ಹೆಣ್ಣು ಪ್ರೌಢಾವಸ್ಥೆಗೆ ಬಂದ ಬಳಿಕ ಆಕೆ ಪ್ರತೀ ತಿಂಗಳು ಮುಟ್ಟಾಗುವುದು ಸಹಜ. ಶೇಕಡಾ 100ರಲ್ಲಿ 75ರಷ್ಟು ಮಹಿಳೆಯರು ಮುಟ್ಟಿನ ವೇಳೆ ಹಾರ್ಮೋನ್ ಬದಲಾವಣೆ ಮತ್ತು ಬೇರೆ ಕಾರಣಗಳಿಂದ ತಡೆಯಲಾರದಷ್ಟು ನೋವು ಅನುಭವಿಸುತ್ತಾರೆ. ಹಾಗಂತ ಮುಟ್ಟನ್ನು ತಡೆಯಲು ಸಾಧ್ಯವಿಲ್ಲ. ಆದರೆ ಆ ನೋವನ್ನು ಕಡಿಮೆ ಮಾಡಲು ಕೆಲವು ಉಪಾಯಗಳಿವೆ.
ಕೆಲವು ಅಧ್ಯಯನಗಳು ಹಾಗು ತಜ್ಞರು ಹೇಳುವಂತೆ ಹೊಟ್ಟೆ, ಬೆನ್ನು ನೋವು, ಕಾಲು ಸೆಳೆಯುವುದಕ್ಕೆ ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಯೇ ಮುಖ್ಯ ಕಾರಣವಲ್ಲ. ಮುಟ್ಟಿನ ಸಮಯದಲ್ಲಿ ತೀವ್ರ ಸ್ವರೂಪದ ಬೆನ್ನುನೋವಿಗೆ ಇತರ ಕಾರಣಗಳೂ ಇವೆ. ಮೊದಲು ಈ ಕಾರಣಗಳನ್ನು ತಿಳಿದುಕೊಂಡ ಬಳಿಕ ಪರಿಹಾರ ಕಂಡುಕೊಳ್ಳೋಣ.
1. ಡಿಸ್ಮೆನೋರಿಯಾ: ಮುಟ್ಟಿನ ಸಮಯದಲ್ಲಿ ಉಂಟಾಗುವ ಬೆನ್ನು ನೋವನ್ನು ಡಿಸ್ಮೆನೋರಿಯಾ ಎಂದು ಕರೆಯುತ್ತಾರೆ. ಮಹಿಳೆಯ ದೇಹದಲ್ಲಿ ಸಂಭವಿಸುವ ಹಾರ್ಮೋನ್ ಬದಲಾವಣೆಗಳು ಇದಕ್ಕೆ ಕಾರಣ. ನಿರ್ದಿಷ್ಟವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದ ಏರಿಳಿತಗಳು ಬೆನ್ನುನೋವಿಗೆ ಕಾರಣವಾಗಬಹುದು. ಅಲ್ಲದೇ, ಮುಟ್ಟಿನ ಸಮಯದಲ್ಲಿ ಬೆನ್ನು ನೋವಲ್ಲದೆ, ಶ್ರೋಣಿ ಕುಹರದ ನೋವು, ಕಿಬ್ಬೊಟ್ಟೆ ಸೆಳೆತ, ಕಾಲು ನೋವು, ಜೀರ್ಣಕಾರಿ ಸಮಸ್ಯೆಗಳು, ತಲೆನೋವು, ಆಯಾಸ ಮತ್ತು ಮೂಡ್ ಸ್ವಿಂಗ್‌ಗಳನ್ನೂ ಸಹ ಅನುಭವಿಸುತ್ತಾರೆ.
2. ಗರ್ಭಾಶಯದ ಸಂಚಲನಗಳು: ಗರ್ಭಾಶಯದ ಸ್ನಾಯುಗಳು ಮುಟ್ಟಿನ ಸಮಯದಲ್ಲಿ ರಕ್ತಸ್ರಾವಕ್ಕೆ ಸಹಾಯ ಮಾಡಬೇಕು. ಇದಕ್ಕಾಗಿ ಗರ್ಭಾಶಯವು ತನ್ನ ಒಳಪದರವನ್ನು ಚೆಲ್ಲುತ್ತದೆ. ರಕ್ತವನ್ನು ಹೊರಕ್ಕೆ ತಳ್ಳಲು ಗರ್ಭಾಶಯದ ಸ್ನಾಯುಗಳ ಮೇಲಿನ ಒತ್ತಡದಿಂದ ಬೆನ್ನು ನೋವು ಉಂಟಾಗುತ್ತದೆ. ಇದರಿಂದ ಕೆಲವರಿಗೆ ತೀವ್ರ ನೋವು ಉಂಟಾಗುವ ಸಾಧ್ಯತೆಯಿದೆ.
3. ಪ್ರೊಸ್ಟಗ್ಲಾಂಡಿನ್ಗಳು: ಈ ಪ್ರೊಸ್ಟಗ್ಲಾಂಡಿನ್‌ಗಳು ಪೀರೆಯಡ್ ವೇಳೆ ಸ್ತ್ರೀ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್‌ಗಳನ್ನು ಹೋಲುತ್ತವೆ. ಅದು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾದರೆ, ಗರ್ಭಾಶಯದಲ್ಲಾಗುವ ಸಂಕೋಚನ ತೀವ್ರವಾದ ಬೆನ್ನು ನೋವಿಗೆ ಕಾರಣವಾಗುತ್ತವೆ. ಇದರೊಂದಿಗೆ, ರಕ್ತದ ಹರಿವು ಕಡಿಮೆಯಾಗಿ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಪ್ರೋಸ್ಟಗ್ಲಾಂಡಿನ್‌ಗಳ ಬಿಡುಗಡೆಯು ಗರ್ಭಾಶಯದ ಸುತ್ತಲಿನ ಸ್ನಾಯುಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆ ಮಾಡುತ್ತದೆ.
4. ಉರಿಯೂತ: ಈ ಅವಧಿಗಳಲ್ಲಿ, ಶ್ರೋಣಿಯ ಪ್ರದೇಶದಲ್ಲಿ ರಕ್ತಸ್ರಾವದಿಂದ ಊತ ಮತ್ತು ಕಿರಿಕಿರಿ ಉಂಟಾಗುತ್ತದೆ. ಇವುಗಳಿಂದಾಗಿ ದೇಹದಲ್ಲಿನ ಅಹಿತಕರ ಅನುಭವದಿಂದ ಬೆನ್ನುನೋವು ಶುರುವಾಗುತ್ತದೆ.
5. ಒತ್ತಡ: ಅಧಿಕ ಮಳೆಯರಲ್ಲಿ ಮುಟ್ಟಾಗುವ ಮುನ್ನ ಮತ್ತು ನಂತರ ಮಾನಸಿಕ ಮತ್ತು ದೈಹಿಕ ಒತ್ತಡ, ಏರುಪೇರು ಉಂಟಾಗಿ ದೇಹವನ್ನು ದುರ್ಬಲಗೊಳಿಸುತ್ತದೆ. ತಲೆನೋವು, ಹೊಟ್ಟೆನೋವು, ಕಾಲು ನೋವುಗಳಿಂದಾಗಿ ಅನೇಕ ಮಹಿಳೆಯರು ಪೀರಿಯಡ್ಸ್ ಸಮಯದಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಅವರಲ್ಲಿ ಬೆನ್ನು ನೋವು ಹೆಚ್ಚಾಗಿ ಕಂಡುಬರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಬೆನ್ನು ನೋವಿಗೆ ಪರಿಹಾರವೇನು?: ಮುಟ್ಟಿನ ಸಮಯದಲ್ಲಿ ಅಸಹನೀಯ ನೋವಿನಿಂದ ಹೊರಬರಲು, ಹೀಟ್ ಥೆರಪಿ ಅಂದರೆ ನಿಮ್ಮ ಬೆನ್ನಿನ ಆರೈಕೆ ಮಾಡಬೇಕು. ಲಘು ಬೆನ್ನಿನ ವ್ಯಾಯಾಮ ಅಥವಾ ವಾಕಿಂಗ್ ಜೊತೆಗೆ ಯೋಗ ಮಾಡಬಹುದು. ಸಮತೋಲಿತ ಆಹಾರ ಪದ್ಧತಿ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಮೆಗ್ನೀಷಿಯಂಗಳಿರುವ ಸಮೃದ್ಧ ಆಹಾರ ಒಳಗೊಂಡಿರಬೇಕು.
ಇಂಥ ಸಮಯದಲ್ಲಿ ಕಾಫಿ, ಟೀ, ಖಾರ, ಉಪ್ಪು ಸೇವನೆ ಸ್ವಲ್ಪ ಕಡಿಮೆ ಮಾಡಿದರೆ ತುಂಬಾ ಒಳ್ಳೆಯದು. ಮುಖ್ಯವಾಗಿ ಮಾನಸಿಕ ಒತ್ತಡ ತಗ್ಗಿಸಿ, ಆದಷ್ಟು ಮನೆಯಲ್ಲೇ ವಿಶ್ರಾಂತಿ ಪಡೆಯಿರಿ. ಉಷ್ಣವಾಗುವ ಮಾಂಸಾಹಾರ ಪದಾರ್ಥ ಸೇವಿಸಬೇಡಿ. ಉಗುರು ಬೆಚ್ಚಗಿನ ನೀರಿನ ಮೂಲಕ ನಿಮ್ಮ ಖಾಸಗಿ ಅಂಗ, ಸೊಂಟ, ಬೆನ್ನಿನ ಆರೈಕೆ ಮಾಡಿ. ಅತೀಯಾದ ಯೋಚನೆ ಬಿಟ್ಟುಬಿಡಿ. ತಂಪು ಆಹಾರ, ಹೆಚ್ಚು ನೀರು ಸೇವಿಸಿ. ಮನೆಯಲ್ಲೇ ಮಾಡುವ ಕಷಾಯ ಕುಡಿಯುವುದರಿಂದ ನೋವನ್ನು ತಗ್ಗಿಸಬಹುದು.
ಇದನ್ನೂ ಓದಿ: ಹದಿವಯಸ್ಸಿನಲ್ಲಿ ಅಲ್ಲದೇ, 30- 40ರಲ್ಲೂ ಕಾಡುವ ಮೊಡವೆ ಸಮಸ್ಯೆ: ಇಲ್ಲಿದೆ ಪರಿಹಾರ - Getting Acne Even In 30s And 40s