ನವದೆಹಲಿ: 1950ರಲ್ಲಿ 6.2ರಷ್ಟಿದ್ದ ಭಾರತದ ಫಲವತ್ತತೆಯ ದರ 2021ರಲ್ಲಿ ಕೇವಲ 2ಕ್ಕೆ ಕುಸಿದಿದೆ. ಇದು 2050 ಮತ್ತು 2100ರಲ್ಲಿ ಕ್ರಮವಾಗಿ 1.29 ಮತ್ತು 1.04ಕ್ಕೆ ಇಳಿಕೆಯಾಗಲಿದೆ ಎಂದು ದಿ ಲ್ಯಾನ್ಸೆಟ್ ಜರ್ನಲ್ ವರದಿ ಎಚ್ಚರಿಸಿದೆ.
ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಈ ಅಂಕಿಅಂಶಗಳು ದಾಖಲಾಗಿವೆ. 1950ರಲ್ಲಿ ಒಟ್ಟು ಫಲವತ್ತತೆಯ ದರ (ಟಿಎಫ್ಆರ್) ಪ್ರತೀ ಮಹಿಳೆಗೆ 4.8 ಇತ್ತು. 2021ರಲ್ಲಿ 2.2ಕ್ಕೆ ಇಳಿದಿದೆ. ಈ ಅಂಕಿ ಅಂಶ 2050 ಮತ್ತು 2100ರಲ್ಲಿ ಕ್ರಮವಾಗಿ 1.8 ಮತ್ತು 1.6ಕ್ಕೆ ಇಳಿಯಲಿವೆ ಎಂದು ವರದಿ ಹೇಳಿದೆ.
2021ರಲ್ಲಿ ಜಗತ್ತಿನಾದ್ಯಂತ 12.9 ಕೋಟಿ ಜನನವಾಗಿದೆ. ಭಾರತದಲ್ಲಿ 1950 ಮತ್ತು 2021ರಲ್ಲಿ ಕ್ರಮವಾಗಿ 1.6 ಕೋಟಿ ಮತ್ತು 2.2 ಕೋಟಿ ಜನನವಾಗಿತ್ತು. ಈ ಅಂಕಿಸಂಖ್ಯೆ 2050ರಲ್ಲಿ 1.3 ಕೋಟಿಗೆ ಇಳಿಯಲಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
ವಿಶೇಷವಾಗಿ, ಪಶ್ಚಿಮ ಮತ್ತು ಪೂರ್ವ ಉಪ ಸಹರಾದ ದೇಶಗಳು ಮತ್ತು ಭೂ ಪ್ರದೇಶಗಳು ಹೆಚ್ಚು ಫಲವತ್ತತೆ ಪ್ರಮಾಣ ಹೊಂದಿದೆ. ಬಹುತೇಕ ಬಡ ಪ್ರದೇಶದಲ್ಲಿ ಹೆಚ್ಚು ಮಕ್ಕಳ ಜನನವಾಗಲಿದೆ.
ಹದಗೆಡುತ್ತಿರುವ ಹವಾಮಾನ ಬದಲಾವಣೆಯ ಜತೆಗೆ ಅಧಿಕ ಫಲವತ್ತತೆ ಹೊಂದಿರುವ ಕಡಿಮೆ ಆದಾಯವಿರುವ ದೇಶಗಳು ಕೂಡ ಆಗಿಂದಾಗ್ಗೆ ಪ್ರವಾಹ, ಬರ ಮತ್ತು ವಿಪರೀತ ಶಾಖದಂತಹ ಪರಿಸ್ಥಿತಿ ಹೊಂದಿವೆ. ಇದು ಆಹಾರ, ನೀರು ಮತ್ತು ಸಂಪನ್ಮೂಲ ಸುರಕ್ಷತೆಗೆ ಬೆದರಿಕೆ ಒಡ್ಡಲಿದೆ. ಶಾಖ ಸಂಬಂಧಿತ ಅನಾರೋಗ್ಯ ಮತ್ತು ಸಾವುಗಳ ಏರಿಕೆಯನ್ನೂ ಹೊಂದಿದೆ. ಫಲವತ್ತತೆಯು ದೇಶದ ಆರ್ಥಿಕತೆ, ಭೌಗೋಳಿಕ ರಾಜಕೀಯ, ಆಹಾರ ಭದ್ರತೆ, ಆರೋಗ್ಯ ಮತ್ತು ಪರಿಸರ ಮೇಲೂ ತೀವ್ರ ಪರಿಣಾಮ ಬೀರುತ್ತದೆ.
ಭಾರತದ ಫಲವತ್ತತೆಯ ಕುರಿತು ಪ್ರತಿಕ್ರಿಯಿಸಿರುವ ಪಾಪ್ಯುಲೇಷನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕಿ ಪೂನಂ ಮುತರ್ಜೆ, ಇದು ಭಾರತದ ಮೇಲೆ ಆಳವಾದ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಹಿರಿಯ ವಯಸ್ಕರ ಸಂಖ್ಯೆ ಹೆಚ್ಚಲಿದ್ದು, ಕಾರ್ಮಿಕ ಬಲದ ಕೊರತೆ, ಲಿಂಗ ಆದ್ಯತೆಯಿಂದ ಸಾಮಾಜಿಕ ಅಸಮಾತೋಲನದಂತಹ ಸವಾಲುಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ. (ಐಎಎನ್‌ಎಸ್)
ಇದನ್ನೂ ಓದಿ: ಕರ್ನಾಟಕದಲ್ಲಿ ಇಳಿಕೆ ಕಾಣುತ್ತಿರುವ ಫಲವತ್ತತೆಯ ದರ; ಇದು ಚಿಂತಿಸುವ ವಿಚಾರ ಎಂದ ತಜ್ಞರು