How To Identify Fake Cooking Oil: ಮಾರುಕಟ್ಟೆಯಲ್ಲಿ ನಕಲಿ ಅಡುಗೆ ಎಣ್ಣೆಗಳ ಹಾವಳಿ ದಿನೇ ದಿನೆ ಹೆಚ್ಚಾಗತೊಡಗಿದೆ. ಕೆಲ ಖದೀಮರು ಪ್ರತಿಷ್ಠಿತ ಕಂಪನಿಯ ಹೆಸರನ್ನು ಬಳಕೆ ಮಾಡಿಕೊಂಡು ಗ್ರಾಹಕರನ್ನು ನಂಬಿಸಿ ನಕಲಿ ಎಣ್ಣೆ ಮಾರಾಟ ಮಾಡಿ ಯಾಮಾರಿಸುತ್ತಿದ್ದಾರೆ. ಇಂತಹ ಕಲಬೆರಕೆ ಎಣ್ಣೆಯನ್ನು ಸೇವಿಸುವುದರಿಂದ ಅನಾರೋಗ್ಯದ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ.
ಹಾಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSSAI) ಹೇಳುವಂತೆ ಕೆಲವು ಸರಳ ವಿಧಾನವನ್ನು ಅನುಸರಿಸಿ ಮನೆಯಲ್ಲಿಯೇ ಅಡುಗೆ ಎಣ್ಣೆ ಅಸಲಿಯೇ ಅಥವಾ ನಕಲಿಯೇ ಎಂದು ಪತ್ತೆ ಹಚ್ಚಬಹುದಾಗಿದೆ.
ಸೀಲ್ ಪರಿಶೀಲಿಸಿ: ಅಡುಗೆ ಎಣ್ಣೆಯನ್ನು ಖರೀದಿಸುವಾಗ ಬಾಟಲ್ ಅಥವಾ ಕ್ಯಾನ್ಗಳು ಸಂಪೂರ್ಣವಾಗಿ ಸೀಲ್ ಆಗಿದೆಯೇ ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ಬಾಟಲ್ ಮುಚ್ಚಳ ಅಥವಾ ಕ್ಯಾನ್ಗಳ ಮುಚ್ಚಳ ಸಡಿಲವಾಗಿ ಮುಚ್ಚಿದ್ದರೆ ಅಥವಾ ಅದರ ಮೇಲೆ ಯಾವುದೇ ಸೀಲ್ ಇಲ್ಲದಿದ್ದರೆ ಅದು ಕಲಬೆರಕೆ ಎಣ್ಣೆ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಂಗಡಿಗಳಲ್ಲಿ ದೊರೆಯುವ ಲೂಸ್ ಅಥವಾ ಖುಲ್ಲಾ ಎಣ್ಣೆಯನ್ನು ಖರೀದಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
ಬಣ್ಣವನ್ನು ಪರಿಶೀಲಿಸಿ: ಅಸಲಿ ಎಣ್ಣೆಯನ್ನು ಬಣ್ಣದ ಮೂಲಕ ಪತ್ತೆ ಹಚ್ಚಬಹುದಾಗಿದೆ. ಉದಾಹರಣೆಗೆ ಆಲಿವ್ ಎಣ್ಣೆಯು ಹಳದಿ - ಹಸಿರು ಮಿಶ್ರಿತ ಬಣ್ಣದಲ್ಲಿದ್ದರೆ ಅದು ಶುದ್ಧ ಎಣ್ಣೆ ಆಗಿರಲಿದೆ. ಹಾಗೇ ಸೂರ್ಯಕಾಂತಿ ಎಣ್ಣೆ ತಿಳಿ ಹಳದಿ ಅಥವಾ ಗೋಲ್ಡನ್ ಬಣ್ಣವನ್ನು ಹೊಂದಿದ್ದರೆ ಅಸಲಿ ಆಗಿರುತ್ತದೆ. ಇದನ್ನು ಹೊರತು ಪಡಿಸಿ ಶೇಂಗಾ ಸೇರಿದಂತೆ ಇತರ ಎಣ್ಣೆಯನ್ನು ಖರೀದಿಸುವಾಗ ಅದು ಯಾವ ಬಣ್ಣದಲ್ಲಿರಬೇಕು ಎಂಬುದನ್ನು ಒಮ್ಮೆ ಪರಿಶೀಲಿಸಿ ಬಳಿಕ ಖರೀದಿಸಿ.
ಉತ್ತಮ ವಾಸನೆ: ಕಲಬೆರಕೆ ಇಲ್ಲದ ಎಣ್ಣೆಯು ಉತ್ತಮ ಸುವಾಸನೆ ನೀಡುತ್ತದೆ. ಉದಾಹರಣೆಗೆ, ಆಲಿವ್ ಎಣ್ಣೆಯು ಘಾಟು ಅಥವಾ ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಒಂದು ವೇಳೆ ನೀವು ಖರೀದಿಸಿದ ಎಣ್ಣೆಯೂ ಕೆಟ್ಟ ವಾಸನೆಯನ್ನು ಹೊಂದಿದ್ದರೆ, ಅದು ಖಂಡಿತವಾಗಿಯೂ ಕಲಬೆರಕೆ ಎಣ್ಣೆ ಆಗಿರುತ್ತದೆ.
ಫ್ರಿಜ್ ನಲ್ಲಿಡಿ: ನೀವು ಬಳಸುತ್ತಿರುವ ಎಣ್ಣೆ ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಒಂದು ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದ ಎಣ್ಣೆಯನ್ನು ತೆಗೆದುಕೊಳ್ಳಿ. ನಂತರ ಅದನ್ನು ಫ್ರಿಜ್ನಲ್ಲಿಡಿ. ನೀವು ತಂದ ಎಣ್ಣೆಯು ಶುದ್ಧವಾಗಿದ್ದರೆ, ಅದು ಹೆಪ್ಪುಗಟ್ಟುತ್ತದೆ. ಒಂದು ವೇಳೆ ಕಲಬೆರಕೆಯಾಗಿದ್ದರೆ ಅದು ದ್ರವವಾಗಿ ಉಳಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆಲಿವ್ ಎಣ್ಣೆ ಕೂಡ: ನೀವು ಆಲಿವ್ ಎಣ್ಣೆಯನ್ನು ಬಳಸುತ್ತಿದ್ದರೆ ಅದನ್ನು ಪಾತ್ರೆಯಲ್ಲಿ ಹಾಕಿ ಮತ್ತು ಡೀಪ್ ಫ್ರೀಜ್‌ನಲ್ಲಿ ಇರಿಸಿ. ಶುದ್ಧ ಆಲಿವ್ ಎಣ್ಣೆ ಆಗಿದ್ದರೇ 30 ನಿಮಿಷಗಳಲ್ಲಿ ಗಟ್ಟಿಯಾಗುತ್ತದೆ ಅಥವಾ ಹೆಪ್ಪುಗಟ್ಟುತ್ತದೆ.
ಕಾಗದದ ಮೂಲಕ ಪತ್ತೆ ಹಚ್ಚಿ: ನೀವು ಬಳಸುತ್ತಿರುವ ಎಣ್ಣೆಯನ್ನು ಬಿಳಿ ಕಾಗದದ ತುಂಡಿಗೆ ಸ್ವಲ್ಪ ಹಚ್ಚಿ ಮತ್ತು ಒಣಗಲು ಬಿಡಿ. ಇದು ಶುದ್ಧ ಎಣ್ಣೆಯಾಗಿದ್ದರೆ, ಜಿಡ್ಡು ಇಲ್ಲದೇ ದುಂಡಾಕಾರದಲ್ಲಿರಲಿದೆ.
ಈ ಪರೀಕ್ಷೆಯನ್ನು ಮಾಡಿ: ಟೆಸ್ಟ್ ಟ್ಯೂಬ್‌ನಲ್ಲಿ ಅಡುಗೆ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ 4 ಮಿಲಿ ಡಿಸ್ಟಿಲ್ಡ್ ವಾಟರ್ ಸೇರಿಸಿ. ನಂತರ ಟೆಸ್ಟ್ ಟ್ಯೂಬ್ ಅನ್ನು ಕೆಲವು ಸೆಕೆಂಡುಗಳ ಕಾಲ ತಿರುಗಿಸಿ. ಈಗ ಈ ಡಿಸ್ಟಿಲ್ಡ್ ವಾಟರ್ ಲಿಕ್ವಿಡ್ ಅನ್ನು ಮತ್ತೊಂದು ಟೆಸ್ಟ್ ಟ್ಯೂಬ್‌ನಲ್ಲಿ 2 ಮಿಲಿ ನಷ್ಟು ತೆಗೆದುಕೊಳ್ಳಿ. ಅದಕ್ಕೆ 2 ಮಿಲಿ ಸಾಂದ್ರೀಕೃತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ. ಎಣ್ಣೆ ಕಲಬೆರಕೆಯಾಗದಿದ್ದರೆ ಬಣ್ಣ ಬದಲಾವಣೆ ಆಗುವುದಿಲ್ಲ. ಎಣ್ಣೆಯಲ್ಲಿ ಕಲಬೆರಕೆ ಇದ್ದರೆ ಎಣ್ಣೆಯ ಮೇಲ್ಭಾಗದಲ್ಲಿ ಕೆಂಪು ಬಣ್ಣ ಬರುತ್ತದೆ.
ತೆಂಗಿನ ಎಣ್ಣೆಗಾಗಿ: ತೆಂಗಿನ ಎಣ್ಣೆಯ ಶುದ್ಧತೆಯನ್ನು ಪರೀಕ್ಷಿಸಲು ಸ್ವಲ್ಪ ಎಣ್ಣೆಯನ್ನು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು 5-10 ಡಿಗ್ರಿ ತಾಪಮಾನದಲ್ಲಿ ಫ್ರಿಜ್ನಲ್ಲಿಡಿ. ಶುದ್ಧ ತೆಂಗಿನ ಎಣ್ಣೆ 60 - 90 ನಿಮಿಷಗಳಲ್ಲಿ ಗಟ್ಟಿಯಾಗುತ್ತದೆ.