ಬೆಂಗಳೂರು: ಬೇಸಿಗೆ ರಜೆ ಬಂದರೆ ಸಾಕು ಜನರು ಪರಿವಾರದ ಜತೆ ಊರುಗಳಿಗೆ, ಹಲವು ಪ್ರೇಕ್ಷಣೀಯ ಸ್ಥಳಗಳತ್ತ ಪ್ರಯಾಣಿಸುತ್ತಾರೆ. ಆದರೆ, ಈ ಬಾರಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ತಾಪಮಾನದ ಕಾರಣ ಕೆಲವರಿಗೆ ಟ್ರಾವೆಲರ್ ಡಯೇರಿಯಾ ಸಮಸ್ಯೆ ಎದುರಾಗುವ ಸಂಭವವಿದೆ. ಇದರಿಂದ ದೂರದ ಊರಿಗೆ ಪ್ರಯಾಣಿಸಲು ಹಿಂದೆ ಮುಂದೆ ನೋಡುವಂತಾಗಿದೆ.
ಕೆಲವರಿಗೆ ಪ್ರಯಾಣಿಸುವಾಗ ಟ್ರಾವೆಲರ್ ಡಯೇರಿಯಾ ಉಂಟಾದರೆ ಇನ್ನೂ ಕೆಲವರಿಗೆ ಸ್ಥಳ ಬದಲಾವಣೆಯಾದ ಕಾರಣದಿಂದಲೂ ಈ ಖಾಯಿಲೆ ಉಂಟಾಗ ಬಹುದಾಗಿದೆ. ಇದರಿಂದ ತಮ್ಮ ತಮ್ಮ ನೆಚ್ಚಿನ ಸ್ಥಳಗಳಿಗೆ ಹೋಗಲು ರೂಪಿಸಿರುವ ಪ್ಲಾನ್‌ಗಳು ಈ ಬಾರಿ ಫ್ಲಾಪ್ ಆಗುವ ಸಂಭವ ಎದುರಾಗಲಿದೆ.
ಪ್ರಯಾಣದ ಖುಷಿಯ ಜತೆ ನಾವು ಈ ಬಾರಿ ನಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆಯೂ ಕೊಂಚ ಗಮನ ಹರಿಸುವುದು ಬಹುಮುಖ್ಯವಾಗಿದೆ. ಬೇರೆ ಸ್ಥಳಗಳಿಗೆ ಪ್ರಯಾಣಿಸುವಾಗ ಹೊಟ್ಟೆಗೆ ಯಾವುದೇ ಆಹಾರ ತೆಗೆದುಕೊಳ್ಳದೇ ಕೂಡ ಜನರು ಪ್ರಯಾಣಿಸುತ್ತಾರೆ. ಇದು ಸಹ ಟ್ರಾವೆಲರ್ ಡಯೇರಿಯಾಗೆ ಕಾರಣವಾಗಬಹುದಾಗಿದೆ.
ಈ ರೋಗ ಹೇಗೆ ಸಂಭವಿಸುತ್ತದೆ?: ದಿನಕ್ಕೆ ಮೂರು ಬಾರಿಗಿಂತಲೂ ಹೆಚ್ಚು ಬಾರಿ ಸಡಿಲವಾದ ನೀರಿನಂಶ ಇರುವ ಮಲ ವಿಸರ್ಜನೆ, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ ಮತ್ತು ಜ್ವರದಂತಹ ಸಾಮಾನ್ಯ ರೋಗ ಲಕ್ಷಣಗಳಿಂದ ಈ ಟ್ರಾವೆಲರ್ ಡಯೇರಿಯಾ ಸಂಭವಿಸಬಹುದಾಗಿದೆ. ಪ್ರಮುಖವಾಗಿ ಮಧುಮೇಹ, ದೀರ್ಘಕಾಲದ ಪಿತ್ತ ತೊಂದರೆ, ಮೂತ್ರಪಿಂಡ ಮತ್ತು ಹೃದಯದ ಖಾಯಿಲೆ ಇರುವವರಿಗೆ ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ಜನರನ್ನು ಈ ಖಾಯಿಲೆ ಕಾಡಲಿದೆ. ಎರಡಕ್ಕಿಂತ ಹೆಚ್ಚು ದಿನ ಡಯೇರಿಯಾ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವ ಅಗತ್ಯತೆ ಹೆಚ್ಚಾಗಿರುತ್ತದೆ.
ಟ್ರಾವೆಲರ್ ಡಯೇರಿಯಾ ಎಂದರೇನು?: ಟ್ರಾವೆಲರ್ ಡಯೇರಿಯಾ ಜೀರ್ಣಾಂಗದ ಅಸ್ವಸ್ಥತೆಯಾಗಿದ್ದು, ಇದು ಸಾಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಅಥವಾ ನಂತರ ಲೂಸ್ ಮೋಷನ್ ಮತ್ತು ಹೊಟ್ಟೆ ಸೆಳೆತವನ್ನು ಉಂಟುಮಾಡುತ್ತದೆ. ಪ್ರಯಾಣದ ಒತ್ತಡದಿಂದ ಅಥವಾ ಆಹಾರದಲ್ಲಿನ ಬದಲಾವಣೆಯಿಂದ ಈ ರೋಗ ಕಂಡು ಬರಬಹುದು. ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ವೈರಸ್‌ಗಳು, ಪ್ಯಾರಸೈಟ್ಗಳಿಂದ ಇದು ಉಂಟಾಗುತ್ತದೆ. ಮಲದಲ್ಲಿ ಇರುವ ಜೀವಿಗಳಿಂದ ಕಲುಷಿತಗೊಂಡ ಆಹಾರ ಅಥವಾ ನೀರು ಸೇವಿಸಿದರೆ ಈ ರೋಗ ಸಂಭವಿಸುತ್ತದೆ ಎಂದು ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ವೈದ್ಯೆ ಡಾ ಎಸ್.ಶ್ರೀವಿದ್ಯಾ ರೋಗದ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಈ ರೋಗದ ಲಕ್ಷಣಗಳೇನು?: ಟ್ರಾವೆಲರ್ ಡಯೇರಿಯಾ ಪ್ರಮುಖ ಲಕ್ಷಣಗಳಾದ ಒಣಗಿದ ಬಾಯಿ, ತೀವ್ರವಾದ ವಾಯಾರಿಕೆ ಮತ್ತು ಕಡಿಮೆ ಮೂತ್ರ ವಿಸರ್ಜನೆ, ತೀವ್ರ ಹೊಟ್ಟೆ ನೋವುಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧ ಪಡೆಯುವುದು ಅವಶ್ಯಕ ಎಂದು ಹೇಳಿದ್ದಾರೆ.
ಮುನ್ನೆಚ್ಚರಿಕೆಗಳೇನು?: ರೋಗ ಲಕ್ಷಣಗಳು ಕಂಡು ಬಂದರೆ ಬೀದಿ ಬದಿಯ ವ್ಯಾಪಾರಿಗಳು ತಯಾರಿಸಿದ ಆಹಾರವನ್ನು ತಿನ್ನಬಾರದು, ಐಸ್‌ಕ್ರೀಂ ಸೇರಿದಂತೆ ಅನ್ - ಪಾಶ್ಚರೈಸ್ಡ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡಬಾರದು ಈ ಸಮಯದಲ್ಲಿ ಸರಿಯಾಗಿ ಬೇಯಿಸದ ಆಹಾರ ಮತ್ತು ಶುದ್ದೀಕರಿಸದ ನೀರು ಕುಡಿಯಬೇಕು. ಹೊರಗಡೆ ಕತ್ತರಿಸಿದ ಹಣ್ಣುಗಳು, ಸಲಾಡ್‌ಗಳನ್ನು ತಿನ್ನಬಾರದು ಹಾಗೂ ಚೆನ್ನಾಗಿ ಕೈ ತೊಳೆಯುವುದು ಉತ್ತಮ ಎಂದು ಡಾ ಎಸ್.ಶ್ರೀವಿದ್ಯಾ ಸಲಹೆ ನೀಡಿದ್ದಾರೆ.