ಜೋಧ್ಪುರ: ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 80 ಕೋಟಿ ತಲುಪಿದೆ. ಇದರಲ್ಲಿ ಜನರ ಸರಾಸರಿ ದಿನದ ಸ್ಕ್ರೀನ್ ಟೈಂ 7 ಗಂಟೆಗೂ ಹೆಚ್ಚಾಗಿದ್ದು, ಇದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅದರಲ್ಲೂ ರಾತ್ರಿ ಸಮಯದ ಬಳಕೆ ಹೆಚ್ಚಿನ ಅಪಾಯಕಾರಿ ಎಂದಿದ್ದಾರೆ.
ರಾತ್ರಿ ಸಮಯದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ತಪ್ಪಿಸುವಂತೆ ವೈದ್ಯರು ಪದೇ ಪದೇ ಮನವಿಯನ್ನು ಮಾಡುತ್ತಲೇ ಇದ್ದಾರೆ. ಕಾರಣ ಇದರಿಂದ ನಿದ್ರೆಗೆ ಉತ್ತೇಜಿಸುವ ಮೆಲಟೋನಿನ್ ಹಾರ್ಮೋನ್ ಸ್ರವಿಸುವಿಕೆ ಮೇಲೆ ಪರಿಣಾಮ ಬೀರುತ್ತದೆ. ಮೊಬೈಲ್ನ ನೀಲಿ ಬೆಳಕಿನಿಂದ ಈ ಹಾರ್ಮೋನ್ ಕಡಿಮೆಯಾಗುತ್ತದೆ. ಇದರಿಂದ ನಿದ್ರಾಹೀನತೆ, ಕಿರಿಕಿರಿ ಮತ್ತು ಖಿನ್ನತೆಯಂತಹ ಅಪಾಯಗಳು ಯುವ ಜನತೆಯನ್ನು ಕಾಡುತ್ತವೆ.
ಮೊಬೈಲ್ ಫೋನ್ನ ಬಳಕೆಗೆ ಅಂಡಿಕೊಂಡಿರುವ ಯುವ ಜನತೆ ನಿಧಾನವಾಗಿ ತಮ್ಮ ಸಮಾಧಾನವನ್ನು ಕಳೆದುಕೊಂಡು, ವಿಶ್ರಾಂತಿ ಇಲ್ಲದಂತೆ ಆಗುತ್ತಾರೆ. ಇನ್ನು ಮೊಬೈಲ್ ಚಟಕ್ಕೆ ಒಳಗಾಗಿರುವ ಮಕ್ಕಳಲ್ಲಿ ಅವರ ಬೆಳವಣಿಗೆ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವ ಕುರಿತು ಈಗಾಗಲೇ ಸಾಬೀತಾಗಿದೆ ಎಂದು ಡಾ ಎಸ್ಎನ್ ಮೆಡಿಕಲ್ ಕಾಲೇಜ್ನ ಮನೋವೈಜ್ಞಾನಿಕ ವಿಭಾಗದ ಮಾಜಿ ಮುಖ್ಯಸ್ಥ ಡಾ ಜಿಡಿ ಕೂಲ್ವಾಲ್ ತಿಳಿಸಿದ್ದಾರೆ.
ಹಾರ್ಮೋನ್ಗಳ ಬದಲಾವಣೆ: ಇಂದು ಮಕ್ಕಳು ನೈಜತೆಯಿಂದ ದೂರಾಗುವ ಅಪಾಯದಲ್ಲಿದ್ದಾರೆ. ಇದಕ್ಕೆ ಕಾರಣ ಮೊಬೈಲ್ನ ಅತಿಯಾದ ಬಳಕೆ. ಇದರಿಂದ ಮಕ್ಕಳ ಸಿರ್ಕಾಡಿಯನ್ ರಿಥಂ ಅಂದರೆ ನಿದ್ರೆ, ಮೆದುಳಿನಲ್ಲಿ ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇರುವ ಜೈವಿಕ ಗಡಿಯಾರದ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿದೆ.
ಬೆಳಗ್ಗೆ ಎದ್ದಾಕ್ಷಣ ನಮ್ಮನ್ನು ಚುರುಕಾಗಿಡುವ ಹಾರ್ಮೋನ್ ಕಾರ್ಟಿಸೋಲ್ ಒತ್ತಡ ನಿರ್ವಹಣೆಯಲ್ಲಿ ಸಹಾಯಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರೋಟೀನ್ ಅನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಹಾರ್ಮೋನ್ ಇನ್ಸುಲಿನ್ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ರಾತ್ರಿವರೆಗೆ ನಿರಂತರವಾಗಿ ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿದ್ರೆಯ ಕುರಿತ ಸಿಗ್ನಲ್ ಅನ್ನು ಮೆದುಳು ಪಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾರ್ಟಿಸೋನ್ ನಿರಂತರವಾಗಿ ಸಕ್ರಿಯವಾಗುತ್ತದೆ. ದೇಹವು ರಾತ್ರಿಯನ್ನು ಬೆಳಗ್ಗೆಯಾಗಿ ಭಾವಿಸುತ್ತದೆ. ಇದು ನಿದ್ರೆಯ ಅವಧಿಗೆ ಅಡ್ಡಿ ಉಂಟು ಮಾಡುತ್ತದೆ.
ಇತ್ತೀಚಿನ ಸಮೀಕ್ಷೆ ಪ್ರಕಾರ, 12 ವರ್ಷದ ಒಳಗಿನ ಶೇ 42ರಷ್ಟು ಮಕ್ಕಳು ದಿನದಲ್ಲಿ ಎರಡರಿಂದ ನಾಲ್ಕು ಗಂಟೆ ಸೆಲ್ಫೋನ್ ಅಥವಾ ಟ್ಯಾಬ್ಗಳ ಬಳಕೆಗೆ ಮುಂದಾಗುತ್ತಾರೆ. ಇದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಶೇ 47ರಷ್ಟು ಪ್ರಮಾಣದಲ್ಲಿ ಸ್ಕ್ರೀನ್ ಟೈಂ ಕಳೆಯುತ್ತಾರೆ.
ಮಕ್ಕಳ ನಡವಳಿಕೆ ಬದಲಾವಣೆ: ಮೊಬೈಲ್ ಗೀಳಿಗೆ ಸಿಲುಕಿದ ಮಗುವೊಂದರ ಸ್ಥಿತಿ ಕುರಿತು ವಿವರಿಸಿದ ಡಾ ಕೂಲ್ವಾಲ್, ಸಣ್ಣ ಗ್ರಾಮದಲ್ಲಿ ಸ್ಮಾರ್ಟ್ಫೋನ್ ಹೊಂದಿದ್ದ ಮಗುವಿನ ವರ್ತನೆಯಿಂದ ಬೇಸತ್ತು ತಾಯಿಯೊಬ್ಬರು ನನ್ನ ಬಳಿ ಆಗಮಿಸಿದ್ದರು. ಮಗು ಸಂಪೂರ್ಣವಾಗಿ ಮೊಬೈಲ್ಗೆ ದಾಸನಾಗಿ ತಾಯಿಯ ಮಾತನ್ನು ಕೇಳದೆ ನಿರ್ಲಕ್ಷ್ಯ ತೋರುತ್ತಿತ್ತು ಎಂದು ವಿವರಿಸಿದರು.
ಮತ್ತೊಂದು ಪ್ರಕರಣದಲ್ಲಿ ರೀಲ್ ಚಟಕ್ಕೆ ಒಳಗಾದ ಯುವತಿಯು ನಿರಂತರವಾಗಿ ಮೊಬೈಲ್ ನೋಡುತ್ತಿದ್ದರಿಂದ ಆಕೆಯ ಮೆದುಳು ನಿಷ್ಕ್ರಿಯವಾಗಿತ್ತು. ಇದರಿಂದ ಆಕೆ ತನ್ನನ್ನು ತಾನೇ ರೂಮ್ನಲ್ಲಿ ಲಾಕ್ ಮಾಡಿಕೊಳ್ಳುವುದರ ಜೊತೆಗೆ ಸದಾ ಕಿರಿಕಿರಿ ಅನುಭವಿಸುತ್ತಿದ್ದಳು. ಅಲ್ಲದೇ, ಕುಟುಂಬಸ್ಥರ ಜೊತೆಗೆ ಕೂಡ ಪದೇ ಪದೇ ಜಗಳವಾಡುತ್ತಿದ್ದಳು.
ಪೋಷಕರು ಮಕ್ಕಳ ಈ ಮೊಬೈಲ್ ಚಟದ ಬಗ್ಗೆ ಹೆಚ್ಚು ಎಚ್ಚರಿಕೆಯನ್ನು ಹೊಂದಿರಬೇಕು. ಮಕ್ಕಳು ಯಾವ ವಿಷಯವನ್ನು ಮೊಬೈಲ್ನಲ್ಲಿ ನೋಡುತ್ತಿದ್ದಾರೆ ಎಂಬ ಬಗ್ಗೆ ಗಮನವನ್ನು ಇಡಬೇಕು. ಅವರ ಸ್ಕ್ರೀನ್ ಟೈಂ ಅನ್ನು ನಿರ್ವಹಣೆ ಮಾಡುವ ಮೂಲಕ ಮಕ್ಕಳ ಆರೋಗ್ಯ ಮೇಲೆ ಉಂಟಾಗುವ ಅಪಾಯವನ್ನು ತಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಕ್ಕಳ ಸ್ಮಾರ್ಟ್ಫೋನ್ ಬಳಕೆಗೆ ಕಡಿವಾಣ; ಚೀನಾ ಸರ್ಕಾರದ ಹೊಸ ನಿಯಮ