ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಭಾರತದಲ್ಲಿ ಆನ್‌ಲೈನ್ ಮೂಲಕ ವೈದ್ಯರ ಸಲಹೆ ಪಡೆಯುವುದು ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ವರದಿಯೊಂದು ಸೋಮವಾರ ಬಹಿರಂಗಪಡಿಸಿದೆ. ಡಿಜಿಟಲ್ ಹೆಲ್ತ್ ಕೇರ್ ಪ್ಲಾಟ್ ಫಾರ್ಮ್ ಆಗಿರುವ ಪ್ರಾಕ್ಟೋದ ವರದಿಯ ಪ್ರಕಾರ- ಶ್ರೇಣಿ 1 ನಗರಗಳಿಂದ ಹೆಚ್ಚಿನ ಅಂದರೆ ಶೇ 72ರಷ್ಟು ಆನ್‌ಲೈನ್ ವೈದ್ಯಕೀಯ ಸಮಾಲೋಚನೆಗಳು ನಡೆದಿವೆ. ಈ ನಗರಗಳಲ್ಲಿ 2019ರಿಂದ ಆನ್‌ಲೈನ್ ಸಮಾಲೋಚನೆಗಳು 6 ಪಟ್ಟು ಹೆಚ್ಚಾಗಿದೆ.
ಶ್ರೇಣಿ 2 ನಗರಗಳಿಂದ ಶೇ 12ರಷ್ಟು ಮತ್ತು ಭಾರತದ ಉಳಿದ ಭಾಗಗಳಿಂದ ಉಳಿದ ಶೇ 16ರಷ್ಟು ಆನ್‌ಲೈನ್ ವೈದ್ಯಕೀಯ ಸಮಾಲೋಚನೆಗಳು ನಡೆದಿವೆ. ವೀಡಿಯೊ ಕರೆಯ ಮೂಲಕ ಸಮಾಲೋಚನೆಗಳು ಸಹ ಅದ್ಭುತ ಬೆಳವಣಿಗೆಯನ್ನು ಕಂಡಿವೆ. 2019ರಲ್ಲಿ ಕೇವಲ ಶೇ 20ರಷ್ಟಿದ್ದ ವೀಡಿಯೊ ಕರೆ ಸಮಾಲೋಚನೆಗಳು ಶೇ 90ಕ್ಕೆ ಬೆಳೆದಿವೆ.
ಸ್ಮಾರ್ಟ್ ಫೋನ್ಗಳ ಹೆಚ್ಚುತ್ತಿರುವ ಬಳಕೆ ಮತ್ತು ಡೇಟಾ ಬೆಲೆಗಳಲ್ಲಿನ ಕುಸಿತದ ಕಾರಣದಿಂದ ಡಿಜಿಟಲ್ ಪ್ಲಾಟ್ ಫಾರ್ಮ್ಗಳು ಆರೋಗ್ಯ ವ್ಯವಸ್ಥೆಯಲ್ಲಿನ ಅಡೆತಡೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ರೋಗಿಗಳು ಮತ್ತು ಆರೋಗ್ಯ ವೃತ್ತಿಪರರಿಬ್ಬರೂ ಆನ್‌ಲೈನ್ ಸಮಾಲೋಚನೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದನ್ನು ನಾವು ನೋಡಿದ್ದೇವೆ" ಎಂದು ಪ್ರಾಕ್ಟೋದ ಮುಖ್ಯ ಆರೋಗ್ಯ ಕಾರ್ಯತಂತ್ರ ಅಧಿಕಾರಿ ಡಾ.ಅಲೆಕ್ಸಾಂಡರ್ ಕುರುವಿಲ್ಲಾ ಹೇಳಿದರು.
ಸಾಮಾನ್ಯ ವೈದ್ಯಕೀಯ ಸಲಹೆ, ಚರ್ಮರೋಗ, ಸ್ತ್ರೀರೋಗ, ಮಕ್ಕಳ ವಿಭಾಗ ಮತ್ತು ಕಿವಿ, ಮೂಗು ಮತ್ತು ಗಂಟಲು (ಇಎನ್‌ಟಿ) ಈ ವಿಷಯಗಳಲ್ಲಿ ಹೆಚ್ಚಾಗಿ ಆನ್‌ಲೈನ್ ಸಮಾಲೋಚನೆಗಳನ್ನು ನಡೆಸಲಾಗಿದೆ. ಕಣ್ಣಿನ ಆರೈಕೆ, ಮಕ್ಕಳ ವಿಭಾಗ ಮತ್ತು ಮೂಳೆ ಚಿಕಿತ್ಸೆ ನಂತರದ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಟೆಲಿಮೆಡಿಸಿನ್ ಮತ್ತು ಆನ್‌ಲೈನ್ ವೈದ್ಯರ ಸಮಾಲೋಚನೆ ಅಪ್ಲಿಕೇಶನ್‌ಗಳ ಹೊರಹೊಮ್ಮುವಿಕೆಯು ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಗುಣಮಟ್ಟದ ಆರೋಗ್ಯ ರಕ್ಷಣೆಗೆ ಕೈಗೆಟುಕುವ ಮತ್ತು ಅನುಕೂಲಕರ ಸೇವೆಯನ್ನು ಒದಗಿಸುವ ಮೂಲಕ, ಈ ಪ್ಲಾಟ್ಫಾರ್ಮ್ಗಳು ಭಾರತೀಯ ಆರೋಗ್ಯ ಮೂಲಸೌಕರ್ಯದಲ್ಲಿನ ವೈದ್ಯರು-ರೋಗಿಗಳ ಅನುಪಾತದಲ್ಲಿನ ಅಂತರವನ್ನು ಕಡಿಮೆ ಮಾಡುತ್ತಿವೆ.
ಭಾರತದಲ್ಲಿನ ಕೆಲವು ಅತ್ಯುತ್ತಮ ಆನ್‌ಲೈನ್ ಕನ್ಸಲ್ಟೇಶನ್ ಅಪ್ಲಿಕೇಶನ್ಗಳು ಹೀಗಿವೆ: ಪ್ರಾಕ್ಟೋ, ಲೈಬ್ರೇಟ್, ನೆಟ್ ಮೆಡ್, 1 ಎಂಜಿ, ಅಪೊಲೊ 24/7, ಮೆಡಿಬಡ್ಡಿ.
ಇದನ್ನೂ ಓದಿ: 23 ವಾರಕ್ಕೆ ಜನಿಸಿದ 620 ಗ್ರಾಂ ತೂಕದ ಮಗುವಿನ ಪ್ರಾಣ ಕಾಪಾಡಿದ ಮುಂಬೈ ವೈದ್ಯರು