ನಮ್ಮ ದಿನನಿತ್ಯದ ಖಾದ್ಯಗಳ ರುಚಿ ಹೆಚ್ಚಿಸೋ ಸಲುವಾಗಿ ವಿವಿಧ ರೀತಿಯ ಮಸಾಲೆಗಳನ್ನು ಬಳಸುತ್ತೇವೆ. ಅದರಲ್ಲಿ ಕೊತ್ತಂಬರಿ ಸೊಪ್ಪು, ಪುಡಿ ಕೂಡ ಒಂದು. ಮಾಂಸಾಹಾರಿ ಖಾದ್ಯಗಳಲ್ಲಿ ಕೊತ್ತಂಬರಿ ಪುಡಿ ಇರಲೇಬೇಕು ಅಂತಾರೆ ಹೆಚ್ಚಿನವರು. ಆದರೆ, ಕೊತ್ತಂಬರಿ ಸೊಪ್ಪು ಅಥವಾ ಬೀಜ ಖಾದ್ಯಗಳಿಗೆ ರುಚಿ ಮತ್ತು ಪರಿಮಳ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು ಎನ್ನುತ್ತಾರೆ ತಜ್ಞರು. ಅದರಲ್ಲೂ, ಪ್ರತಿದಿನ ಒಂದು ಕಪ್ ನೆನೆಸಿಟ್ಟ ಕೊತ್ತಂಬರಿಯ ನೀರನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನೆನೆಸಿದ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು? ಎಂಬುದನ್ನು ತಿಳಿಯೋಣ ಬನ್ನಿ.
ರೋಗನಿರೋಧಕ ಶಕ್ತಿ ಹೆಚ್ಚಳ: ನಿತ್ಯ ನೆನೆಸಿದ ಕೊತ್ತಂಬರಿ ಬೀಜದ ನೀರನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ರೋಗನಿರೋಧಕದಂತಹ ಅಂಶಗಳು ಸಮೃದ್ಧವಾಗಿದೆ. ದೇಹದಲ್ಲಿನ ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುವುದಲ್ಲದೇ, ಇಮ್ಯುನಿಟಿ ಸಿಸ್ಟಮ್ ಬಲಪಡಿಸುತ್ತದೆ. ಪರಿಣಾಮ, ವಿವಿಧ ಸೋಂಕುಗಳು ಮತ್ತು ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ.
ಕೇಶರಾಶಿಯನ್ನು ಬಲಪಡಿಸುತ್ತದೆ: ಕೊತ್ತಂಬರಿಯಲ್ಲಿ ವಿಟಮಿನ್ ಕೆ, ಸಿ ಮತ್ತು ಎ ಅಂತಹ ಗುಣಗಳು ಸಮೃದ್ಧವಾಗಿದೆ. ಕೂದಲನ್ನು ಬಲಪಡಿಸಲು ಈ ಜೀವಸತ್ವಗಳು ಅವಶ್ಯಕ. ನಿತ್ಯ ಒಂದು ಲೋಟ ನೆನೆಸಿಟ್ಟ ಕೊತ್ತಂಬರಿಯ ನೀರನ್ನು ಕುಡಿಯುವುದರಿಂದ ಕೂದಲಿನ ಬೆಳವಣಿಗೆ ಉತ್ತಮವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೂದಲು ಉದುರುವಿಕೆ, ಒಡೆಯುವಿಕೆಯಂತಹ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಪೂರಕ: ನಿತ್ಯ ಮುಂಜಾನೆ ಒಂದು ಲೋಟ ನೆನೆಸಿದ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಚಯಾಪಚಯ ಸುಧಾರಿಸುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಇದಲ್ಲದೇ, ತೂಕ ನಷ್ಟಕ್ಕೂ ಸಹಾಯವಾಗುತ್ತದೆ.
2018ರಲ್ಲಿ 'ಫುಡ್ ಫಂಕ್ಷನ್' ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ನೆನೆಸಿದ ಕೊತ್ತಂಬರಿ ಬೀಜಗಳ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸಲು ಮತ್ತು ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇರಾನ್‌ನ ಶಿರಾಜ್ ವಿಶ್ವವಿದ್ಯಾಲಯದ ಖ್ಯಾತ ನ್ಯೂಟ್ರಿಷಿಯನಿಸ್ಟ್ ಡಾ. ಮೆಹದಿ ಅಬ್ಬಾಸಿ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಪ್ರತಿದಿನ ನೆನೆಸಿದ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬುವುದು, ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಶುಗರ್ ಕಂಟ್ರೋಲ್: ಕೊತ್ತಂಬರಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.
ಕಿಡ್ನಿ ರಕ್ಷಣೆ: ಪ್ರತಿದಿನ ಒಂದು ಲೋಟ ನೆನೆಸಿದ ಕೊತ್ತಂಬರಿಯ ನೀರನ್ನು ಕುಡಿಯುವುದು ಮೂತ್ರಪಿಂಡದ ಕಾರ್ಯ ಸುಧಾರಿಸುತ್ತದೆ. ಮೂತ್ರನಾಳದ ಸೋಂಕಿನ ವಿರುದ್ಧವೂ ಹೋರಾಡಲು ಸಹಾಯ ಮಾಡುತ್ತದೆ.
ಇವುಗಳಲ್ಲದೇ, ಕೊತ್ತಂಬರಿ ನೀರು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ನಿರ್ಜಲೀಕರಣದಂತಹ ಸಮಸ್ಯೆಗಳನ್ನು ತಡೆಯುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂಡ ಈ ನೀರಿನಲ್ಲಿ ಸಮೃದ್ಧವಾಗಿವೆ. ಇದು ಮೊಡವೆಗಳನ್ನು ಕಡಿಮೆ ಮಾಡಿ, ಮೃದು ತ್ವಚೆ ಹೊಂದಲು ಉಪಯುಕ್ತವಾಗಿದೆ ಎನ್ನುತ್ತಾರೆ ತಜ್ಞರು.
ತಯಾರಿ ಹೇಗೆ? ಮೊದಲು ಒಂದು ಚಮಚ ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ರಾತ್ರಿ ಮಲಗುವ ಮುನ್ನ ಒಂದು ಕಪ್ ಕುಡಿಯುವ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಕೊತ್ತಂಬರಿಯನ್ನು ಸೋಸಿ ಆ ನೀರನ್ನು ಕುಡಿಯಿರಿ.
ಸೂಚನೆ: ಇಲ್ಲಿ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ-ಆರೋಗ್ಯ ವೃತ್ತಿಪರರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಯಾವುದಕ್ಕೂ ನಿಮ್ಮ ಆಪ್ತ ವೈದ್ಯರನ್ನು ಸಂಪರ್ಕಿಸಿ ಮುಂದುವರೆಯುವುದು ಉತ್ತಮ.