ನ್ಯೂಯಾರ್ಕ್: ಊಟದ ನಡುವೆ ಹಸಿವಾದಾಗ ಸೇವಿಸುವ ಸ್ನ್ಯಾಕ್ಸ್ಗಳು ತೂಕ ಹೆಚ್ಚಳದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದೇ ಕಾರಣಕ್ಕೆ ಕುರುಕಲು, ಅನಾರೋಗ್ಯಕರ ಸ್ನ್ಯಾಕ್ಸ್ ಸೇವಿಸುವ ಬದಲಾಗಿ ಈ ಟ್ರೀನಟ್ಸ್ ಸೇವನೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ
ಪಿಸ್ತಾ, ಬಾದಾಮಿಯಂತಹ ಒಣಹಣ್ಣುಗಳು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುವುದಿಲ್ಲ. ಅಲ್ಲದೇ, ಇದು ತೂಕ ನಿರ್ವಹಣೆಯಲ್ಲೂ ಸಹಾಯ ಮಾಡಿ, ದೇಹಕ್ಕೆ ಶಕ್ತಿಯ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಧ್ಯಯನವು ತಿಳಿಸಿದೆ. ಈ ಒಣ್ಣ ಹಣ್ಣುಗಳಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನ ಅಂಶಗಳಿವೆ. ಇದರಿಂದ ತೂಕ ಹೆಚ್ಚಳವಾಗುತ್ತದೆ ಎಂಬುದು ಅನೇಕರಲ್ಲಿ ಇರುವ ತಪ್ಪು ಕಲ್ಪನೆಯಾಗಿದೆ. ಆದರೆ, ಅನೇಕ ಅಧ್ಯಯನಗಳು ತಿಳಿಸುವಂತೆ ಈ ಒಣ್ಣಗಳನ್ನು ನಿತ್ಯ ಸೇವಿಸುವುದರಿಂದ ಪೋಷಕಾಂಶಗಳು ಲಭ್ಯವಾಗುವುದರ ಜೊತೆಗೆ ಅನೇಕ ಪ್ರಯೋಜನಗಳಿವೆ.
ಅಮೆರಿಕದ ವಾಂಡರ್ಬಿಲ್ಟ್ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರದ ಸಂಶೋಧಕರು ಇದಕ್ಕಾಗಿ 84ಜನರನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. 22 ರಿಂದ 36 ವರ್ಷದ ವಯೋಮಾನದ ಇವರಲ್ಲಿ ಅಧಿಕ ರಕ್ತದೊತ್ತಡ, ಅಧಿಕ ರಕ್ತದ ಗ್ಲುಕೋಸ್, ಅಧಿಕ ದೇಹದ ಕೊಬ್ಬಿನಂತಹ ಒಂದಲ್ಲ ಒಂದು ಸಮಸ್ಯೆ ಪತ್ತೆಯಾಗಿದೆ. ಇವರಲ್ಲಿ ಒಂದು ಗುಂಪಿಗೆ ನಿತ್ಯ ಸ್ನ್ಯಾಕ್ಸ್ ಆಗಿ ಒಂದು ಔನ್ಸ್ ಅಷ್ಟು ಉಪ್ಪು ರಹಿತ ಪಿಸ್ತಾ ಮತ್ತೊಂದು ಗುಂಪಿಗೆ ಕಾರ್ಬೋಹೈಡ್ರೇಟ್ ಸ್ನ್ಯಾಕ್ಸ್ ಅನ್ನು 16 ವಾರಗಳ ಕಾಲ ದಿನಕ್ಕೆ ಎರಡು ಬಾರಿ ನೀಡಲಾಯಿತು.
ಅವರ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಸಂಶೋಧಕರು ಗಮನಿಸಿದಾಗ ಮಹಿಳೆಯರಲ್ಲಿ ಶೇ 67ರಷ್ಟು ಮತ್ತು ಪುರಷರಲ್ಲಿ ಶೇ 42ರಷ್ಟು ಚಯಾಪಚಯ ಸಿಂಡ್ರೋಮ್ ಅಪಾಯ ಕಡಿಮೆ ಆಗಿದೆ. ದಿನದಲ್ಲಿ ಎರಡು ಬಾರಿ ಒಂದು ಔನ್ಸ್ನಷ್ಟು ಪಿಸ್ತಾ ಸೇರಿದಂತೆ ಒಣ ಹಣ್ಣಿನ ಮಿಶ್ರಣ ಸೇವಿಸುವವರ ಶಕ್ತಿಯಲ್ಲಿ ಅಥವಾ ತೂಕದ ನಿರ್ವಹಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಅಷ್ಟೇ ಅಲ್ಲದೆ, ಅಧ್ಯಯನದ ಅವಧಿಯಲ್ಲಿ ಕಾರ್ಬೋಹೈಡ್ರೇಟ್ ಸ್ನ್ಯಾಕ್ಸ್ ಸೇವನೆ ಮಾಡುವವರಿಗೆ ಹೋಲಿಕೆ ಮಾಡಿದಾಗ ಒಣಹಣ್ಣು ಸೇವನೆ ಮಾಡುವವರಲ್ಲಿ ಸಾಮರ್ಥ್ಯದ ಹೆಚ್ಚಳ ಕಂಡು ಬಂದಿದೆ. ಅವರ ತೂಕ ಅಥವಾ ಕೊಬ್ಬಿನಲ್ಲಿ ಹೆಚ್ಚಳ ಕಂಡು ಬಂದಿಲ್ಲ. ಪಿಸ್ತಾ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡಿಲ್ಲ ಎಂದು ಸಂಶೋಧನೆ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ನ್ಯೂಟ್ರಿಯೆಂಟ್ಸ್ನಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಈ ಅಡುಗೆ ಎಣ್ಣೆ ಬಳಕೆ ಮಾಡುವ ಮುನ್ನ ಇರಲಿ ಎಚ್ಚರ; ಏಕೆಂದರೆ?