ನವದೆಹಲಿ: ಭಾರತೀಯ ಆರೋಗ್ಯ ವೃತ್ತಿಪರರು 2030ರ ಹೊತ್ತಿಗೆ ಶೇ.100ರಷ್ಟು ಏರಿಕೆ ಕಾಣುವ ಜತೆಗೆ ಜಾಗತಿಕವಾಗಿ ದುಪ್ಪಟ್ಟು ಬೇಡಿಕೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಡಿಜಿಟಲ್ ಟ್ಯಾಲೆಂಟ್ ಸಲ್ಯೂಷನ್ ಆಗಿರುವ ಎನ್ಎಲ್ಬಿ ಸರ್ವೀಸ್ ವರದಿ ಅನುಸಾರ, ಜಾಗತಿಕವಾಗಿ ಆರೋಗ್ಯ ಸೇವಾ ವೃತ್ತಿಪರರ ಕೊರತೆಯು ಭಾರತೀಯ ವೈದ್ಯರ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಅವರು ಕೌಶಲ್ಯ ಹೊಂದಿದ್ದಾರೆ. ಜಾಗತಿಕವಾಗಿ ಗಮನಿಸಿದಾಗ ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆಯ ವೈದ್ಯಕೀಯ ಕಾಲೇಜುಗಳಿವೆ. ಯುರೋಪ್, ಗಲ್ಫ್ ಪ್ರದೇಶಗಳು, ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಸ್ರೇಲ್‌ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆರೋಗ್ಯ ವೃತ್ತಿಪರರ ಬೇಡಿಕೆ ಪೂರೈಕೆಯಲ್ಲಿ ಭಾರತ ಮುಂದಿದೆ.
ಈ ದೇಶದಲ್ಲಿ ಹೆಚ್ಚು ಡಿಮ್ಯಾಂಡ್: ವರದಿ ತಿಳಿಸುವಂತೆ, ಭಾರತದ ನರ್ಸ್ಗಳ ಬೇಡಿಕೆ ಕೂಡ ಶೇ 15ರಷ್ಟು ಏರಿಕೆ ಕಂಡಿದೆ. ನಾರ್ವೆ, ಜರ್ಮನಿ, ಆಸ್ಟ್ರೇಲಿಯಾ ಮುಂತಾದೆಡೆ ಬೇಡಿಕೆ ಇದ್ದು, ಕಳೆದ 2-3 ವರ್ಷದಲ್ಲಿ ಯುಕೆ ಮತ್ತು ಯುಎಇಯಲ್ಲಿ ಈ ಬೇಡಿಕೆ 12ರಿಂದ 15ರಷ್ಟು ಹೆಚ್ಚಾಗಿದೆ. ಜಪಾನ್ ಮತ್ತು ನ್ಯೂಜಿಲ್ಯಾಂಡ್ನಲ್ಲಿ ಕೂಡ ಇದೀಗ ಭಾರತದ ವೈದ್ಯರು ಮತ್ತು ನರ್ಸ್ಗಳಿಗೆ ಬೇಡಿಕೆ ಇರುವ ಹೊಸ ತಾಣವಾಗಿ ರೂಪುಗೊಂಡಿದೆ.
ಭಾರತದಲ್ಲಿ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಮಟ್ಟದಲ್ಲಿ ಆರೋಗ್ಯ ವೃತ್ತಿಪರರ ಬೆಳವಣಿಗೆ ಕಾಣಬಹುದಾಗಿದೆ. ವಿದೇಶದಲ್ಲಿ ವಿಶೇಷವಾಗಿ ಯುರೋಪ್ ಮತ್ತು ಗಲ್ಫ್ ಪ್ರದೇಶದಲ್ಲಿ ಇವರ ಬೇಡಿಕೆ ಹೆಚ್ಚಿದೆ. ಜಾಗತಿಕ ಪ್ರತಿಭೆಗಳ ಕೊರತೆ, ಕೌಶಲ್ಯಾಧರಿತ ಉಪಕ್ರಮಗಳ ಬೆಳವಣಿಗೆ ಭಾರತೀಯ ಆರೋಗ್ಯ ವೃತ್ತಿಪರರ ಬೇಡಿಕೆಗೆ ಕಾರಣವಾಗಿದೆ. ಭಾರತದ ನರ್ಸ್ಗಳು ವಿಶೇಷವಾಗಿ ಅಗತ್ಯ ಕೌಶಲ್ಯ ಮತ್ತು ಅರ್ಹತೆ ಹೊಂದಿದ್ದು, ವಿವಿಧ ದೇಶಗಳ ಆರೋಗ್ಯ ಸೇವೆಯ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಿದೆ ಎಂದು ಎನ್ಎಲ್ಪಿ ಸರ್ವಿಸ್ನ ಸಿಇಒ ಅಲುಗ್ ತಿಳಿಸಿದ್ದಾರೆ.
ಮಲೇಷ್ಯಾ, ಇಟಲಿ, ಪೋರ್ಚುಗಲ್, ಪೊಲೆಂಡ್ ಮತ್ತು ಜರ್ಮನಿಯಲ್ಲಿ ಬೇಡಿಕೆ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ. ಮುಂದಿನ ಐದು ವರ್ಷದಲ್ಲಿ ನರ್ಸ್ಗಳು ಬೇಡಿಕೆ ಭಾರೀ ಮಟ್ಟದಲ್ಲಿ ಹೆಚ್ಚಲಿದ್ದು, ಇದು 100 ಪಟ್ಟು ಹೆಚ್ಚಳ ಕಾಣಬಹುದು ಎಂದು ಅಂದಾಜಿಸಲಾಗಿದೆ.
ದೇಶದಲ್ಲೂ ಹೆಚ್ಚುತ್ತಿದೆ ವೈದ್ಯರಿಗೆ ಬೇಡಿಕೆ: ಭಾರತದಲ್ಲಿ ಕೂಡ ಜನಸಂಖ್ಯೆಯ ಬೆಳವಣಿಗೆ, ಜನಸಂಖ್ಯಾ ಬದಲಾವಣೆ ಮತ್ತು ಸಾಂಕ್ರಾಮಿಕವಲ್ಲದ ಸೋಂಕುಗಳ ಹೆಚ್ಚಳದಿಂದ ವೈದ್ಯರ ಸಂಖ್ಯೆಯಲ್ಲಿ ಏರಿಕೆಕಂಡಿದೆ.
2021ರಿಂದ 23ರಲ್ಲಿ ಭಾರತದಲ್ಲಿ ಆರೋಗ್ಯ ಸೇವೆ ವಲಯದಲ್ಲಿ ಶೇ 22ರಷ್ಟು ಹೆಚ್ಚಳ ಕಾಣಬಹುದಾಗಿದೆ. ಇದರಲ್ಲಿ ಬೆಂಗಳೂರರು ಮುಂಚೂಣಿಯಲ್ಲಿದ್ದು, ಇಲ್ಲಿ ಆರೋಗ್ಯ ಸಂಬಂಧಿತ ಉದ್ಯೋಗ ಅವಕಾಶಗಳು ಹೆಚ್ಚಿದೆ. ಇದಾದ ಬಳಿಕ ದೆಹಲಿ, ಚೆನ್ನೈ ಮತ್ತು ಹೈದರಾಬಾದ್ ಇದೆ.
ಅಷ್ಟೇ ಅಲ್ಲದೇ, ಕೊಯಮತ್ತೂರ್, ಎರ್ನಾಕುಲಂ, ಅಹಮದಾಬಾದ್, ತಿರುವನಂತಪುರಂ ಮತ್ತು ಕೊಚ್ಚಿಯಂತಹ ಟೈರ್ 2 ನಗರಗಳಲ್ಲೂ ಕೂಡ ಆರೋಗ್ಯ ವೃತ್ತಿರಪರರ ಉದ್ಯೋಗದಲ್ಲಿ ಏರಿಕೆ ಕಂಡಿದೆ.
ಈ ಆರೋಗ್ಯ ಸೇವಾ ಪ್ರತಿಭೆಗಳ ಪೂರೈಕೆಯಲ್ಲಿ ಕೇರಳ ಗಮನಾರ್ಹವಾಗಿದೆ. ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶ ವಿಶೇಷವಾಗಿ ಯುಎಇಗೆ ದೇಶಗಳಿಗೆ ಈ ರಾಜ್ಯ ಹೆಚ್ಚಿನ ಸೇವೆ ಒದಗಿಸುತ್ತಿದೆ. ಈ ಜಾಗತಿಕ ಬೇಡಿಕೆ ಅನುಸಾರವಾಗಿ ಗುಜರಾತ್ ಕೂಡ ಸಕ್ರಿಯಾಗಿ ನರ್ಸಿಂಗ್ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ.
ಹೋಮ್ ಹೆಲ್ತ್ಕೇರ್ಗಳ ಬೇಡಿಕೆ ಕೂಡ ಕೋವಿಡ್ 19 ಬಳಿಕ ಹೆಚ್ಚುತ್ತಿದೆ. ಪಿಜಿಯೋಥೆರಪಿ, ನೋವು ನಿರ್ವಹಣೆ, ದೀರ್ಘ ರೋಗದ ಆರೈಕೆ ಕ್ಷೇತ್ರದಲ್ಲಿ ಬೇಡಿಕೆ ಕಂಡುಬಂದಿದೆ. (ಐಎಎನ್ಎಸ್)
ಇದನ್ನೂ ಓದಿ: 2040ರ ವೇಳೆಗೆ ಪ್ರಾಸ್ಟೇಟ್ ಕ್ಯಾನ್ಸರ್ ಹೊರೆ ದುಪ್ಪಟ್ಟು: ಲ್ಯಾನ್ಸೆಟ್