ನವದೆಹಲಿ: ಒಂದೇ ಕಡೆ ದೀರ್ಘಕಾಲ ಕುಳಿತುಕೊಂಡೇ ಇರುವುದರಿಂದ ಆಗುವ ಅಪಾಯಗಳ ಕುರಿತು ಈಗಾಗಲೇ ಅನೇಕ ತಜ್ಞರು ಎಚ್ಚರಿಸಿದ್ದಾರೆ. ಈ ಜೀವನ ಶೈಲಿ ಬದಲಾವಣೆ ನಡೆಸದೇ ಇರುವುದರಿಂದ ಆಗುವ ಅನಾಹುತ ಕುರಿತು ಇದೀಗ ಮತ್ತೊಮ್ಮೆ ಅಪೋಲೋ ಇಂಧ್ರಪ್ರಸ್ಥ ಆಸ್ಪತ್ರೆಯ ನರರೋಗ ತಜ್ಞ ಡಾ ಸುಧೀರ್ ಕುಮಾರ್ ಮಾತನಾಡಿದ್ದಾರೆ. ದೀರ್ಘಾವದಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಅಪಾಯ ಮಾತ್ರವಲ್ಲದೇ, ಇದು ಸ್ಥೂಲಕಾಯ ಮತ್ತು ಧೂಮಪಾನದ ರೀತಿಯ ಅಕಾಲಿಕ ಸಾವಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ದಿನದಲ್ಲಿ 8 ಗಂಟೆಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು. ಯಾವುದೇ ದೈಹಿಕ ಚಟುವಟಿಕೆ ನಡೆಸದೇ ಇರುವುದರಿಂದ ಈ ಅಪಾಯದ ಸಾಧ್ಯತೆ ಹೆಚ್ಚಳ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಇಷ್ಟೇ ಅಲ್ಲ, ದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯ, ಎಲ್ಡಿಎಲ್ ಕೊಲೆಸ್ಟ್ರಾಲ್, ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಅಕಾಲಿಕ ಸಾವಿನ ಅಪಾಯವೂ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ದೀರ್ಘ ಕಾಲ ಕುಳಿತಿರುವ ಪರಿಸ್ಥಿತಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರೆ, ದಿನದಲ್ಲಿ ಕನಿಷ್ಠ 60-75 ನಿಮಿಷಕ್ಕೊಮ್ಮೆ ಹೆಚ್ಚಿನ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಉದಾಹರಣೆಗೆ ಸೈಕಲ್, ಬಿರುಸಿನ ನಡಿಗೆ ನಿಮಗೆ ಸಹಾಯ ಮಾಡಲಿದೆ ಎಂದಿದ್ದಾರೆ ಡಾ. ನರೇಂದ್ರ ಕುಮಾರ್.
ಇನ್ನು, 13 ಗಂಟೆಗಿಂತ ಹೆಚ್ಚು ಕಾಲ ದಿನದಲ್ಲಿ ಯಾವುದೇ ವ್ಯಾಯಾಮ ನಡೆಸದೇ ಕುಳಿತುಕೊಳ್ಳುವುದರಿಂದ ಆಗುವ ಅನಾರೋಗ್ಯದ ಪರಿಣಾಮವನ್ನು ಎಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ದೀರ್ಘ ಸಮಯ ಕುಳಿತು ಕೊಳ್ಳುವ ಕೆಲಸ ನಿರ್ವಹಿಸುವವರು ಕನಿಷ್ಟ 30 ರಿಂದ 45 ನಿಮಿಷಕ್ಕೆ ಒಮ್ಮೆ 5 ನಿಮಿಷ ನಿಲ್ಲುವುದು ಅಥವಾ ವಾಕಿಂಗ್ನಂತಹ ಸಣ್ಣ ವಿರಾಮ ಚಟುವಟಿಕೆ ನಡೆಸುವುದು ಅಗತ್ಯ ಎಂದಿದ್ದಾರೆ.
ದೀರ್ಘ ಅವಧಿಯವರೆಗೆ ಕುಳಿತುಕೊಳ್ಳುವ ಬದಲು ಸ್ವಲ್ಪ ಹೊತ್ತು ನಿಂತು ಡೆಸ್ಕ್ ಕಾರ್ಯ ನಡೆಸುವುದಕ್ಕೆ ಪ್ರಾಶಸ್ತ್ಯ ನೀಡಿ. ಕಾಫಿ ಬ್ರೇಕ್ ಅಥವಾ ಮೀಟಿಂಗ್ ಸಂದರ್ಭದಲ್ಲಿ ನಿಂತುಕೊಳ್ಳಿ. ಮೊಬೈಲ್ ಫೋನ್ ಅಥವಾ ಇತರೆ ಎಲೆಕ್ಟ್ರಾನಿಕ್ ಸಾಧನ ಬಳಕೆ ಸಂದರ್ಭದಲ್ಲಿ ನಿಲ್ಲುವ ಅಭ್ಯಾಸ ರೂಢಿಸಿಕೊಳ್ಳಿ. ಜೊತೆಗೆ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಕನಿಷ್ಠ 45 ರಿಂದ 60 ನಿಮಿಷ ವಾಕ್ ಮಾಡುವುದನ್ನು ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹಾಲಿನಲ್ಲಿ ಸಕ್ಕರೆ ಮಿಕ್ಸ್ ಮಾಡಿ ಕುಡಿಯುತ್ತಿದ್ದೀರಾ?, ನಿಮ್ಮ ದೇಹದಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ?