ನಮ್ಮ ದಿನನಿತ್ಯದ ಅಡುಗೆ ರೆಸಿಪಿಗಳಲ್ಲಿ ಇರಲೇಬೇಕಾದ ಒಂದು ವಸ್ತು ಕರಿಬೇವು. ಇದು ಭಕ್ಷ್ಯಗಳಿಗೆ ರುಚಿ ಹಾಗು ಪರಿಮಳ ನೀಡುತ್ತದೆ. ಈ ಎಲೆ ಆರೋಗ್ಯಕ್ಕೂ ಉತ್ತಮ. ಏಕೆಂದರೆ, ಹಲವು ಔಷಧೀಯ ಗುಣಗಳನ್ನೂ ಇದು ಹೊಂದಿದೆ. ಆದರೆ, ಕೇವಲ ಖಾದ್ಯಗಳಲ್ಲಿ ಹಾಕುವುದಷ್ಟೇ ಅಲ್ಲದೇ, ಚಟ್ನಿ ತಯಾರಿಸಿ ತಿಂದರೂ ಸಾಕಷ್ಟು ಆರೋಗ್ಯ ಲಾಭಗಳಿವೆ.
ಹತ್ತು ನಿಮಿಷದಲ್ಲಿ ಕರಿಬೇವಿನ ಚಟ್ನಿಯನ್ನು ಬಹಳ ಸುಲಭವಾಗಿ ತಯಾರಿಸಬಹುದು. ಬಿಸಿಬಿಸಿ ಅನ್ನದಲ್ಲಿ ತುಪ್ಪ ಹಾಕಿ ತಿಂದರಂತೂ ರುಚಿ ಅದ್ಭುತ!. ಹಾಗಾದರೆ ಬನ್ನಿ, ಈ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಯಾವುವು?, ತಯಾರಿಸುವುದು ಹೇಗೆ ನೋಡೋಣ.
ಬೇಕಾಗುವ ಪದಾರ್ಥಗಳು:
- ಕರಿಬೇವಿನ ಎಲೆಗಳು - 2 ಕಪ್
- ಎಣ್ಣೆ - 3 ಟೀ ಸ್ಪೂನ್
- ಕಡಲೆ - 1 ಚಮಚ
- ಉದ್ದಿನಬೇಳೆ - 1 ಚಮಚ
- ಕೊತ್ತಂಬರಿ ಸೊಪ್ಪು - ಅರ್ಧ ಚಮಚ
- ಮೆಂತ್ಯ ಕಾಳು - ಕಾಲು ಚಮಚ
- ಮೆಣಸಿನಕಾಯಿ - 10
- ಜೀರಿಗೆ - 1 ಚಮಚ
- ಬೆಳ್ಳುಳ್ಳಿ ಎಸಳು - 8
- ಹುಣಸೆ ಹಣ್ಣು - ಸ್ವಲ್ಪ
- ಒಣಮೆಣಸಿನಕಾಯಿ - 2
ತಯಾರಿಸುವ ವಿಧಾನ:
- ಎರಡು ಕಪ್ ಕರಿಬೇವು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಪಕ್ಕಕ್ಕಿಡಿ. ಪಾಕಕ್ಕೆ ಬೇಕಾದ ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ನೆನೆಸಿಡಿ.
- ಒಲೆ ಮೇಲೆ ಬಾಣಲೆ ಇಡಿ. ಒಂದು ಚಮಚ ಎಣ್ಣೆ ಸುರಿಯಿರಿ. ಸ್ವಲ್ಪ ಬಿಸಿಯಾದ ನಂತರ ಕರಿಬೇವಿನ ಎಲೆಗಳನ್ನು ಹಾಕಿ. ಉರಿ ಕಡಿಮೆಯಿಟ್ಟು ಕರಿಬೇವಿನ ಸೊಪ್ಪನ್ನು ಚೆನ್ನಾಗಿ ಹುರಿಯಿರಿ. ನಂತರ ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕಿಡಿ.
- ಅದೇ ಬಾಣಲೆಯಲ್ಲಿ ಇನ್ನೊಂದು ಚಮಚ ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಮೆಂತ್ಯ ಮತ್ತು ರುಚಿಗೆ ತಕ್ಕಷ್ಟು ಒಣಮೆಣಸಿನಕಾಯಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಹುರಿದು ಪಕ್ಕಕ್ಕಿಡಿ.
- ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದರಲ್ಲಿ ಹುರಿದಿರುವ ಪದಾರ್ಥದ ಜೊತೆಗೆ ಜೀರಿಗೆ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ರುಬ್ಬಿಕೊಳ್ಳಿ. ಮಿಕ್ಸ್ ಮಾಡಿದ ನಂತರ ನೆನೆಸಿದ ಹುಣಸೆ ಹಣ್ಣಿನ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಒಲೆ ಮೇಲೆ ಬಾಣಲೆ ಇಟ್ಟು ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಪುಟಾಣಿ ಮತ್ತು ಒಣ ಮೆಣಸಿನಕಾಯಿ ಜೊತೆ ಸ್ವಲ್ಪ ಕರಿಬೇವಿನ ಸೊಪ್ಪು ಹುರಿಯಿರಿ.
- ಇದಾದ ನಂತರ ಹಿಂದೆ ರುಬ್ಬಿದ ಕರಿಬೇವಿನ ಮಸಾಲೆಯನ್ನು ಇದಕ್ಕೆ ಒಗ್ಗರಣೆ ಕೊಟ್ಟು ಚೆನ್ನಾಗಿ ಕಲಸಿರಿ. ಅಷ್ಟೇ, ಈಗ ರುಚಿಕರವಾದ 'ಕರಿಬೇವಿನ ಚಟ್ನಿ' ರೆಡಿ!