ಸಿಡ್ನಿ: ನಿಯಮಿತವಾಗಿ ಹೆಚ್ಚು ಸಂಸ್ಕರಿಸಿದ ಅಥವಾ ಅಲ್ಟ್ರಾ ಪ್ರೊಸೆಸ್ಡ್ ಆಹಾರಗಳ ಸೇವನೆ ಮಾಡುವುದರಿಂದ ಕ್ಯಾನ್ಸರ್, ಹೃದಯ ಮತ್ತು ಶ್ವಾಸಕೋಶ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಅಕಾಲಿಕ ಸಾವು ಸೇರಿದಂತೆ 32 ರೋಗಗಳ ಅಪಾಯಗಳು ಹೆಚ್ಚುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.
ಏನಿದು ಅಲ್ಟ್ರಾ ಪ್ರೊಸೆಸ್ಡ್ ಆಹಾರ?: ಬೇಯಿಸಿದ ಪ್ಯಾಕೇಜ್ ಆಹಾರ ಮತ್ತು ಸ್ನಾಕ್ಗಳು, ಪಾನೀಯಗಳು, ಸಕ್ಕರೆ ಸೆರೆಲ್ಸ್, ರೆಡಿ ಟೂ ಈಟ್ ಅಥವಾ ಶಾಖ ಉತ್ಪನ್ನಗಳು ಅನೇಕ ಬಾರಿ ಭಾರಿ ಪ್ರಮಾಣದಲ್ಲಿ ಕೈಗಾರಿಕಾ ಪ್ರಕ್ರಿಯೆಗೆ ಒಳಗಾಗುತ್ತವೆ. ಈ ಸಂದರ್ಭದಲ್ಲಿ ಇವುಗಳಿಗೆ ಬಣ್ಣ, ಎಮಲ್ಸಿಫೈಯರ್ಗಳು, ಸುವಾಸನೆಗಳು ಮತ್ತಿತರ ಅಂಶಗಳನ್ನು ಸೇರಿಸಲಾಗುತ್ತದೆ. ಈ ಉತ್ಪನ್ನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ, ಕೊಬ್ಬು ಅಥವಾ ಉಪ್ಪು ಇರುತ್ತದೆ. ಇವು ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಮತ್ತು ಫೈಬರ್ ಒಳಗೊಂಡಿರುತ್ತವೆ.
ಆಸ್ಟ್ರೇಲಿಯಾ, ಅಮೆರಿಕ, ಫ್ರಾನ್ಸ್ ಮತ್ತು ಐರ್ಲೆಂಡ್ನ ಅಂತಾರಾಷ್ಟ್ರೀಯ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಈ ರೀತಿ ಹೆಚ್ಚು ಸಂಸ್ಕರಿತ ಆಹಾರ ಸೇವನೆಯಿಂದ ಹೃದಯ ರಕ್ತನಾಳದ ಸಮಸ್ಯೆ ಉದ್ಭವಿಸಿ ಸಾವಿನ ಅಪಾಯ ಹೆಚ್ಚಾಗುವ ಸಾಧ್ಯತೆ ಶೇ.50ರಷ್ಟಿದೆ ಎಂಬುದನ್ನು ಸಾಕ್ಷ್ಯಸಮೇತ ಮನವರಿಕೆ ಮಾಡಿದೆ. ಅಷ್ಟೇ ಅಲ್ಲ, ಈ ರೀತಿಯ ಆಹಾರಗಳು ಶೇ.48-53ರಷ್ಟು ಆತಂಕ ಮತ್ತು ಮಾನಸಿಕ ಅಸ್ವಸ್ಥತೆ ಅಪಾಯ ಹಾಗು ಶೇ.12ರಷ್ಟು ಟೈಪ್ 2 ಮಧುಮೇಹದ ಅಪಾಯವನ್ನೂ ಹೊಂದಿವೆ.
ಬಿಎಂಜೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಇದರ ಫಲಿತಾಂಶವನ್ನು ಉನ್ನತ ಮಟ್ಟದ ಸಾಕ್ಷ್ಯ ಸಾರಾಂಶದ ಆಧಾರಿತವಾಗಿ ತಯಾರಿಸಲಾಗಿದೆ. ಅಲ್ಲದೇ 10 ಮಿಲಿಯನ್ ಭಾಗಿದಾರರನ್ನೊಳಗೊಂಡ 14 ರಿವ್ಯೂ ಲೇಖನಗಳನ್ನು ಪಡೆದು 45 ವಿಧದ ಮೆಟಾ ವಿಶ್ಲೇಷಣೆಯನ್ನೂ ನಡೆಸಲಾಗಿದೆ.
ಅಧ್ಯಯನದ ವೇಳೆ ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆಯು ಶೇ.21ರಷ್ಟು ಯಾವುದೇ ರೀತಿಯ ಸಾವಿನ ಅಪಾಯದೊಂದಿಗೆ ಸಂಬಂಧ ಹೊಂದಿದೆ. ಶೇ.40-66ರಷ್ಟು ಹೃದಯ ಸಂಬಂಧಿ ಸಾವಿನ, ಸ್ಥೂಲಕಾಯ, ಟೈಪ್ 2 ಮಧುಮೇಹ ಮತ್ತು ನಿದ್ರಾ ಸಮಸ್ಯೆ ಮತ್ತು ಶೇ.22ರಷ್ಟು ಖಿನ್ನತೆ ಅಪಾಯ ಹೊಂದಿದೆ ಎಂದು ಅಧ್ಯಯನ ತೋರಿಸಿದೆ.
ಈ ಅಧ್ಯಯನವು ಹೆಚ್ಚು ಸಂಸ್ಕರಿತ ಆಹಾರ ಸೇವನೆಯನ್ನು ಕಡಿಮೆಗೊಳಿಸುವ ಗುರಿ ಹೊಂದಿದ್ದು, ಸಾರ್ವಜನಿಕ ಆರೋಗ್ಯ ಕುರಿತ ಕ್ರಮಗಳು ಮತ್ತು ಸುಧಾರಣೆಗೆ ಆಗ್ರಹಿಸಿದೆ ಎಂದು ಆಸ್ಟ್ರೇಲಿಯಾದ ಡಿಕಿನ್ ಯುನಿವರ್ಸಿಟಿಯ ಸಹಾಯಕ ಸಂಶೋಧಕ ಮೆಲಿಸ್ಸಾ ಎಂ.ಲೇನ್ ತಿಳಿಸಿದ್ದಾರೆ.
ಇದಕ್ಕಿಂತ ಹೆಚ್ಚಾಗಿ ಹೆಚ್ಚು ಸಂಸ್ಕರಿತ ಆಹಾರಗಳು ಆರೋಗ್ಯ ಮತ್ತು ಮನುಷ್ಯನ ಜೀವಿತಾವಧಿಗೆ ಹಾನಿ ಮಾಡುತ್ತದೆ. ಹೀಗಾಗಿ ಸಾರ್ವಜನಿಕ ನೀತಿ ಮತ್ತು ಹೆಚ್ಚು ಸಂಸ್ಕರಿತ ಆಹಾರದ ಕುರಿತು ಕ್ರಮಕ್ಕೆ ಕರೆ ನೀಡಲಾಗಿದೆ.
ಇಂತಹ ಆಹಾರಗಳ ಮೇಲೆ ಲೇಬಲ್ ಹಾಕುವುದು, ಶಾಲೆ ಮತ್ತು ಆಸ್ಪತ್ರೆಯ ಬಳಿ ಇದರ ಮಾರಾಟ ಮತ್ತು ಜಾಹೀರಾತಿಗೆ ನಿಯಂತ್ರಣವನ್ನು ವರದಿ ಒತ್ತಾಯಿಸಿದೆ. ಕಡಿಮೆ ಬೆಲೆಯಲ್ಲಿ ಮತ್ತು ಸುಲಭವಾಗಿ ಹೆಚ್ಚು ಸಂಸ್ಕರಿತ ಆಹಾರಗಳಿಗೆ ಬದಲಾಗಿ, ಕಡಿಮೆ ಸಂಸ್ಕರಿತ ಅಥವಾ ಪ್ರೊಸೆಸ್ ಮಾಡಿಲ್ಲದ ಆಹಾರಕ್ಕೆ ಕ್ರಮಕ್ಕೆ ಒತ್ತಾಯಿಸಲಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ನಿದ್ರಾಹೀನತೆಗೆ ಕಾರಣವಾಗಲಿದೆ ಎನರ್ಜಿ ಡ್ರಿಂಕ್; ಸಂಶೋಧನೆ