ನವದೆಹಲಿ: ಊಟವಾದ ಮೇಲೆ ವಾಕ್ ಮಾಡುವುದು ಅನೇಕರು ರೂಢಿಸಿಕೊಂಡಿರುವ ಅಭ್ಯಾಸ. ಇದರಿಂದ ಆಹಾರ ಸರಾಗವಾಗಿ ಜೀರ್ಣವಾಗುವುದಷ್ಟೇ ಅಲ್ಲ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ನಿದ್ರೆ ಸಮಸ್ಯೆ ಕೂಡ ನಿರ್ವಹಣೆ ಮಾಡಬಹುದು ಎನ್ನುತ್ತಾರೆ ತಜ್ಞರು.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಹೈದರಾಬಾದ್ನ ಇಂದ್ರಪ್ರಸ್ಥ ಅಪೊಲೋ ಆಸ್ಪತ್ರೆಯ ಡಾ.ಸುಧೀರ್ ಕುಮಾರ್, ತಿಂಡಿ ಅಥವಾ ಊಟದ ಬಳಿಕ ಬೆಳಗ್ಗೆ ಅಥವಾ ಸಂಜೆ ವಾಕ್ ಮಾಡುವುದು ಆರೋಗ್ಯಕರ ಅಭ್ಯಾಸ ಎಂದಿದ್ದಾರೆ. ಅದರಲ್ಲೂ ಊಟವಾದ ಬಳಿಕ ನಡೆಯುವ ನಡಿಗೆ ಸುರಕ್ಷಿತ ಮತ್ತು ಈ ಸಣ್ಣ ನಡಿಗೆ ಅನೇಕ ಆರೋಗ್ಯ ಸಂಬಂಧಿತ ಪ್ರಯೋಜನ ಹೊಂದಿದೆ ಎಂದಿದ್ದಾರೆ.
ಡಾ. ಸುಧೀರ್ ಹೇಳುವಂತೆ, ಮಧುಮೇಹಿ ಸೇರಿದಂತೆ ನಿರ್ದಿಷ್ಟ ಜನರಿಗೆ ಈ ವಾಕಿಂಗ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಮಧುಮೇಹಿಗಳನ್ನು ರಕ್ತದ ಗ್ಲುಕೋಸ್ ಮಟ್ಟವಾದ ಗ್ಲೇಸೆಮಿಕ್ ನಿಯಂತ್ರಣ ಮಾಡುತ್ತದೆ. ಅಲ್ಲದೇ, ಇದು ಊಟಕ್ಕೂ ಮುನ್ನ ಮತ್ತು ನಂತರದಲ್ಲಿ ಇರುವ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಕೊಂಚ ಬಿರುಸು ನಡಿಗೆ ಹೆಚ್ಚು ಪ್ರಯೋಜನ ನೀಡುತ್ತದೆ ಎನ್ನುತ್ತಾರೆ ವೈದ್ಯರು.
ಪ್ರತಿನಿತ್ಯ 30 ನಿಮಿಷದ ವಾಕಿಂಗ್ ಅದರಲ್ಲಿ ಊಟವಾದ ಬಳಿಕ 15 ನಿಮಿಷದ ನಡಿಗೆ ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ ಸಾಮಾನ್ಯ ಜನರಲ್ಲಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ತೂಕ ಇಳಿಕೆಗೂ ಸಹಾಯಕವಾಗುತ್ತದೆ. ನಡಿಗೆಯು ಬಿಎಂಐ ಮಟ್ಟವನ್ನು ಗಮನಾರ್ಹವಾಗಿ ಇಳಿಕೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಊಟವಾದ ಬಳಿಕದ ವಾಕಿಂಗ್ ಸಿಸ್ಟೊಲಿಕ್ ಮತ್ತು ಡೈಸ್ಟೊಲಿಕ್ ಬಿಪಿಯನ್ನು ಕಡಿಮೆ ಮಾಡುತ್ತದೆ. 30 ರಿಂದ 60 ನಿಮಿಷದ ಒಂದು ದೀರ್ಘ ನಡಿಗೆ ಸೆಷನ್ ಬಿಪಿಯನ್ನು ಕಡಿಮೆ ಮಾಡುತ್ತದೆ. ಒಂದು ಗಂಟೆಯ ನಡಿಗೆ ದೀರ್ಘವಾದಲ್ಲಿ ಅದನ್ನು ಮೂರು ಭಾಗವಾಗಿ ವಿಂಗಡಿಸಬಹುದು. ದಿನದ ಮೂರು ಹೊತ್ತಿನ ಆಹಾರ ಸೇವನೆ ಮುನ್ನ ಮತ್ತು ಬಳಿಕ 10 ನಿಮಿಷದ ವಾಕಿಂಗ್ ರೂಢಿಸಿಕೊಳ್ಳುವುದು ಉತ್ತಮ, ನಡಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಉಬ್ಬರ ಕಡಿಮೆ ಮಾಡುತ್ತದೆ. ಜೊತೆಗೆ ಹೊಟ್ಟೆ ಕರುಳಿನಲ್ಲಿ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.
ರಾತ್ರಿ ಊಟದ ಬಳಿಕದ ಸಣ್ಣ ನಡಿಗೆ ನಿದ್ರೆಯ ಗುಣಮಟ್ಟವನ್ನು ಸುಧಾರಣೆ ಮಾಡುತ್ತದೆ. ನಡಿಗೆ ಎಂಬುದು ಆರೋಗ್ಯದ ಮೇಲೆ ಹಲವು ಪ್ರಯೋಜನ ಬೀರುವ ಅತ್ಯುತ್ತಮ ವ್ಯಾಯಾಮವಾಗಿದೆ. ಇದು ಆರೋಗ್ಯಯುತ ಡಯಟ್, ಉತ್ತಮ ನಿದ್ರೆ ಮತ್ತು ದೇಹ ಬಲಗೊಳಿಸುವಿಕೆ ಅಭ್ಯಾಸ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. (ಐಎಎನ್ಎಸ್)
ಇದನ್ನೂ ಓದಿ: ವಾಕಿಂಗ್ ಅಥವಾ ಮೆಟ್ಟಿಲು ಹತ್ತುವುದು; ಯಾವುದರಿಂದ ಬೇಗ ತೂಕ ಕಳೆದುಕೊಳ್ಳಬಹುದು?: ಇವೆರಡರಲ್ಲಿ ಯಾವುದು ಬೆಸ್ಟ್?