ನವದೆಹಲಿ: ಗ್ರಾಮೀಣ ಪ್ರದೇಶದ ಜನರಿಗೆ ವೇಗವಾಗಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕರ್ನಾಟಕದ ಮಣಿಪಾಲದ ಕಸ್ತೂರ್ಬಾ ಗಾಂಧಿ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಡ್ರೋನ್ ಉಪಕ್ರಮ ಆರಂಭಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಈ ಸಂಬಂಧ ಎಕ್ಸ್.ಕಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಐಸಿಎಂಆರ್, ಗ್ರಾಮೀಣ ಪ್ರದೇಶದಲ್ಲಿನ ಸೀಮಿತ ಸಂಪನ್ಮೂಲ ಆಸ್ಪತ್ರೆಗಳಿಂದ ವೈದ್ಯಕೀಯ ಸ್ಯಾಂಪಲ್ ಮೂಲಕ ಫಲಿತಾಂಶ ಪಡೆಯುವುದು ವಿಳಂಬವಾಗಿ ರೋಗ ನಿರ್ಣಯ ತಡವಾಗುತ್ತದೆ. ಈ ನಿಟ್ಟಿನಲ್ಲಿ ಸ್ಯಾಂಪಲ್‌ಗಳನ್ನು ಡ್ರೋನ್ ಸಹಾಯದಿಂದ ವೇಗವವಾಗಿ ಕೊಂಡೊಯ್ದು ರೋಗ ಪತ್ತೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಿಗೆ ಸಾಗಾಟ ನಡೆಸಲಾಗುತ್ತದೆ. ಇದರಿಂದ ವೇಗವಾಗಿ ಮತ್ತು ನಿಖರವಾಗಿ ಶಸ್ತ್ರಚಿಕಿತ್ಸಕರು ವೈದ್ಯಕೀಯ ನಿರ್ಧಾರ ತೆಗೆದುಕೊಳ್ಳಬಹುದು. ವಿಶೇಷವಾಗಿ, ಕ್ಯಾನ್ಸರ್ ಸರ್ಜರಿಯಲ್ಲಿ ಕಳುಹಿಸುವ ಮಾದರಿಗಳ ತನಿಖೆಗೆ ಇದು ನೆರವಾಗಲಿದೆ. ಇದು ರೋಗಿಯ ಫಲಿತಾಂಶ ಸುಧಾರಣೆಯಲ್ಲೂ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಉಪಕ್ರಮವು ಟಿಸಾ (TSAW) ಡ್ರೋಣ್ ಸಹಭಾಗಿತ್ವದಲ್ಲಿ ನಡೆಸಲಾಗಿದೆ. ಟಿಸಾ ಆರೋಗ್ಯ ಸೇವಾ ಡ್ರೋನ್ ಲಾಜಿಸ್ಟಿಕ್ ಸ್ಟಾರ್ಟಪ್ ಆಗಿದ್ದು, ಇದು ರೋಗಿಗಳಿಗೆ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜತೆಗೆ ಆರಾಮದಾಯಕ ಮತ್ತು ಸುಲಭದಾಯಕ್ಕೆ ಪ್ರೋತ್ಸಾಹ ನೀಡುತ್ತದೆ. ಪ್ರಾದೇಶಿಕ ಆರೈಕೆ ಆಸ್ಪತ್ರೆ ಮೇಲಿನ ಹೊರೆಯನ್ನೂ ಕಡಿಮೆ ಮಾಡುತ್ತದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಐಸಿಎಂಆರ್ ಟಿಸಾ ಡ್ರೋಣ್ ಜತೆಗೆ ಸಹಭಾಗಿತ್ವವನ್ನು ಘೋಷಿಸಿತು. ತೆಲಂಗಾಣ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಡ್ರೋನ್ ಮೂಲಕ ವೈದ್ಯಕೀಯ ಪೂರೈಕೆ ಸಾಗಿಸುತ್ತದೆ. ಕ್ಯಾನ್ಸರ್ ಪ್ರಕ್ರಿಯೆಗಾಗಿ ರೋಗಿಯು ದ್ವಿತೀಯ ಆರೈಕೆ ಆಸ್ಪತ್ರೆಗೆ ನಡೆಯುವ ಮಾದರಿಯನ್ನು ಡ್ರೋನ್ ಬಳಸಿ ಪರೀಕ್ಷಾ ಸೌಲಭ್ಯಕ್ಕೆ ತ್ವರಿತವಾಗಿ ಕಳುಹಿಸಲಾಗುತ್ತದೆ. ಇದರಿಂದ ಸರ್ಜನ್ಗಳು 20 ನಿಮಿಷಗಳಲ್ಲಿ ರೋಗನಿರ್ಣಯದ ವರದಿ ಪಡೆಯಬಹುದು. ಇದು ರೋಗಿಗೆ ಸೋಂಕಿನ ಅಪಾಯ ತಗ್ಗಿಸುತ್ತದೆ.(ಐಎಎನ್ಎಸ್)
ಇದನ್ನೂ ಓದಿ: ಹೆಪಟೈಟಿಸ್ ಬಿ, ಸಿ ಹೊರೆ ಹೊಂದಿರುವ ವಿಶ್ವದ ಟಾಪ್ 10 ದೇಶದಲ್ಲಿ ಭಾರತವೂ ಒಂದು