ನವದೆಹಲಿ: ಏಪ್ರಿಲ್ನಲ್ಲಿ ಏಷ್ಯಾದ್ಯಂತ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದು, ಈ ಬಿರು ಬಿಸಿಲು ಬಿಲಿಯಗಟ್ಟಲೆ ಜನ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಇದು ಮಾನವನಿರ್ಮಿತ ಹವಾಮಾನ ಬದಲಾವಣೆಯಾಗಿದೆ ಎಂದು ವರ್ಲ್ಡ್ ವೆದರ್ ಅಟ್ರಿಬ್ಯೂಷನ್ ಗುಂಪಿನ ಅಂತಾರಾಷ್ಟ್ರೀಯ ತಜ್ಞರು ತಿಳಿಸಿದ್ದಾರೆ.
ಈ ಕುರಿತು ನಡೆಸಿದ ಅಧ್ಯಯನದಲ್ಲಿ, ಮಾನವನಿರ್ಮಿತ ಹವಾಮಾನ ಬದಲಾವಣೆಯಿಂದ ಹೆಚ್ಚಾದ ಶಾಖದಲೆಗಳು ಏಷ್ಯಾದ್ಯಂತ ಬಡ ಜನರು ಮತ್ತು ಗಾಜಾದಲ್ಲಿ ಸ್ಥಳಾಂತರಗೊಂಡ 1.7 ಮಿಲಿಯನ್ ಪ್ಯಾಲೆಸ್ಟೀನಿಯನ್ ಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನೂ ಗಮನಿಸಲಾಗಿದೆ.
ಏಪ್ರಿಲ್ನಲ್ಲಿ ಏಷ್ಯಾದಲ್ಲಿ ತೀವ್ರ ಶಾಖದಲೆ ಕಾಣಿಸಿಕೊಂಡಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ, ಮ್ಯಾನ್ಮಾರ್, ಲಾವೋಸ್ ಮತ್ತು ವಿಯೆಟ್ನಾಂ ದೇಶಗಳಲ್ಲಿ ಏಪ್ರಿಲ್ನಲ್ಲಿ ಅತ್ಯಂತ ಬಿಸಿಯಾದ ದಿನಗಳು ಹಳೆಯ ದಾಖಲೆಗಳನ್ನು ಮುರಿದಿವೆ. ಈ ನಡುವೆ ಫಿಲಿಪ್ಪೀನ್ಸ್ ಜನರು ಅತ್ಯಂತ ಬಿಸಿಯಾದ ರಾತ್ರಿಯನ್ನು ಅನುಭಿಸಿದ್ದಾರೆ. ಭಾರತದಲ್ಲೂ ಅತೀ ಹೆಚ್ಚು 46 ಡಿಗ್ರಿ ತಾಪಮಾನ ದಾಖಲಾಗಿದೆ.
ಪಶ್ಚಿಮ ಏಷ್ಯಾದಲ್ಲಿಯೂ ವಿಪರೀತ ಶಾಖ ಕಂಡುಬಂದಿದೆ. ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ 40 ಡಿಗ್ರಿಗಿಂತ ಹೆಚ್ಚಿನ ತಾಪಮಾನ ಕಂಡಿದೆ.
ಶಾಖ ಸಂಬಂಧಿ ಸಾವು ಪ್ರಕರಣಗಳು ಕೂಡ ವರದಿಯಾಗಿವೆ. ಬಾಂಗ್ಲಾದೇಶದಲ್ಲಿ 28, ಭಾರತದಲ್ಲಿ 5 ಗಾಜಾದಲ್ಲಿ 3 ಸಾವು ಏಪ್ರಿಲ್ನಲ್ಲಿ ಸಂಭವಿಸಿದೆ. ಈ ನಡುವೆ ಥಾಯ್ಲೆಂಡ್ ಮತ್ತು ಫಿಲಿಪ್ಪೀನ್ಸ್‌ನಲ್ಲೂ ಕೂಡ ಶಾಖ ಸಂಬಂಧಿ ಸಾವಿನ ವರದಿ ಹೆಚ್ಚಾಗಿದೆ. ಈ ಅಂಕಿಅಂಶಗಳು ಪ್ರಾಥಮಿಕವಾಗಿವೆ. ಶಾಖ ಸಂಬಂಧಿ ಸಾವುಗಳು ಬಹುತೇಕ ಕಡೆಗಳಲ್ಲಿ ವರದಿಯಾಗುವುದಿಲ್ಲ.
ಬೆಳೆ ಹಾನಿ: ಶಾಖದ ಹೆಚ್ಚಳ ಬೆಳೆ ಹಾನಿ, ಜಾನುವಾರು ನಷ್ಟ, ನೀರಿನ ಕೊರತೆ, ಮೀನಿನ ಮಾರಣ ಹೋಮದಂತಹ ಘಟನೆಗಳಿಗೆ ಕಾರಣವಾಗಿದೆ. ತೈಲ, ಕಲ್ಲಿದ್ದಲು ಮತ್ತು ಅನಿಲ ಸುಡುವುದರಿಂದ ಮತ್ತು ಅರಣ್ಯನಾಶದಂತಹ ಇತರ ಮಾನವ ಚಟುವಟಿಕೆಗಳಿಂದ ಉಂಟಾಗುವ ಹವಾಮಾನ ಬದಲಾವಣೆ ಪ್ರಪಂಚದಾದ್ಯಂತ ಶಾಖದ ಅಲೆಗಳನ್ನು ಹೆಚ್ಚಿಸುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಭೂ ಗ್ರಹದತ್ತ ದಶಕದಲ್ಲೇ ಬಹು ದೊಡ್ಡ ಜ್ವಾಲೆ ಹೊರಹಾಕಿದ ಸೂರ್ಯ! ಸೌರ ವಿದ್ಯಮಾನ ಸೆರೆ ಹಿಡಿದ ಇಸ್ರೋ ನೌಕೆ; ಈ ಬಾರಿ ಭೂಮಿ ಸೇಫ್