ನವದೆಹಲಿ: ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಬೆದರಿಕೆಗಳು ಹೆಚ್ಚುತ್ತಿದ್ದು, ಇದೀಗ ಆರೋಗ್ಯ ಕ್ಷೇತ್ರದಲ್ಲೂ ಈ ಪ್ರಕರಣಗಳು ಹೆಚ್ಚುತ್ತಿದೆ. ಈ ನಡುವೆ ಆರೋಗ್ಯ ಸೇವೆ ಒದಗಿಸುವ ಸಂಸ್ಥೆಯೊಂದು ರೋಗಿಗಳ ಮಾಹಿತಿಯನ್ನು ಸೋರಿಕೆ ಮಾಡಿರುವ ಪ್ರಕರಣ ಬೆಕಿಗೆ ಬಂದಿದೆ.
ರೋಗಿಗಳ ವೈದ್ಯಕೀಯ ದತ್ತಾಂಶ, ಫೋನ್ ನಂಬರ್, ವಿಳಾಸ ಮತ್ತು ಪಾವತಿ ವಿವರ ಸೇರಿದಂತೆ ವೈಯಕ್ತಿಕ ಮಾಹಿತಿ ಹೊಂದಿರುವ ಸುಮಾರು 4.5 ಲಕ್ಷ ಸೂಕ್ಷ್ಮ ದಾಖಲೆಗಳನ್ನು ದೆಹಲಿ ಮೂಲದ ಹೆಲ್ತ್ ಕೇರ್ ಐಟಿ ಸಲ್ಯೂಷನ್ ಕಂಪನಿಯೊಂದು ಬಹಿರಂಗಪಡಿಸಿದೆ ಎಂದು ಸೈಬರ್ನ್ಯೂಸ್ ವರದಿ ಮಾಡಿದೆ. 36 ಗಿಗಾಬೈಟ್ಗಳಷ್ಟು ದತ್ತಾಂಶ ಅಂದರೆ 2 ಲಕ್ಷ ರೋಗಿಗಳ 4,50,000 ದತ್ತಾಂಶಗಳು ಬಿಕಾರಿಯಾಗಿವೆ ಎಂದು ತಿಳಿಸಲಾಗಿದೆ.
ಈ ದತ್ತಾಂಶಗಳಲ್ಲಿ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ಫೋನ್ ನಂಬರ್, ವಿಳಾಸ, ವೈದ್ಯಕೀಯ ಒಪ್ಪಂದದ ಸಂಖ್ಯೆಗಳು ಮತ್ತು ಪಾವತಿ ವಿವರಗಳು ಸೇರಿದಂತೆ ರೋಗಿಯ ವಿವರಗಳನ್ನು ದಾಖಲೆಗಳಿವೆ. ಜೊತೆಗೆ ರೋಗಿಯ ವೈದ್ಯಕೀಯ ಇತಿಹಾಸಗಳು, ರೋಗಿಗಳ ಬಿಲ್‌ಗಳು, ಕ್ಲಿನಿಕಲ್ ಟಿಪ್ಪಣಿಗಳು, ಲ್ಯಾಬ್ ವರದಿಗಳು ಮತ್ತು ಫೋಟೋಗಳು, ಸ್ಕ್ರೀನಿಂಗ್‌ಗಳಂತಹ ಅಪಾಯಿಂಟ್‌ಮೆಂಟ್ ವಿವರದಂತಹ ಸೂಕ್ಷ್ಮ ದತ್ತಾಂಶವೂ ಇದೆ. ಬಹುಮುಖ್ಯ ಅಂಶ ಎಂದರೆ, ಈ ದಾಖಲೆಗಳು ಹಲವಾರು ತಿಂಗಳುಗಳಿಂದ ಬಹಿರಂಗವಾಗುತ್ತಿದೆ ಎಂದು ವರದಿ ತಿಳಿಸಿದೆ.
ಈ ರೀತಿ ರೋಗಿಯ ವೈಯಕ್ತಿಕ ಮಾಹಿತಿಗಳ ವಿವರ ಬಹಿರಂಗಪಡಿಸುವುದು ಅಪಾಯಕಾರಿ. ಇದರಿಂದ ರೋಗಿ ಸುಲಭವಾಗಿ ವಂಚನೆ, ಫಿಶಿಂಗ್ ನಂತಹ ದಾಳಿ, ಬ್ಲಾಕ್ಮೇಲ್ಗೆ ಒಳಗಾಗುವ ಸಾಧ್ಯತೆ ಇದೆ. ಅಲ್ಲದೇ ಆತನ ದತ್ತಾಂಶವನ್ನು ಡಾರ್ಕ್ ವೆಬ್ ಫೋರಮ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ.
ಈ ಪ್ರಕರಣ ಸಂಬಂಧ ಸಂಶೋಧನಾ ತಂಡ ಸಂಸ್ಥೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಪ್ರಯತ್ನ ಮಾಡಿತ್ತು. ಆದರೆ. ವರದಿ ಪ್ರಕಟಣೆಗೆ ಮುನ್ನ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಗೂಗಲ್ ಪ್ಲೇನಲ್ಲಿ ಈ ಆ್ಯಪ್ ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಆಗಿರುವ ಅಪ್ಲಿಕೇಷನ್ ಆಗಿದೆ. ಈ ಆ್ಯಪ್ ವೈದ್ಯರ ಹುಡುಕಾಟ, ವೈದ್ಯರ ಅಪಾಯಿಟ್ಮೆಂಟ್, ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ ಸಿಸ್ಟಮ್‌ಗಳು, ವರದಿ ಮಾಡುವಿಕೆ ಮತ್ತು ವಿಶ್ಲೇಷಣೆಗಳು ಮತ್ತು ಹಣಕಾಸು ಮೇಲ್ವಿಚಾರಣೆಯಂತಹ ಸೇವೆಗಳನ್ನು ನೀಡುತ್ತದೆ.
ಭಾರತವು ಇತ್ತೀಚೆಗೆ ಸೈಬರ್ ದಾಳಿಗಳಲ್ಲಿ ಗಮನಾರ್ಹ ಪ್ರಮಾಣದ ಬೆದರಿಕೆ ಎದುರಿಸುತ್ತಿದೆ, ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಈ ಬೆದರಿಕೆ ಹೆಚ್ಚುತ್ತಿದೆ.
ಇದನ್ನೂ ಓದಿ: ಆಧುನಿಕ ಸೈಬರ್ ದಾಳಿ ಎದುರಿಸಲು ಭಾರತದ ಶೇ.4ರಷ್ಟು ಸಂಸ್ಥೆಗಳು ಮಾತ್ರ ಸಮರ್ಥ: ವರದಿ