ಹೈದರಾಬಾದ್: ಮಲೇರಿಯಾ ಒಂದು ಮಾರಣಾಂತಿಕ ಸೊಳ್ಳೆಯಿಂದ ಹರಡುವ ರೋಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 2022 ರಲ್ಲಿ ಜಗತ್ತಿನಲ್ಲಿ 249 ಮಿಲಿಯನ್ ಮಲೇರಿಯಾ ಪ್ರಕರಣಗಳು ಕಂಡು ಬಂದಿವೆಯಂತೆ. 85 ದೇಶಗಳಲ್ಲಿ ಸುಮಾರು 608,000 ಜನರು ಮಲೇರಿಯಾದಿಂದ ಮೃತಪಟ್ಟಿದ್ದಾರೆ. ಮಾರಣಾಂತಿಕ ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳನ್ನು ಕಂಡುಹಿಡಿಯಲು ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಮಲೇರಿಯಾ ಬರುವುದು ಏಕೆ?: ಪ್ರಮುಖವಾಗಿ ಸೊಳ್ಳೆಯಿಂದಲೇ ಈ ರೋಗ ಬರುತ್ತದೆ. ಈ ರೋಗವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿಯಿಂದ ಉಂಟಾಗುತ್ತದೆ, ಇದು ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಕಚ್ಚಿದಾಗ ಮನುಷ್ಯರಿಗೆ ಹರಡುತ್ತದೆ. ಮಲೇರಿಯಾ ಪೀಡಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಇನ್ನೊಬ್ಬ ವ್ಯಕ್ತಿಯನ್ನು ಕಚ್ಚುವ ಮೂಲಕವೂ ರೋಗ ಇನ್ನೊಬ್ಬರಲ್ಲಿ ಹರಡುವಂತೆ ಮಾಡುತ್ತದೆ. ಆದರೆ, ಸೋಂಕಿನ ನಂತರ ನಾವು ತಕ್ಷಣ ಈ ರೋಗವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಹೊರಬರಲು ಕೆಲವು ವಾರಗಳನ್ನ ತೆಗೆದುಕೊಳ್ಳಬಹುದು. ಈ ರೋಗದ ತೀವ್ರತೆಯು ವಿಶೇಷವಾಗಿ ಚಿಕ್ಕ ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಮಲೇರಿಯಾ ರೋಗಲಕ್ಷಣಗಳನ್ನು ಮತ್ತು ತಡೆಗಟ್ಟುವ ಕ್ರಮಗಳನ್ನು ಮೊದಲೇ ಪತ್ತೆಹಚ್ಚುವುದು ಉತ್ತಮ. ಮುಂಜಾಗ್ರತೆ ವಹಿಸುವ ಮೂಲಕ ಈ ರೋಗವು ಮಾರಣಾಂತಿಕವಾಗುವುದನ್ನು ತಡೆಯಬಹುದು.
ಮಲೇರಿಯಾದ ಲಕ್ಷಣಗಳು ಯಾವುವು?
1. ಜ್ವರ: ಮಲೇರಿಯಾದ ಸಾಮಾನ್ಯ ಲಕ್ಷಣವೆಂದರೆ ಹೆಚ್ಚು ಜ್ವರ ಬರುವುದು. ತೀವ್ರ ಶೀತದ ಜೊತೆಗೆ ಜ್ವರ ಬಂದರೆ ಮಲೇರಿಯಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
2. ತಲೆನೋವು: ತಲೆನೋವು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಮಲೇರಿಯಾದಿಂದ ಉಂಟಾಗುವ ತಲೆನೋವು ತುಂಬಾ ತೀವ್ರವಾಗಿರುತ್ತದೆ. ಹಾಗೆಯೇ ನೀವು ಬಳಸುವ ಸಾಮಾನ್ಯ ತಲೆನೋವು ಮಾತ್ರೆಗಳಿಂದ ಗುಣವಾಗುವುದಿಲ್ಲ.
3. ಆಯಾಸ: ಜ್ವರ ಕಡಿಮೆಯಾದ ನಂತರವೂ ವಿಪರೀತ ಆಯಾಸ, ಬಲಹೀನತೆ, ಸಣ್ಣಪುಟ್ಟ ಕೆಲಸಗಳನ್ನೂ ಮಾಡಲು ಕಷ್ಟವಾಗುವುದನ್ನು ಮಲೇರಿಯಾದ ಲಕ್ಷಣಗಳೆಂದು ಪರಿಗಣಿಸಬೇಕು.
4. ಸ್ನಾಯು ಮತ್ತು ಕೀಲು ನೋವು: ಮಲೇರಿಯಾ ಸೋಂಕಿಗೆ ಒಳಗಾದ ನಂತರ ಅನೇಕ ಜನರು ಸ್ನಾಯು ಮತ್ತು ಕೀಲು ನೋವನ್ನು ಅನುಭವಿಸುತ್ತಾರೆ. ಇವು ಸಾಮಾನ್ಯವಾಗಿ ಜ್ವರ ಇದರ ಲಕ್ಷಣಗಳಾಗಿವೆ. ಹೆಚ್ಚಾದರೆ ಮಲೇರಿಯಾ ಇರುವ ಶಂಕೆ ಇರುತ್ತದೆ
5. ವಾಂತಿ, ವಾಕರಿಕೆ: ಮಲೇರಿಯಾವು ವಾಕರಿಕೆ, ವಾಂತಿ, ಹೊಟ್ಟೆ ನೋವಿನಂತಹ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ರೋಗಲಕ್ಷಣಗಳು ಕೆಲವೊಮ್ಮೆ ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು.
6. ಹಸಿವಿನ ಸಂದರ್ಭದಲ್ಲಿ ಮಲೇರಿಯಾದಿಂದ ಬಳಲುತ್ತಿರುವ ವ್ಯಕ್ತಿ ಇದ್ದಕ್ಕಿದ್ದಂತೆ ತನ್ನ ಹಸಿವು ಕಳೆದುಕೊಳ್ಳುತ್ತಾನೆ. ನಂತರ ತೂಕ ನಷ್ಟ ಮತ್ತು ಅಪೌಷ್ಟಿಕತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
7. ಕಾಮಾಲೆ: ಮಲೇರಿಯಾ ಸಮಸ್ಯೆ ತೀವ್ರತೆ ಹೆಚ್ಚಾದರೆ ಲಿವರ್ ಕೆಲಸ ಮಾಡುವುದಿಲ್ಲ. ಪರಿಣಾಮವಾಗಿ, ಕಾಮಾಲೆ ಹೆಚ್ಚಾಗುತ್ತದೆ. ಗಾಢ ಬಣ್ಣದ ಮೂತ್ರ ಮತ್ತು ಮಸುಕಾದ ಮಲದಿಂದ ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
8. ಗುಲ್ಮದ ಕಾರ್ಯಗಳು: ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಗುಲ್ಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಲೇರಿಯಾ ಸೋಂಕಿಗೆ ಒಳಗಾದಾಗ, ಗುಲ್ಮವು ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ ಮತ್ತು ಅಸ್ವಸ್ಥತೆ ಮತ್ತು ಸೂಕ್ಷ್ಮತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
9. ಡೆಲಿರಿಯಮ್, ಕಿರಿಕಿರಿ: ಮಲೇರಿಯಾ ತೀವ್ರವಾಗಿದ್ದಾಗ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಇದು ಮರೆವು, ಗೊಂದಲ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ನರಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆಗಳೂ ಇವೆ.
10. ರಕ್ತಹೀನತೆ: ಮಲೇರಿಯಾ ಪರಾವಲಂಬಿಗಳು ಕೆಂಪು ರಕ್ತ ಕಣಗಳನ್ನು ನಾಶಪಡಿಸುತ್ತದೆ. ಇದು ರಕ್ತಹೀನತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಲೂ ಬಹುದು .
ಮಲೇರಿಯಾವನ್ನು ತಡೆಯುವುದು ಹೇಗೆ?: ಮಲೇರಿಯಾವನ್ನು ತಡೆಗಟ್ಟಲು ನಾವು ಮಾಡಬೇಕಾದ ಮುಖ್ಯ ಕಾರ್ಯ ಎಂದರೆ ಸೊಳ್ಳೆ ಕಡಿತವನ್ನು ತಪ್ಪಿಸುವುದು. ಇದಕ್ಕಾಗಿ ರಾತ್ರಿ ವೇಳೆ ಸೊಳ್ಳೆ ಪರದೆ ಕಟ್ಟಿಕೊಂಡು ಸೊಳ್ಳೆಗಳಿಂದ ರಕ್ಷಣೆ ಮಾಡಿಕೊಳ್ಳುವುದು ಉತ್ತಮವಾದ ಪರಿಹಾರ. ಮೈತುಂಬ ಬಟ್ಟೆ ಧರಿಸುವುದು ಕ್ಷೇಮಕರ. ಸೊಳ್ಳೆಗಳ ಕಾಟ ವಿಪರೀತವಾಗಿದ್ದರೆ, ಸೊಳ್ಳೆ ಕಡಿತವನ್ನು ತಡೆಯಲು ಮಾರುಕಟ್ಟೆಯಲ್ಲಿ ಸಿಗುವ ಸುರಕ್ಷಿತ ಕ್ರೀಮ್ ಮತ್ತು ಸ್ಪ್ರೇಗಳನ್ನು ಬಳಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಕೂಡಾ.
ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ಒದಗಿಸಲಾದ ಎಲ್ಲಾ ಮಾಹಿತಿ, ವೈದ್ಯಕೀಯ ಸಲಹೆಗಳು ಮತ್ತು ಇತರ ಸಾಮಾನ್ಯ ಸಲಹೆಗಳು ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.