ಹೈದರಾಬಾದ್: ಸಹೋದರ ಸಂಬಂಧಿಗಳು ಅಥವಾ ನಿಕಟ ಸಂಬಂಧಿಗಳ ನಡುವಿನ ವಿವಾಹದಿಂದ ಹುಟ್ಟಲಿರುವ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅನೇಕ ವೇಳೆ ಇದು ಅನುವಂಶಿಕ ಕಾಯಿಲೆ ಜೊತೆಗೆ ಕಣ್ಣಿನ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಎಲ್‌ವಿ ಪ್ರಸಾದ್ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಆನುವಂಶಿಕ ಕಣ್ಣಿನ ಕಾಯಿಲೆಗಳ (ಎಚ್‌ಇಡಿ) ಬಗ್ಗೆ ಜಾಗೃತಿ ಮೂಡಿಸಲು ಎಲ್‌ವಿ ಪ್ರಸಾದ್ ನೇತ್ರವಿಜ್ಞಾನ ಸಂಸ್ಥೆ ಪ್ರಕಟಣೆ ಹೊರಡಿಸಿದೆ.
ಅಧ್ಯಯನದ ಅನುಸಾರ, ರಕ್ತಸಂಬಂಧಿ ಮತ್ತು ನಿಕಟ ಸಂಬಂಧಿಗಳಲ್ಲಿ ಆನುವಂಶಿಕ ಕಣ್ಣಿನ ಸಮಸ್ಯೆ ಇರುವವರಿಗೆ ಜನಿಸುವ ಮಕ್ಕಳು ರೆಟಿನಾ, ಕಾರ್ನಿಯಾ ಮತ್ತು ಆಪ್ಟಿಕ್ ನರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಇವರಲ್ಲಿ ದುರ್ಬಲ ದೃಷ್ಟಿ, ಕಣ್ಣಿನಲ್ಲಿ ಹೆಚ್ಚಿದ ಒತ್ತಡ ಮತ್ತು ಅಸಮರ್ಥತೆಯಂತಹ ಸಮಸ್ಯೆಗಳನ್ನು ಹೊಂದಿರುತ್ತಾರೆ. ಹಗಲು ಅಥವಾ ರಾತ್ರಿ ಸರಿಯಾಗಿ ನೋಡಲು ಇವರಿಗೆ ಸಾಧ್ಯವಾಗುವುದಿಲ್ಲ.
ಎಲ್ ವಿ ಪ್ರಸಾದ್ ಕಣ್ಣಿನ ಸಂಸ್ಥೆಯ ಡಾ ಮಂಜುಶ್ರೀ ಭಾತೆ ತಿಳಿಸುವಂತೆ, ಇಂತಹ ಮಕ್ಕಳಲ್ಲಿ ಕಾರ್ನಿಯಲ್ ಕಲೆಗಳು, ಕಣ್ಣಿನ ಪೊರೆಗಳು, ಗ್ಲುಕೋಮಾ ಮತ್ತು ರೆಟಿನೈಟಿಸ್ ಪಿಗ್ಮೆಂಟೋಸಾವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವಿದೆ. ಎಚ್‌ಇಡಿ ಕುಟುಂಬದ ಇತಿಹಾಸ ಹೊಂದಿರುವ ದಂಪತಿಗಳಿಗೆ ಆನುವಂಶಿಕ ಪರೀಕ್ಷೆಗೆ ಒಳಗಾಗುವ ಅಗತ್ಯ ಇರುತ್ತದೆ. ಇದರಿಂದ ಹುಟ್ಟಿದ ಮಕ್ಕಳು ಆನುವಂಶಿಕ ಕಣ್ಣಿನ ಸಮಸ್ಯೆಗೆ ಒಳಗಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಮಗು ಜನಿಸಿದ ಆರಂಭಿಕ ಹಂತದಲ್ಲಿ ಈ ಸಮಸ್ಯೆ ಪತ್ತೆ ಮಾಡುವುದರಿಂದ ಶಸ್ತ್ರಚಿಕಿತ್ಸೆ ಮತ್ತು ಔಷಧಗಳ ಮೂಲಕ ಇದರಿಂದಾಗುವ ಅಪಾಯವನ್ನು ತಡೆಯಬಹುದು ಎನ್ನುತ್ತಾರೆ.
ಈ ರೀತಿ ಅನುವಂಶಿಕ ರೋಗದ ಕುರಿತ ಸಮಾಲೋಚನೆ ನಡೆಸುವುದರಿಂದ ಭವಿಷ್ಯದ ಗರ್ಭಧಾರಣೆ ಸಂದರ್ಭದಲ್ಲಿ ಮಗುವಿಗೆ ರೋಗ ಹೊಂದುವ ಅಪಾಯದ ಕುರಿತು ತಿಳಿಸಿ, ಇದಕ್ಕೆ ಪರಿಹಾರ ನೀಡಲು ಸಹಾಯವಾಗುತ್ತದೆ.
ಈ ಸಂಶೋಧನೆಗಳು ರಕ್ತಸಂಬಂಧ ಅಥವಾ ನಿಕಟ ಸಂಬಂಧಗಳ ನಡುವಿನ ಅನುವಂಶಿಕ ಕಾಯಿಲೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಹೆಚ್ಚಿನ ಅರಿವಿನ ಅಗತ್ಯ ತಿಳಿಸುತ್ತದೆ. ಜೊತೆಗೆ ಪೋಷಕರಿಗೆ ಅನುವಂಶಿಕ ಸಮಾಲೋಚನೆ ನಡೆಸುವುದರಿಂದ ಮಗುವಿಗೆ ಈ ಸಮಸ್ಯೆ ಅಪಾಯದಿಂದ ಹೇಗೆ ಮುಕ್ತವಾಗಿಸಬೇಕು ಎಂಬ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ. ಕುಟುಂಬಗಳು ಮಕ್ಕಳಲ್ಲಿ ಉಂಟಾಗುವ ದೃಷ್ಟಿ ದೋಷಕ್ಕೆ ಇತರ ಅಂಶಗಳು ಕಾರಣ ಎಂದು ಆರೋಪಿಸಿದರೂ ಇದರಲ್ಲಿ ಅನುವಂಶಿಕ ಪರಿಸ್ಥಿತಿಯನ್ನು ಕಡೆಗಾಣಿಸಬಾರದಾಗಿದೆ.
ಇದನ್ನೂ ಓದಿ: ಬೊಜ್ಜು ಕರಗಿಸಬೇಕಾ? ಬೆಳಗ್ಗೆ ಬದಲು ಸಂಜೆ ವ್ಯಾಯಾಮ ಮಾಡಿ ಎನ್ನುತ್ತಿದೆ ಅಧ್ಯಯನ