ಆಲೂಗಡ್ಡೆ. ಈ ತರಕಾರಿಯನ್ನು ಹೆಚ್ಚಾಗಿ ಪರೋಟಾ, ಚಿಪ್ಸ್, ಕರಿ ಮತ್ತು ಫ್ರೆಂಚ್ ಫ್ರೈಗಳಿಗೆ ಬಳಸಲಾಗುತ್ತದೆ. ಅಧಿಕ ಕ್ಯಾಲೊರಿ ಇರುವ ಕಾರಣಕ್ಕೆ ಕೆಲವರು ಸೇವಿಸಲು ಹಿಂಜರಿಯುತ್ತಾರೆ. ಆದರೆ, ನಿಯಮಿತ ಪ್ರಮಾಣದ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಅಲ್ಲದೇ ಇದು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ ಎನ್ನುತ್ತಾರೆ ಬ್ಯೂಟೀಷಿಯನ್ಗಳು.
ಕೂದಲಿನಿಂದ ತ್ವಚೆಯವರೆಗೂ ನಿಮ್ಮ ಸೌಂದರ್ಯ ಹೆಚ್ಚಿಸುವ ಶಕ್ತಿ ಆಲೂಗಡ್ಡೆಗಿದೆ. ಆಲೂಗಡ್ಡೆಯಲ್ಲಿ ಕ್ಯಾಟೆಕೊಲೇಸ್ ಎಂಬ ಕಿಣ್ವವಿದೆ. ಇದು ಕಪ್ಪು ಕಲೆಗಳ ಸಮಸ್ಯೆ ತೊಲಗಿಸುತ್ತದೆ. ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಇದು ಕಣ್ಣಿನ ಕೆಳಗಿರುವ ಕಪ್ಪು ವರ್ತುಲ (ಬ್ಲ್ಯಾಕ್ ಸರ್ಕಲ್) ಕಡಿಮೆ ಮಾಡುತ್ತದೆ. ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
ಕಣ್ಣಿಗೇನು ಪ್ರಯೋಜನ?: ಸರಿಯಾಗಿ ನಿದ್ರೆ ಮಾಡದೇ ಹೋದರೆ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ಗಳು (ಕಪ್ಪು ವರ್ತುಲಗಳು) ಮೂಡುವುದು ಸಾಮಾನ್ಯ. ಇದನ್ನು ತಡೆಯಲು ಹಲವು ಜನರು ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಆಲೂಗಡ್ಡೆ ನಿಮಗೆ ಅದಕ್ಕಿಂತ ಹೆಚ್ಚಿನ ಫಲಿತಾಂಶ ನೀಡಬಲ್ಲದು. ಹೌದು, ಆಲೂಗೆಡ್ಡೆ ಚೂರುಗಳು ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಮತ್ತು ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆ. ದೃಷ್ಠಿ ಚುರುಕುಗೊಳ್ಳಲು ಕೂಡಾ ಸಹಾಯ ಮಾಡುತ್ತದೆ.
ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಆಲೂಗಡ್ಡೆಯ ಎರಡು ತೆಳುವಾದ ಹೋಳುಗಳನ್ನು ಕತ್ತರಿಸಿ 10ರಿಂದ 15 ನಿಮಿಷಗಳ ಕಾಲ ಕಣ್ಣುಗಳ ಮೇಲಿರಿಸಿ. ಉತ್ತಮ ಫಲಿತಾಂಶಕ್ಕಾಗಿ ಅವುಗಳನ್ನು ಬಳಸುವ ಮೊದಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸ್ವಲ್ಪ ಸಮಯದವರೆಗೆ ಇರಿಸಿ. ಪ್ರತಿದಿನ ಬಳಸುವುದರಿಂದ ಫಲಿತಾಂಶ ಗೊತ್ತಾಗುತ್ತದೆ.
ಕೂದಲಿಗೂ ಆಲೂಗಡ್ಡೆ ಟ್ರೀಟ್ಮೆಂಟ್: ಇತ್ತೀಚಿನ ದಿನಗಳಲ್ಲಿ ಚಿಕ್ಕ ಪ್ರಾಯದವರಲ್ಲೇ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಪೌಷ್ಠಿಕಾಂಶವುಳ್ಳ ಆಹಾರದ ಕೊರತೆ ಮತ್ತು ಬದಲಾಗುತ್ತಿರುವ ಜೀವನ ಶೈಲಿಯಿಂದ ಕೂದಲು ಬಿಳಿಯಾಗುತ್ತದೆ. ಆದರೆ ಬಿಳಿ ಕೂದಲು ಕಪ್ಪಾಗಿಸಲು ಪರಿಹಾರ ನಿಮ್ಮ ಅಡುಗೆಮನೆಯಲ್ಲಿಯೇ ಇದೆ. ನೀವು ಬಿಸಾಡುತ್ತಿರುವುದು ಆಲೂಗೆಡ್ಡೆಯ ಸಿಪ್ಪೆಯಲ್ಲಿ ಕೂದಲಿಗೆ ಸಂಬಂಧಿಸಿದ ಹಲವು ಪ್ರಯೋಜನಕಾರಿ ಅಂಶಗಳಿವೆ. ಆಲೂಗೆಡ್ಡೆ ಸಿಪ್ಪೆ ಸುಲಿದು ಕೂದಲಿಗೆ ಅಂಟಿಸುವುದರಿಂದ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೊಳಪೂ ಹೆಚ್ಚಾಗುತ್ತದೆ. ಆಲೂಗಡ್ಡೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಮತ್ತು ನೀರನ್ನು ಸೋಸಿಕೊಳ್ಳಿ. ಸ್ನಾನ ಮಾಡಿದ ನಂತರ ಈ ನೀರನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಕೂದಲು ಕಪ್ಪಾಗಿ ಹೊಳೆಯುತ್ತವೆ.
ಮೊಡವೆ, ಕಲೆಗಳು ಮಾಯ: ಆಲೂಗೆಡ್ಡೆ ರಸ ಚರ್ಮವನ್ನು ಹಗುರಗೊಳಿಸುವ ಗುಣಗಳನ್ನು ಹೊಂದಿದೆ. ಕಪ್ಪು ವರ್ತುಲಗಳನ್ನು ಕಡಿಮೆ ಮಾಡುವುದಲ್ಲದೇ, ಮೊಡವೆ ಮತ್ತು ಕಲೆಗಳನ್ನು ತೆಗೆದುಹಾಕುವಲ್ಲಿಯೂ ಆಲೂಗಡ್ಡೆ ರಸ ಉಪಯುಕ್ತ. ಇದಕ್ಕಾಗಿ ನೀವು ಆಲೂಗೆಡ್ಡೆಯಿಂದ ರಸವನ್ನು ಹೊರತೆಗೆಯಬೇಕು. ಅದನ್ನು ಮುಖಕ್ಕೆ ಚೆನ್ನಾಗಿ ಅನ್ವಯಿಸಬೇಕು. 15 ನಿಮಿಷಗಳ ನಂತರ ಮುಖ ತೊಳೆಯಿರಿ. ಎರಡು ತಿಂಗಳ ಕಾಲ ಪ್ರತಿದಿನ ಹೀಗೆ ಮಾಡಿದರೆ ಮೊಡವೆ, ಕಲೆಗಳು ಮಾಯ.
ಸೂರ್ಯನ ಬೆಳಕಿನಿಂದ ರಕ್ಷಣೆ: ಆಲೂಗಡ್ಡೆಯಲ್ಲಿರುವ ಕಿಣ್ವಗಳು ಮತ್ತು ವಿಟಮಿನ್‌ಗಳು ಸೂರ್ಯನ ಹಾನಿಗೊಳಗಾದ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಚರ್ಮದ ಆಳದಿಂದ ಪೋಷಣೆ ಒದಗಿಸುತ್ತದೆ. ಉರಿಯೂತ ಮತ್ತು ನೋವಿನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಕ್ಕಾಗಿ ನೀವು ಆಲೂಗೆಡ್ಡೆಯನ್ನು ದುಂಡಗಿನ ತುಂಡುಗಳಾಗಿ ಕತ್ತರಿಸಿ ಉರಿಯೂತವಿರುವ ಕಡೆ ಅನ್ವಯಿಸಿ ಅರ್ಧ ಘಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ. ಉರಿಯೂತ ಕಡಿಮೆಯಾಗುತ್ತದೆ.
ಕೂದಲು ಉದುರುವಿಕೆ ನಿಯಂತ್ರಣ: ಆಲೂಗಡ್ಡೆ ಚರ್ಮದ ಆರೈಕೆ ಹಾಗೂ ಕೂದಲ ರಕ್ಷಣೆಗೆ ಸಹಾಯ ಮಾಡುತ್ತದೆ. ಆಲೂಗೆಡ್ಡೆ ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಲೂಗಡ್ಡೆಯಿಂದ ರಸ ತೆಗೆದು ಕೂದಲಿನ ಬೇರುಗಳು ಸೇರಿದಂತೆ ತಲೆಯ ಮೇಲೆ ಚೆಂದಾಗಿ ಹಚ್ಚಿ. ಇದನ್ನು 30ರಿಂದ 60 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಶಾಂಪೂ ಬಳಸಿ ತಲೆ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಕೂದಲು ಉದುರುವಿಕೆ ಸಮಸ್ಯೆಯೂ ಕಡಿಮೆ ಆಗುತ್ತದೆ.
ವಿಶೇಷ ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಆರೋಗ್ಯ ಸಂಬಂಧಿತ ಟಿಪ್ಸ್ ಮತ್ತು ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿ ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.