಿತ್ರ ಸ್ಥಳವಿದು ಎಂಬುದಾಗಿ ತಿಳಿದು ಬರುತ್ತದೆ.
ಪೂರ್ವದಲ್ಲಿ ಗೋಪುರಗಟ್ಟಿರುವ ಬೆಟ್ಟಗಳು ಮತ್ತು ಪಶ್ಚಿಮದಲ್ಲಿ ಭೋರ್ಗರೆಯುತ್ತಿರುವ ಸಮುದ್ರದ ನಡುವಿನ ದೇವಾಲಯವು ಭಕ್ತರು ಹಾಗೂ ಪ್ರವಾಸಿಗಳನ್ನು ಸೆಳೆಯುತ್ತದೆ. ಇಲ್ಲಿನ 123 ಅಡಿ ಉದ್ದದ ಶಿವನ ಬೃಹತ್ ಪ್ರತಿಮೆಯು ಜಗತ್ತಿನಲ್ಲೇ ಅತೀ ಎತ್ತರದ ಶಿವವಿಗ್ರಹ ಆಗಿದೆ. ಮತ್ತು ಶಿವಲಿಂಗವು ಈ ದೇವಾಲಯದಲ್ಲಿರುವುದನ್ನೂ ಕಾಣಬಹುದು. ಈ ಶಿವನ ಬೃಹತ್ ಮೂರ್ತಿಯನ್ನು ಶಿವಮೊಗ್ಗದ ಕಾಶಿನಾಥ, ಅವರ ಪುತ್ರ ಶ್ರೀಧರ್ ಅವರು ಇನ್ನಿತರ ಶಿಲ್ಪಿಗಳ ನೆರವಿನಿಂದ ನಿರ್ಮಿಸಿದ್ದಾರೆ. ದೇವಾಲಯದ ಎದುರಿಗೆ 20 ಅಂತಸ್ತಿನ ದೊಡ್ಡ ಗೋಪುರವು ಎಲ್ಲರ ಗಮನಸೆಳೆಯುತ್ತದೆ.
ಧರ್ಮಸ್ಥಳದ ಮಂಜುನಾಥ ಸ್ವಾಮಿ: ಧರ್ಮದ ನೆಲೆಯ ಧಾರ್ಮಿಕ ತಾಣವಾದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವು ದಕ್ಷಿಣ ಭಾರತೀಯರ ಪ್ರಮುಖ ಆರಾಧ್ಯ ಕ್ಷೇತ್ರ. ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಾತಿಗೆ ಅತಿ ಹೆಚ್ಚು ಮಹತ್ವವಿದೆ. ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ 8 ಶತಮಾನಗಳ ಇತಿಹಾಸ ಹೊಂದಿದ್ದು, ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ದೇವಸ್ಥಾನದಲ್ಲಿರುವ ಶ್ರೀ ಮಂಜುನಾಧ ಸ್ವಾಮಿಯ ಮೂರ್ತಿಯು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಯಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪನೆ ಮಾಡಿದ್ದರು ಎಂದು ಪುರಾಣಗಳಿಂದ ತಿಳಿದು ಬರುತ್ತದೆ.
ಧರ್ಮಸ್ಥಳವು ದಾನ, ಧರ್ಮಕ್ಕೆ ಪ್ರಸಿದ್ಧಿಯಾಗಿದೆ. ಜೊತೆಗೆ ನೈತಿಕ, ಸಾಂಸ್ಕೃತಿಕ ಕೇಂದ್ರವಾಗಿಯೂ ಭಕ್ತರನ್ನು ಆಕರ್ಷಿಸುತ್ತದೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನದ ನಂತರ, ಬಹಿರಂಗ ಶುದ್ಧಿಯೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನದೊಂದಿಗೆ ಅಂತರಂಗ ಶುದ್ಧಿ ಮಾಡಿಕೊಂಡು ಮಾನಸಿಕ ಶಾಂತಿ, ನೆಮ್ಮದಿ ಪಡೆಯುತ್ತಾರೆ. ಮನದ ದುಃಖ, ನೋವು ಮರೆಯಾಗುತ್ತದೆ ಎಂಬುದುವುದು ಭಕ್ತರ ನಂಬಿಕೆಯಾಗಿದೆ.
ಕೋಟಿಲಿಂಗೇಶ್ವರ ದೇವಸ್ಥಾನ: ಗೌರೀಶ, ಸರ್ವೇಶ, ಜಗದೀಶ, ಮಲ್ಲೇಶ, ಹೀಗೆ ನೂರಾರು ಹೆಸರುಗಳಿಂದ ಶಿವನನ್ನು ಭಕ್ತರು ಆರಾಧಿಸುತ್ತಾರೆ. ರಾಜ್ಯದ ಪ್ರಸಿದ್ಧ ಶಿವ ದೇವಾಲಯಗಳಲ್ಲೊಂದು ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ದೇವಸ್ಥಾನ. ದಕ್ಷಿಣ ಭಾರತದ ಎಲ್ಲಾ ಭಕ್ತಾದಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಜಿಲ್ಲೆಯ ಚಿನ್ನದಗಣಿ ಸಮೀಪದ ಕಮ್ಮಸಂದ್ರ ಗ್ರಾಮದ ಬಳಿಯಿರುವ 15 ಎಕರೆ ವಿಸ್ತಾರದ ತಾಣದಲ್ಲಿ ಕೋಟಿಗಳ ಸಂಖ್ಯೆಯ ಶಿವನ ಸ್ವರೂಪವೆನ್ನಲಾದ ಶಿವಲಿಂಗ ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತಿದೆ.
ವಿಶ್ವದಲ್ಲೇ ಅತಿ ಎತ್ತರವಾದ ಅಂದ್ರೆ, 33 ಮೀಟರ್ ಇರುವ ಶಿವಲಿಂಗ (108 ಅಡಿ) ಮತ್ತು ನಂದೀಶ್ವರ ಮೂರ್ತಿಯು(35 ಅಡಿ) ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದೆ. ಮಹಾಶಿವರಾತ್ರಿ ಹಬ್ಬದ ಸಮಯದಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ.ಈ ಕ್ಷೇತ್ರವು ರಾಜ್ಯದ ಪ್ರವಾಸೋದ್ಯಮಕ್ಕೆ ಪ್ರಮುಖ ಪಾತ್ರ ವಹಿಸುತ್ತಿದೆ.
ಗೋಕರ್ಣ ಆತ್ಮಲಿಂಗ ಮಹಾಬಲೇಶ್ವರ: ಸಮುದ್ರ ದಡದಲ್ಲಿರುವ ಗೋಕರ್ಣದ ಮಹಾಬಲೇಶ್ವರ ಶಿವನ ದೇವಸ್ಥಾನವು ದೇಶದ ಎಲ್ಲ ಹಿಂದೂ ಭಕ್ತರಿಗೆ ಪುಣ್ಯ ಕ್ಷೇತ್ರವಾಗಿದೆ. ಕಾಶಿ, ರಾಮೇಶ್ವರ ಮತ್ತು ಗೋಕರ್ಣ ತ್ರಿಸ್ಥಲ ಶೈವಕ್ಷೇತ್ರಗಳೆಂದೇ ಪ್ರಸಿದ್ಧಿ ಪಡೆದಿವೆ. ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ರಾವಣನು ಇಲ್ಲಿಗೆ ತೆಗೆದುಕೊಂಡು ಬಂದನೆಂಬ ನಂಬಿಕೆಯಿದೆ. ಆತನಲ್ಲಿ ವಿಶೇಷವಾದ ಶಕ್ತಿ ತುಂಬುವುದಲ್ಲದೇ ಆತನನ್ನು ಅತ್ಯಂತ ಬಲಿಷ್ಠವಾಗಿಸಬಲ್ಲ ಲಿಂಗವಾದ ಆತ್ಮಲಿಂಗವನ್ನು ಆತ ಪಡೆದುಕೊಂಡು ತಂದಿದ್ದನು. ಈಗಾಗಲೇ ದುಷ್ಟನಾಗಿದ್ದ ಈ ರಾಜನು ಮತ್ತಷ್ಟು ಬಲಿಷ್ಠನಾಗಬಾರದೆಂಬ ಕಾರಣದಿಂದ ದೇವತೆಗಳು ಗಣೇಶನ ಸಹಕಾರದೊಂದಿಗೆ ಆತ ಲಿಂಗವನ್ನು ಇದೇ ಸ್ಥಳದಲ್ಲಿ ಬಿಡುವಂತೆ ತಂತ್ರ ರೂಪಿಸಿದ್ದರು.
ಮುಂದೆ ಮಹಾ ಬಲಶಾಲಿಯಾದ ರಾವಣನೇ ತುಂಬಾ ಬಲ ಬಿಟ್ಟು ಎಳೆದರೂ ಬಾರದೆ ಗಟ್ಟಿಯಾಗಿ ಭೂಮಿಯನ್ನು ಹಿಡಿದ ಶಿವ ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಮಹಾಬಲೇಶ್ವರ ಎಂಬ ಹೆಸರಿನಿಂದ ಲಿಂಗರೂಪಿಯಾಗಿ ನೆಲೆಸಿದ ಎಂಬ ಪ್ರತೀತಿ ಇಂದಿಗೂ ಇದೆ. ತಮಿಳು ಕವಿಗಳಾದ ಅಪ್ಪಾರ್ ಹಾಗೂ ಸಂಬಂದಾರ್ ಅವರ ರಚನೆ ಕೀರ್ತನೆಗಳಲ್ಲಿ ಈ ಮಾಹಿತಿ ಉಲ್ಲೇಖಗೊಂಡಿದ್ದು, ತುಳುನಾಡಿನ ಒಡೆಯನ ಹೊಗಳಿಕೆಗೂ ಪಾತ್ರವಾಗಿದ್ದವು. ಈ ಪ್ರದೇಶವು ವಿಜಯನಗರ ಅರಸರಾದ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು.
ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ: ದಕ್ಷಿಣ ಭಾರತದ ದೊಡ್ಡ ಶಿವನ ದೇವಾಲಯಗಳಲ್ಲಿ ನಂಜನಗೂಡು ನಂಜುಂಡೇಶ್ವರ ದೇವಸ್ಥಾನವೂ ಒಂದಾಗಿದೆ. ಕಪಿಲಾ ನದಿಯ ತಟದಲ್ಲಿ ಈ ದೇವಾಲಯವಿದೆ. 11ನೇ ಶತಮಾನದಲ್ಲಿ ಚೋಳರಿಂದ ಈ ದೇವಸ್ಥಾನವು ವಿಸ್ತರಣೆಗೊಂಡಿತೆಂದು ತಿಳಿದುಬರುತ್ತದೆ. ಸುಮಾರು 385 ಅಡಿ ಉದ್ದ, 160 ಅಡಿ ಅಗಲದ ಈ ದೇವಾಲಯದಲ್ಲಿ 140ಕ್ಕೂ ಹೆಚ್ಚು ಕಂಬಗಳ ಸಂಕೀರ್ಣವಿರುವುದು ತುಂಬಾ ವಿಶೇಷವಾಗಿದೆ.
ಮಮ್ಮುಡಿ ಕೃಷ್ಣರಾಜ ಒಡೆಯರ್ ಅವರು 1845ರಲ್ಲಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಗೋಪುರವನ್ನು ನಿರ್ಮಿಸಿದ್ದರು. ಇಲ್ಲಿ ಜರುಗುವ ರಥೋತ್ಸವಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವೈಭವದಿಂದ ನಡೆಯುವ ತೆಪ್ಪೋತ್ಸವವು ಎಲ್ಲರೂ ಕಣ್ತುಂಬಿಕೊಳ್ಳುತ್ತಾರೆ.