Mysuru Tomato Rasam: ಬಹುತೇಕರು ರಸಂ ಇದ್ದರೆ ಮಾತ್ರ ಊಟ ಮಾಡುತ್ತಾರೆ. ಅದರಲ್ಲೂ ಒಂದೇ ಬಗೆಯ ರಸಂ ಸೇವಿಸಿ ನಿಮಗೆ ಬೇಸರವಾಗಿಬಿಟ್ಟಿರುತ್ತದೆ. ಕೆಲವು ಜನರು ಸಾಧ್ಯವಾದಾಗಲೆಲ್ಲಾ ಕೆಲವೇ ನಿಮಿಷಗಳಲ್ಲಿ ರಸಂ ತಯಾರಿಸುತ್ತಾರೆ. ರಸಂಗಳಲ್ಲಿ ಪ್ರಮುಖವಾಗಿ ಟೊಮೇಟೊ ಮತ್ತು ಮೆಣಸಿನ ರಸಂ ಅನ್ನು ಸಿದ್ಧಪಡಿಸುತ್ತಾರೆ. ಅದರಲ್ಲಿ ಟೊಮೇಟೊ ರಸಂನಲ್ಲಿ ಹಲವು ವಿಧಗಳಿವೆ. ಒಂದೊಂದು ಸ್ಥಳದಲ್ಲೂ ವಿಭಿನ್ನ ರುಚಿಯೊಂದಿಗೆ ಇದನ್ನು ತಯಾರಿಸಲಾಗುತ್ತದೆ.
ಈ ಬಾರಿ ಮನೆಯಲ್ಲಿ ಟೊಮೇಟೊ ರಸಂ ಮಾಡಬೇಕು ಅಂದುಕೊಂಡಿದ್ದರೆ, ಅದರಲ್ಲೂ ಮೈಸೂರು ಸ್ಟೈಲ್ನ ರಸಂ ಟ್ರೈ ಮಾಡಿ. ಈ ರಸಂ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದನ್ನು ಕೆಲವು ನಿಮಿಷಗಳಲ್ಲೇ ಸಿದ್ಧವಾಗುತ್ತದೆ. ರುಚಿ ಕೂಡ ತುಂಬಾ ಚೆನ್ನಾಗಿರುತ್ತದೆ. ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ಸೇವಿಸಬೇಕು ಎನಿಸುತ್ತದೆ. ಅನ್ನ ಅಥವಾ ಮುದ್ದೆಯೊಂದಿಗೆ ಈ ರಸಂ ತಿಂದರೆ ಹೆಚ್ಚು ಚೆನ್ನಾಗಿರುತ್ತದೆ. ಮೈಸೂರು ಸ್ಟೈಲ್ ರಸಂ ಮಾಡೋದು ಹೇಗೆ ಅಂತ ನೋಡೋಣ.
ರಸಂ ತಯಾರಿಸಲು ಬೇಕಾಗುವ ಪದಾರ್ಥಗಳು:
- ತೊಗರಿಬೇಳೆ - ನಾಲ್ಕು ಚಮಚ
- ಟೊಮೇಟೊ - 3
- ಶುಂಠಿ - ಒಂದು ಚಮಚ
- ಅರಿಶಿನ - ಒಂದು ಚಿಟಿಕೆ
- ಕರಿಬೇವಿನ ಎಲೆ - 1
- ಹುಣಸೆಹಣ್ಣು- ಸುಮಾರು ನಿಂಬೆಹಣ್ಣಿನ ಗಾತ್ರದಷ್ಟು
- ಮೆಣಸಿನಕಾಯಿ - ನಾಲ್ಕು
- ಎಣ್ಣೆ - ಎರಡು ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ರಸಂನ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಉದುರಿಸಿ
ರಸಂ ಪೌಡರ್ ಹೇಗೆ ಮಾಡೋದು?
- ಎಣ್ಣೆ - 2 ಟೀಸ್ಪೂನ್
- ಒಣಗಿದ ಮೆಣಸಿನಕಾಯಿ- 3
- ಪುಟಾಣಿ ಕಾಳು- ಒಂದು ಚಮಚ
- ಕೊಬ್ಬರಿ - 1/2 ಕಪ್
- ಮೆಣಸು - ಒಂದು ಚಮಚ
- ಕೊತ್ತಂಬರಿ ಸೊಪ್ಪು - ಟೇಬಲ್ಸ್ಪೂನ್
- ಜೀರಿಗೆ - ಅರ್ಧ ಚಮಚ
ಒಗ್ಗರಣೆ ಹಾಕಲು ಬೇಕಾದ ಪದಾರ್ಥಗಳು:
- ತುಪ್ಪ- ಒಂದು ಚಮಚ
- ಕರಿಮೆಣಸು - 2 ಚಮಚ
- ಜೀರಿಗೆ- ಒಂದು ಚಮಚ
- ಸಾಸಿವೆ- ಒಂದು ಚಮಚ
- ಇಂಗು - ಒಂದು ಚಮಚ
ಟೊಮೇಟೊ ರಸಂ ತಯಾರಿಸುವುದು ಹೇಗೆ?:
- ಮೊದಲು ಬೇಳೆಯನ್ನು ತೊಳೆದು ಸ್ವಲ್ಪ ಹೊತ್ತು ನೆನೆಸಿಡಿ. ನಂತರ ಕುಕ್ಕರ್‌ನಲ್ಲಿ ತೊಗರಿಬೇಳೆಯನ್ನು ಹಾಕಿ 3/4 ಕಪ್ ನೀರು ಹಾಕಿ ಮಧ್ಯಮ ಉರಿಯಲ್ಲಿ ಎರಡು ಸೀಟಿ ಬರುವವರೆಗೆ ಬೇಯಿಸಿ.
- ನಂತರ ಇನ್ನೊಂದು ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಒಣ ಮೆಣಸಿನಕಾಯಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿ ಹುರಿಯಿರಿ. ಉತ್ತಮ ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಮೈಸೂರು ಶೈಲಿಯ ರಸಂ ಸವಿಯಬೇಕಾದರೆ ಬ್ಯಾಡಗಿ ಒಣಮೆಣಸಿನಕಾಯಿಯನ್ನೇ ಬಳಸಿ, ಇಲ್ಲದಿದ್ದರೆ ಒಣ ಮೆಣಸಿನಕಾಯಿಯನ್ನು ಬಳಸಬಹುದು.
- ತಣ್ಣಗಾದ ನಂತರ ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಪಕ್ಕಕ್ಕೆ ಇಡಿ.
- ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕತ್ತರಿಸಿದ ಟೊಮೇಟೊ ತುಂಡುಗಳು, ಸ್ವಲ್ಪ ಉಪ್ಪು, ಬೆಲ್ಲ, ಅರಿಶಿನ ಹಾಕಿ ನಿಧಾನವಾಗಿ ಹಾಕಿ. ಅಂದರೆ, ಟೊಮೇಟೊದಲ್ಲಿರುವ ರಸ ಬರುವವರೆಗೆ ಕೈಯಿಂದ ಹೊರಳಾಡಿಸಿ.
- ಜೊತೆಗೆ ಅದಕ್ಕೆ ಕರಿಬೇವಿನ ಸೊಪ್ಪು ಮತ್ತು ಹುಣಸೆ ಹಣ್ಣನ್ನು ಹಾಕಿ ಇನ್ನೊಂದು ಬಾರಿ ಹೊರಳಾಡಿಸಿ.
- ಈಗ ಟೊಮೇಟೊ ರಸವನ್ನು ದೊಡ್ಡ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಅದರಲ್ಲಿ ಒಂದು ಲೀಟರ್ ನೀರನ್ನು ಸುರಿಯಿರಿ. ಜೊತೆಗೆ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮತ್ತು ರಸವು ಬಬಲ್ಸ್ ಬರುವವರೆಗೆ ಕಡಿಮೆ ಉರಿಯಲ್ಲಿ ಕುದಿಸಿ.
- ಅದರ ನಂತರ, ಕುದಿಯುವ ರಸಂಗೆ ಬೇಯಿಸಿದ ಬೇಳೆ, ರುಬ್ಬಿದ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಹೆಚ್ಚಿನ ಉರಿಯಲ್ಲಿ ಮತ್ತೆ ನಾಲ್ಕು ನಿಮಿಷ ಕುದಿಸಿ. ನಂತರ ಕಡಿಮೆ ಉರಿಯಲ್ಲಿ ರಸಂ ಅನ್ನು ಕುದಿಸಿ.
- ಇನ್ನೊಂದು ಕಡೆ ಒಲೆ ಆನ್ ಮಾಡಿ ಬಾಣಲೆಗೆ ತುಪ್ಪ ಹಾಕಿ ಕರಿಮೆಣಸು, ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
- ಆ ನಂತರ ಕುದಿಯುತ್ತಿರುವ ರಸಂಗೆ ಒಗ್ಗರಣೆ ನೀಡಿರುವ ಪದಾರ್ಥಗಳನ್ನು ಸೇರಿಸಿರಿ. ಮತ್ತೊಮ್ಮೆ ಬಬಲ್ ಬರುವವರೆಗೆ ಕುದಿಸಿದರೆ.. ಘಮ ಘಮ ಸುವಾಸನೆಯುಕ್ತ ಮೈಸೂರು ರಸಂ ರೆಡಿಯಾಗುತ್ತದೆ.
- ಈ ರಸಂ ಅನ್ನು ಅನ್ನ ಮತ್ತು ರಾಗಿ ಮುದ್ದೆಯ ಜೊತೆಗೆ ಒಮ್ಮೆ ತಿಂದರೆ, ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಇಷ್ಟವಾದರೆ ನೀವೂ ಈ ರಸಂ ಅನ್ನು ಟ್ರೈ ಮಾಡಬಹುದು.