ನವದೆಹಲಿ: ಭಾರತದಲ್ಲಿ ಮಕ್ಕಳ ಸ್ಥೂಲಕಾಯ ಬಲು ವೇಗವಾಗಿ ಬೆಳೆಯುತ್ತಿದ್ದು, ಅನಾರೋಗ್ಯಕರ ಜೀವನಕ್ಕೆ ಗುರಿಯಾಗಿಸುತ್ತಿದೆ. ಈ ಸಮಸ್ಯೆಯ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಎದುರಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಪೊಲೋ ಆಸ್ಪತ್ರೆ ವೈದ್ಯ ಡಾ.ವೈಶಾಲಿ ಲೊಖಂಡೆ, "ಭಾರತೀಯರ ಆರೋಗ್ಯಕ್ಕೆ ತೊಂದರೆ ನೀಡುವ ಟ್ರೆಂಡ್ ಮರು ನಿರ್ಮಾಣವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸಾಂಕ್ರಾಮಿಕವಲ್ಲದ ರೋಗಗಳು (ಎನ್ಸಿಡಿ) ವಯಸ್ಕರಲ್ಲಿ ಮಾತ್ರವಲ್ಲದೇ, ಮಕ್ಕಳಲ್ಲೂ ಹೆಚ್ಚುತ್ತಿದೆ. ಟೈಪ್ 2 ಮಧುಮೇಹ, ಹೃದಯ ರಕ್ತನಾಳ ಸಮಸ್ಯೆಗಳು ಹಾಗು ಕೆಲವು ರೀತಿಯ ಕ್ಯಾನ್ಸರ್ಗಳು ಹದಿವಯಸ್ಸಿನಲ್ಲಿಯೇ ಪತ್ತೆಯಾಗುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
"ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದಾಗ ಮಕ್ಕಳಲ್ಲಿ ಸ್ಥೂಲಕಾಯ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇತ್ತೀಚಿನ ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಒಟ್ಟಾರೆ 12.5 ಮಿಲಿಯನ್ ಮಕ್ಕಳು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಇವರೆಲ್ಲ 5ರಿಂದ 19 ವರ್ಷದವರು. 1990ಕ್ಕೆ ಹೋಲಿಕೆ ಮಾಡಿದಾಗ 2022ರಲ್ಲಿ ಸ್ಥೂಲಕಾಯದ ಪ್ರಮಾಣ ವೇಗವಾಗಿ ಏರಿದೆ. ಕಳೆದ ಮೂರು ದಶಕಗಳಿಂದ ಮೂರು ಪಟ್ಟು ಹೆಚ್ಚಾಗಿದ್ದು, ನಮ್ಮ ದೇಶದ ಭವಿಷ್ಯದ ಚಿತ್ರಣದ ಚಿಂತೆಗೀಡು ಮಾಡುವಂತಾಗಿದೆ. ಭಾರತದಲ್ಲಿ ಸ್ಥೂಲಕಾಯ ಏರಿಕೆ ನಿಜಕ್ಕೂ ಕಾಳಜಿಯ ವಿಚಾರ. ಅದರಲ್ಲೂ ಮಕ್ಕಳಲ್ಲಿನ ಈ ಏರಿಕೆ ಎಚ್ಚರಿಕೆಯ ಗಂಟೆ" ಎಂದು ರುಬಿ ಹಾಲ್ ಕ್ಲಿನಿಕ್ನ ವೈದ್ಯ ಶ್ರೀಧರ್ ದೇಶ್ಮುಖ್ ತಿಳಿಸಿದರು.
"ಜೀವನಶೈಲಿಯ ಬದಲಾವಣೆ ಸ್ಥೂಲಕಾಯ ಹೆಚ್ಚಳಕ್ಕೆ ಪ್ರಮುಖ ಕೊಡುಗೆ ನೀಡಿದ್ದು, ಇದು ಹೃದಯ ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಹೊಂದಿದೆ" ಎಂದು ವಡೋದರದ ಬಯ್ಲಾಲ್ ಅಮಿನ್ ಜನರಲ್ ಆಸ್ಪತ್ರೆಯ ಫಿಸಿಷಿಯನ್ ಡಾ.ಮನೀಶ್ ಮಿತ್ತಲ್ ಹೇಳಿದ್ದಾರೆ.
"ಫ್ಯಾಟಿ ಲಿವರ್, ಸ್ಲೀಪ್ ಅಪ್ನಿಯಾ ಸಮಸ್ಯೆ ಮತ್ತು ಸಂಧಿವಾತ ಸಮಸ್ಯೆಗಳು ಸ್ಥೂಲಕಾಯ ಹೊಂದಿರುವವರಲ್ಲಿ ಸಾಮಾನ್ಯವಾಗಿದ್ದು, ಇದು ಗಮನಾರ್ಹವಾಗಿ ವೈದ್ಯಕೀಯ ಹೊರೆ ಹೆಚ್ಚಿಸುತ್ತದೆ" ಎಂದರು.
"ಮಕ್ಕಳಲ್ಲಿನ ಸ್ಥೂಲಕಾಯ ಎದುರಿಸುವ ನಿಟ್ಟಿನಲ್ಲಿ ಆರಂಭಿಕ ಜಾಗೃತಿ ಮತ್ತು ಶಿಕ್ಷಣದ ಅಗತ್ಯವಿದೆ" ಎಂದು ವೈದ್ಯರು ಕರೆ ನೀಡಿದ್ದಾರೆ. ಅನಾರೋಗ್ಯಕರ ತಿನ್ನುವ ಅಭ್ಯಾಸ, ಜಢ ಜೀವನಶೈಲಿ ಮತ್ತು ಆರಂಭಿಕ ಸ್ಥೂಲಕಾಯ ಇದರ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ.
"ಭಾರತದ ಆರೋಗ್ಯ ಬಿಕ್ಕಟ್ಟಿನಲ್ಲಿ ಮಧುಮೇಹ ಮತ್ತು ಹೃದಯ ರಕ್ತನಾಳಗಳ ಸಮಸ್ಯೆಗಳು ಈಗಾಗಲೇ ಹೊರೆ ನೀಡಿದ್ದು, ಬಾಲ್ಯದ ಚಟುವಟಿಕೆಗಳು ವಯಸ್ಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ನಿರ್ವಹಿಸಲು ನಾವು ಸಾಂಪ್ರದಾಯಿಕ, ಪೋಷಕಾಂಶ ಸಮೃದ್ಧಿ ಆಹಾರ, ದೈಹಿಕ ಚಟುವಟಿಕೆ, ಜೀವನ ಅಭ್ಯಾಸಗಳ ಪರಿಣಾಮಗಳ ಕುರಿತು ಅರಿವು ನೀಡಿಸಿ, ಆರೋಗ್ಯಕರ ಜೀವನಶೈಲಿಗೆ ಉತ್ತೇಜಿಸಬೇಕಿದೆ. ಆರಂಭದಲ್ಲೇ ಆರೋಗ್ಯಕರ ನಡುವಳಿಕೆಯನ್ನು ಸ್ಥಾಪಿಸುವ ಮೂಲಕ ಒಟ್ಟಾರೆ ಜನಸಂಖ್ಯಾ ಆರೋಗ್ಯದ ಮೇಲೆ ದೀರ್ಘಕಾಲದ ರೋಗದ ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕಿದೆ" ಎಂದು ಪಿಡಿ ಹಿಂದುಜಾ ಹಾಸ್ಪಿಟಲ್ ಆ್ಯಂಡ್ ಮೆಡಿಕಲ್ ರಿಸರ್ಚ್ ಸೆಂಟರ್ನ ಡಾ.ಆಸೀಮ್ ಮಲ್ದಾರ್ ತಿಳಿಸಿದರು.(ಐಎಎನ್ಎಸ್)
ಇದನ್ನೂ ಓದಿ: ಸ್ಥೂಲಕಾಯದ ನಿರ್ಲಕ್ಷ್ಯ ಬೇಡ: ಈ ಕಾಯಿಲೆಗಳ ಬಗ್ಗೆ ಗೊತ್ತಿದೆಯೇ? ಪರಿಹಾರ ಹೀಗಿರಲಿ