ಹೈದರಾಬಾದ್: ಮಾರಕ ರೋಗ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮತ್ತು ಅವರಿಗೆ ಬೆಂಬಲವಾಗಿ ನಿಂತವರನ್ನು ನೆನೆಯುವ ದಿನವೇ 'ವಿಶ್ವ ರೋಸ್ ಡೇ'. 1996 ರಲ್ಲಿ ನಿಧನರಾದ 12 ವರ್ಷದ ಕೆನಡಾದ ಕ್ಯಾನ್ಸರ್ ರೋಗಿ 'ಮೆಲಿಂಡಾ ರೋಸ್' ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಸೆಪ್ಟೆಂಬರ್ 22 ರಂದು ಈ ದಿನವನ್ನು ಆಚರಿಸುತ್ತೇವೆ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಮತ್ತು ಅವರ ಪ್ರೀತಿಪಾತ್ರರಿಗೆ ಸಹಾಯ ಮಾಡಲು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲಲು ಈ ದಿನವನ್ನು ಸ್ಮರಿಸಲಾಗುತ್ತದೆ. ಇಂದು, ಪ್ರತಿಯೊಬ್ಬರೂ ತಮಗೆ ತಿಳಿದಿರುವ ಕ್ಯಾನ್ಸರ್ ರೋಗಿಗೆ ಗುಲಾಬಿಯನ್ನು ನೀಡಬೇಕು. ಕಾರಣ, ಗುಲಾಬಿಯು ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯ ಸಂಕೇತವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು (WHO) ಕ್ಯಾನ್ಸರ್ ಅನ್ನು ಮಾರಕ ಕಾಯಿಲೆ ಎಂದು ಗುರುತಿಸಿದೆ. ದೇಹದ ಯಾವುದೇ ಅಂಗದಲ್ಲಿನ ಜೀವಕೋಶಗಳ ಮೇಲೆ ದಾಳಿ ಮಾಡಿ ವೇಗವಾಗಿ ಮತ್ತು ಅನಿಯಂತ್ರಿತವಾಗಿ ಹರಡುತ್ತದೆ. ನಂತರದ ಹಂತವನ್ನು 'ಮೆಟಾಸ್ಟಾಸಿಸ್' ಎಂದು ಕರೆಯಲಾಗುತ್ತದೆ. ಇದು ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಕಾರಣವಾಗುತ್ತದೆ. 2022 ರಲ್ಲಿ ಜಾಗತಿಕವಾಗಿ ಅಂದಾಜು 20 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 9.7 ಮಿಲಿಯನ್ ಕ್ಯಾನ್ಸರ್-ಸಂಬಂಧಿತ ಸಾವುಗಳು ದಾಖಲಾಗಿವೆ.
ರೋಸ್ ಡೇ ಇತಿಹಾಸ: 12 ನೇ ವಯಸ್ಸಿನಲ್ಲಿ ಅಪರೂಪದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ ಮೆಲಿಂಡಾ ರೋಸ್ ಎಂಬ ಯುವತಿಯನ್ನು ಗೌರವಿಸಲು ಈ ದಿನವನ್ನು ಮೀಸಲಿಡಲಾಗಿದೆ. ಮೆಲಿಂಡಾ 1994 ರಲ್ಲಿ ಆಸ್ಕಿನ್ಸ್ ಟ್ಯೂಮರ್ ಎಂದು ಕರೆಯಲ್ಪಡುವ ಒಂದು ರೀತಿಯ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಎರಡು ವಾರಗಳು ಮಾತ್ರ ಈಕೆ ಬದುಕುಳಿಯಲ್ಲಳು ಎಂದು ತಿಳಿಸಿದ್ದರು.
ಆಶ್ಚರ್ಯಕರವಾಗಿ, ಮೆಲಿಂಡಾ ಎಲ್ಲ ಸವಾಲುಗಳನ್ನು ಮೀರಿ 6 ತಿಂಗಳು ಬದುಕಿದ್ದರು. ಈ ಸಮಯದಲ್ಲಿ ಆಕೆ ಆಸ್ಪತ್ರೆಯಲ್ಲಿ ಸಂತೋಷ ಮತ್ತು ಸಕಾರಾತ್ಮಕ ಭಾವದಿಂದ ಜೀವಿಸಿದ್ದಳು. ಆಕೆ ತನ್ನ ಜೊತೆಗಿನ ಕ್ಯಾನ್ಸರ್ ರೋಗಿಗಳಿಗೆ ಕವನಗಳು ಮತ್ತು ಪತ್ರಗಳನ್ನು ಬರೆಯುವ ಮೂಲಕ ಸಂತೋಷ ಹರಡುತ್ತಿದ್ದಳು. ಮೆಲಿಂಡಾ ಅವರ ಉದಾರತೆ ಮತ್ತು ಪಾಸಿಟಿವ್ ದೃಷ್ಟಿಕೋನವು ಕಷ್ಟದ ಸಮಯದಲ್ಲಿ ಭರವಸೆ ಅತ್ಯಗತ್ಯ ಎಂಬುದನ್ನು ತೋರಿಸುತ್ತದೆ.
ಈ ದಿನದ ಮಹತ್ವವೇನು?: ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ರೋಸ್ ಡೇ ಮಹತ್ವದ್ದಾಗಿದೆ. ಗುಲಾಬಿಗಳು ಕೇವಲ ಸುಂದರವಲ್ಲ. ಅವು ಪ್ರೀತಿ, ಕಾಳಜಿ ಮತ್ತು ದಯೆಯ ಸಂಕೇತ. ಈ ದಿನದಂದು ಜನರು ಕ್ಯಾನ್ಸರ್ ರೋಗಿಗಳಿಗೆ ಪ್ರೀತಿ, ಬೆಂಬಲ ಮತ್ತು ಭರವಸೆಯನ್ನು ತೋರಿಸಲು ಗುಲಾಬಿಗಳನ್ನು ನೀಡುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರನ್ನು ಆರೈಕೆ ಮಾಡುವವರಿಗೆ ಗುಲಾಬಿಗಳನ್ನು ನೀಡುವ ಮೂಲಕ, ಜನರು ತಮ್ಮ ಕಾಳಜಿಯನ್ನು ತೋರಿಸಬೇಕು. ಈ ಕಠಿಣ ಸಮಯದಲ್ಲಿ ಸಾಂತ್ವನವನ್ನು ನೀಡಬೇಕು.
ಕ್ಯಾನ್ಸರ್ ತಡೆಗಟ್ಟುವ ತಂತ್ರಗಳು: ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದಾಗ್ಯೂ ಕೆಲ ನಿಯಮಗಳನ್ನು ಅನುಸರಿಸುವುದರಿಂದ ವಿವಿಧ ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಕ್ಯಾನ್ಸರ್ ತಡೆಗಟ್ಟಲು ಕೆಲವು ಪ್ರಮುಖ ತಂತ್ರಗಳು ಇಲ್ಲಿವೆ:
- ತಂಬಾಕು ತಿನ್ನುವುದು ಬಿಡಬೇಕು
- ಸಮತೋಲಿತ ಆಹಾರ ಸೇವನೆ
- ನಿರಂತರ ದೈಹಿಕ ವ್ಯಾಯಾಮ
- ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದು
- HPV ವ್ಯಾಕ್ಸಿನೇಷನ್ ಸೇರಿದಂತೆ ಕ್ಯಾನ್ಸರ್ ಉಂಟುಮಾಡುವ ರೋಗಗಳ ವಿರುದ್ಧ ವ್ಯಾಕ್ಸಿನೇಷನ್
- ನಿಯಮಿತ ತಪಾಸಣೆ
ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು: ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ವರದಿಯ ಪ್ರಕಾರ, 2023 ರಲ್ಲಿ ಭಾರತದಲ್ಲಿ 1,496,972 ಕ್ಯಾನ್ಸರ್ ಪ್ರಕರಣಗಳಿವೆ ಎಂದು ಅಂದಾಜಿಸಲಾಗಿದೆ. ಇದು 2022 ರಲ್ಲಿ 1,461,427 ಕ್ಕಿಂತ ಹೆಚ್ಚಾಗಿದೆ. ಉತ್ತರ ಪ್ರದೇಶವು 215931 ಪ್ರಕರಣಗಳೊಂದಿಗೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ.
124,584 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಎರಡನೇ, 116,230 ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ ಮೂರನೇ, 112,180 ಪ್ರಕರಣಗಳೊಂದಿಗೆ ಬಿಹಾರ ನಾಲ್ಕನೇ, ತಮಿಳುನಾಡಿನಲ್ಲಿ 95,944 ಪ್ರಕರಣಗಳು, ಕರ್ನಾಟಕದಲ್ಲಿ 92,560 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 84,029 ಪ್ರಕರಣಗಳು, ರಾಜಸ್ಥಾನದಲ್ಲಿ 76,655 ಪ್ರಕರಣಗಳು, ಗುಜರಾತ್ನಲ್ಲಿ 75,290 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 75086 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿವೆ.
ಇದನ್ನೂ ಓದಿ: ಮಕ್ಕಳಲ್ಲಿ ಮಧುಮೇಹ, ಬೊಜ್ಜಿನ ಸಮಸ್ಯೆ ಪತ್ತೆಗೆ ರಕ್ತ ಪರೀಕ್ಷೆ ಅಭಿವೃದ್ಧಿಪಡಿಸಿದ ಸಂಶೋಧಕರು! - New Type Of Blood Test