ಹೈದರಾಬಾದ್: ಇಂದು ಜಗತ್ತಿನ ಎಲ್ಲ ಮೂಲೆಗಳಲ್ಲಿ ಪ್ರಖ್ಯಾತವಾದ ಅಹಾರಗಳು ನಗರಗಳಲ್ಲಿ ಲಭ್ಯವಾಗುತ್ತದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೇ, ಜನರು ಕೂಡ ಈ ಆಹಾರಗಳನ್ನು ಸೇವಿಸುತ್ತಿದ್ದಾರೆ. ಇದರ ಪರಿಣಾಮ ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಹೆಚ್ಚುತ್ತದೆ.
ಇವುಗಳನ್ನು ನಿಯಂತ್ರಣದಲ್ಲಿಡಲು ನಿಯಮಿತ ವ್ಯಾಯಾಮ, ಆರೋಗ್ಯಯುತ ಆಹಾರ ಜೀವನಶೈಲಿ ರೂಢಿಸುವುದು ಅಗತ್ಯ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇದರಿಂದಲೇ ಅವರು ದಿನಕ್ಕೆ 30 - 40 ನಿಮಿಷದ ವಾಕಿಂಗ್ ಆರಂಭಿಸುತ್ತಾರೆ. ಆದರೆ, ಇದು ಕಾರಣಾಂತರದಿಂದ ನಿಂತು ಹೋಗುತ್ತದೆ. ಅನೇಕ ಜನರು ಸಕ್ಕರೆ ಮತ್ತು ಉಪ್ಪು ಸೇವನೆಗೆ ಕಡಿವಾಣ ಹಾಕುತ್ತಾರೆ. ಆದರೆ, ಈ ವ್ರತ ಕೂಡ ವಾರ ಮುಗಿಯುವುದರೊಳಗೆ ಭಂಗವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಏನು? ಹೇಗೆ ಆರೋಗ್ಯ ನಿರ್ವಹಣೆ ಮಾಡಬೇಕು. ಹಾನಿಕಾರಕ ಆಹಾರ ಮತ್ತು ಜಢ ಜೀವನಶೈಲಿಯಿಂದ ದೂರಾಗುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಈ ಸಂಬಂಧ ಅಮೆರಿಕದ ಪ್ರಖ್ಯಾತ ವೈದ್ಯಕೀಯ ಸಂಸ್ಥೆ ಮಯೋ ಕ್ಲಿನಿಕ್ ಇತ್ತೀಚಿಗೆ ಸಂಶೋಧನೆ ನಡೆಸಿದೆ. 'ಒನ್ ಸ್ಟೆಪ್ ಟು ಹೆಲ್ತ್' ಎಂಬ ಅಧ್ಯಯನ ಪ್ರಕಟಿಸಿದೆ. ನೀವು ದೀರ್ಘಕಾಲದವರೆಗೆ ವ್ಯಾಯಾಮ ಮಾಡಬೇಕು ಎಂದರೆ ಸರಿಯಾದ ದಾರಿಯಲ್ಲಿ ಒಂದೊಂದೇ ಹಂತದಲ್ಲಿ ದೈಹಿಕ ಚಟುವಟಿಕೆ ಹೆಚ್ಚಿಸಿ ಎಂದು ಸಲಹೆ ನೀಡಿದೆ.
ಮೂರು ವಾರದಿಂದ ಮೂರು ತಿಂಗಳ ಯೋಜನೆ: ಡಯಟ್, ವ್ಯಾಯಾಮ, ನಿದ್ರೆ ಮತ್ತು ಮಾನಸಿಕ ಒತ್ತಡ ಒಂದಕ್ಕೊಂದು ಸಂಬಂಧ ಹೊಂದಿದೆ. ಪ್ರತಿಯೊಂದನ್ನು ನಿಧಾನವಾಗಿ ಮುಂದೆ ತೆಗೆದುಕೊಂಡು ಹೋದಲ್ಲಿ ದೀರ್ಘ ಪ್ರಯೋಜನ ಪಡೆಯಬಹುದು. ಈ ಯೋಜನೆಯನ್ನು ಮೂರು ವಾರದಿಂದ ಮೂರು ತಿಂಗಳಿಗೆ ಬದಲಾಯಿಸಿ. ಜೊತೆಗೆ ವಾರಕ್ಕೆ ಒಂದು ಗುರಿ ರೂಪಿಸಿ ಹಾಗೂ ಅದನ್ನು ತಲುಪಿ. ಮುಂದಿನ ವಾರ ಮತ್ತೊಂದು ಗುರಿ ರೂಪಿಸಿ. ಹೀಗೆ ಪ್ರತಿ ವಾರ ಒಂದೊಂದು ಗುರಿ ಮೂಲಕ ದೀರ್ಘದ ಗುರಿ ಸಾಧಿಸಿ.
ಒಂದೇ ಬಾರಿ ಬಾಯಿಕಟ್ಟಬೇಡಿ: ಅಧಿಕ ಕೊಬ್ಬು, ಉಪ್ಪು, ಮತ್ತು ಹೆಚ್ಚಿನ ಸಕ್ಕರೆ, ಜಂಕ್ ಆಹಾರಗಳನ್ನು ತಕ್ಷಣಕ್ಕೆ ಬಿಡುವುದು ಕಷ್ಟ. ಈ ಆಹಾರಗಳನ್ನು ವರ್ಷಗಟ್ಟಲೇ ಸೇವಿಸುವುದರಿಂದ ವಿಷಕಾರಿಯಲ್ಲ. ಆದರೆ ಹೆಚ್ಚು ಸೇವನೆ ಮಾಡುವುದು ಅಪಾಯಕಾರಿ. ಇದೇ ಕಾರಣಕ್ಕೆ ಈ ಅಭ್ಯಾಸಗಳನ್ನು ನಿಧಾನವಾಗಿ ರೂಢಿಸಿ ಪ್ರತಿ ದಿನ ಸೇವಿಸುವ ಬದಲಾಗಿ ವಾರಕ್ಕೆ ಎರಡು ಬಾರಿ ಸೇವಿಸಿ. ಇದಾದ ಬಳಿಕ ವಾರಕ್ಕೆ ಒಂದು, ನಂತರ ತಿಂಗಳಿಗೆ ಎರಡು ಬಾರಿ ಸಣ್ಣ ಪ್ರಮಾಣದಲ್ಲಿ ಈ ರೀತಿ ಕ್ರಮೇಣ ಇವುಗಳಿಂದ ದೂರವಾಗಿ. ಅನಾರೋಗ್ಯ ಆಹಾರಗಳನ್ನು ಕಡಿಮೆ ಮಾಡಿ, ಹಣ್ಣು ಮತ್ತು ತರಕಾರಿಯನ್ನು ಅದರ ಬದಲಾಗಿ ಬಳಸಿ.
ಹಂತ ಹಂತವಾಗಿ ಸ್ಥಿರತೆ: ವಾರದಲ್ಲಿ ಐದು ದಿನ, ದಿನಕ್ಕೆ 30 ನಿಮಿಷ ವಾಕ್ ಮಾಡುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ. ಆದರೆ, ವ್ಯಾಯಾಮ ಮಾಡದವರು, ನಿಧಾನವಾಗಿ ಇದನ್ನು ಆರಂಭಿಸಿ. ಇಂತಹವರಿಗೆ ಮಯೋ ಕ್ಲಿನಿಕ್ ಕೆಲವು ಶಿಫಾರಸುಗಳನ್ನು ಮಾಡಿದೆ. ಅಂದೆಂದರೆ ಮೊದಲಿಗೆ 10 ನಿಮಿಷದ ವ್ಯಾಯಾಮ ಮಾಡಿ. ಇದನ್ನು ದಿನದಿಂದ ದಿನಕ್ಕೆ 5 ನಿಮಿಷ ಹೆಚ್ಚಿಸಿಕೊಳ್ಳುತ್ತಾ ಸಾಗಿ. ಬರು ಬರುತ್ತಾ 30 ನಿಮಿಷಕ್ಕೆ ಬನ್ನಿ. ಈ ರೀತಿ ಹಂತ ಹಂತವಾಗಿ ವ್ಯಾಯಾಮ ಮಾಡುವುದರಿಂದ ಸ್ಥಿರತೆ ಉಂಟಾಗುತ್ತದೆ.
ಧೂಮಪಾನದಿಂದ ದೂರವಿರಿ: ಧೂಮಪಾನವನ್ನು ಕೂಡ ಒಂದೇ ಸಲ ನಿಲ್ಲಿಸಬಾರದು. ಇದನ್ನು ಕೂಡ ಹಂತ ಹಂತವಾಗಿ ತ್ಯಜಿಸಬೇಕು. ಧೂಮಪಾನ ತ್ಯಜಿಸುವುದರಿಂದ ಶೇ 50ರಷ್ಟು ಅಪಾಯ ಕಡಿಮೆ ಮಾಡಬಹುದು. ಧೂಮಪಾನ ಬಿಟ್ಟು ಎರಡರಿಂದ ಮೂರು ವರ್ಷದಲ್ಲಿ ಸಾಮಾನ್ಯ ಆರೋಗ್ಯ ಪಡೆಯಬಹುದು. ಧೂಮಪಾನದಿಂದ ಉಂಟಾಗುವ ಅಡ್ಡ ಪರಿಣಾಮ ತಪ್ಪಿಸಲು ನಿಕೋಟಿನ್ ಪ್ಯಾಚಸ್ ಮತ್ತು ಗಮ್ಗಳು ಪರ್ಯಾಯವಾಗಿದೆ.
ಉತ್ತಮ ನಿದ್ರೆ ಅವಶ್ಯ: ನಿದ್ದೆ ಸರಿಯಾಗಿ ಮಾಡದೇ ಹೋದಲ್ಲಿ ಅದು ಸಂಪೂರ್ಣ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ತಡವಾಗಿ ಏಳುವುದರಿಂದ ವ್ಯಾಯಾಮ ಮಾಡಲು ಸಮಯ ವಿಲ್ಲದಂತೆ ಆಗುತ್ತದೆ. ಜೊತೆಗೆ ತಿಂಡಿ ತಿನ್ನಲೂ ಆಗದೇ ಓಡುವ ಪರಿಸ್ಥಿತಿ ಉಂಟಾಗುತ್ತದೆ. ಅದೇ ರೀತಿ ಕಡಿಮೆ ನಿದ್ರೆ ಮಾಡಿದರೆ, ದೀರ್ಘ ಒತ್ತಡ ಸಿಂಡ್ರೋಮ್ ಉಂಟಾಗುತ್ತದೆ. ಇದರಿಂದ ಕೀಲು, ಸ್ನಾಯುಗಳಲ್ಲಿ ನೋವು ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 7 ಗಂಟೆ ನಿದ್ರೆ ಅವಶ್ಯ.
ಡಯಟ್ ಮತ್ತು ವ್ಯಾಯಾಮದಲ್ಲಿನ ನಿಧಾನ ಆರಂಭವೂ ಸ್ಥಿರತೆ ಪಡೆಯಲು ಸಹಾಯ ಮಾಡುತ್ತದೆ. ಇದು ಹೃದಯ ಸೇರಿದಂತೆ ಇತರ ಅಂಗಾಂಗಗಳಿಗೆ ಪ್ರಯೋಜನಕಾರಿಯಾಗಿದೆ. ಸ್ಟಂಟ್ ಹೊಂದಿರುವವರು, ಬೈಪಾಸ್ ಸರ್ಜರಿಗೆ ಒಳಗಾದವರು ಕೂಡ ನಿಧಾನವಾಗಿ ತಮ್ಮ ದೈಹಿಕ ಚಟುವಟಿಕೆ ಆರಂಭಿಸಬೇಕು. ವಾಕಿಂಗ್ನಿಂದ ವ್ಯಾಯಾಮ ಆರಂಭಿಸಬೇಕು. ದಿನದಿಂದ ದಿನಕ್ಕೆ ಇದರ ಸಮಯ ಮತ್ತು ವೇಗ ಹೆಚ್ಚಿಸಬೇಕು. ಟೆನ್ನಿಸ್, ಗಾಲ್ಫ್, ಈಜಿನಂತಹ ದೈಹಿಕ ವ್ಯಾಯಾಮವನ್ನು ನಡೆಸಬಹುದು. ಹೃದಯ ಪಂಪ್ ಹೆಚ್ಚು ಕ್ಷೀಣಿಸಿದಲ್ಲಿ ಇವುಗಳನ್ನು ಮಾಡದಿರುವುದು ಉತ್ತಮ. ಇಲ್ಲದೇ ಹೋದಲ್ಲಿ ಇದನ್ನು ಮಾಡಬಹುದು. ಆದರೆ ತೂಕ ಎತ್ತುವುದು, ಹತ್ತುವುದು, ಜೋರಾಗಿ ಓಡುವಂತಹ ವ್ಯಾಯಾಮ ನಡೆಸಬಾರದು ಎಂದು ಹಿರಿಯ ಹೃದ್ರೋಗ ತಜ್ಞ ಡಾ ಎವಿ ಅಂಜನೇಲು ತಿಳಿಸಿದ್ದಾರೆ.
ಡಯಟ್ನಲ್ಲಿ ಹಣ್ಣು, ತರಕಾರಿ ಮತ್ತು ನಟ್ಸ್ ಅನ್ನು ಸೇರಿಸಬೇಕು. ಇದೇ ಕಾರಣಕ್ಕೆ ಎಲ್ಲ ಆಹಾರ ವಿಧದಲ್ಲಿ ಸಮತೋಲಿತ ಆಹಾರ ಮುಖ್ಯವಾಗಿದೆ. ಕೆಲವರು ಆರೋಗ್ಯಯುರ ಆಹಾರದ ಹೆಸರಲ್ಲಿ ಇದನ್ನು ಹೆಚ್ಚು ಮಾಡಬಹುದು. ಉದಾಹರಣೆ, ಫ್ಲಕ್ಸ್ ಸೀಡ್ (ಅಗಸೆ ಬೀಜ) ಕೊಲೆಸ್ಟ್ರಾಲ್ ಅನ್ನು ನಿತ್ಯ ಬಳಕೆ ಮಾಡುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಆದರೆ ಇದು ಸರಿಯಲ್ಲ. ನಿಮ್ಮ ತೂಕ ಮತ್ತು ಎತ್ತರಕ್ಕೆ ಅನುಗುಣವಾಗಿ ತಜ್ಞರ ಸಲಹೆ ಮೇರೆಗೆ ಬಳಕೆ ಮಾಡಬೇಕು. ಬಹುತೇಕರು ದಿನಕ್ಕೆ 2 ಲೀಟರ್ ನೀರನ್ನು ಕುಡಿಯುವುದಿಲ್ಲ. ಆದರೆ, ನೀರು ಅತ್ಯಗತ್ಯವಾಗಿದೆ ಎಂಬುದು ಮರೆಯಬಾರದು ಎಂದು ಹಿರಿಯ ಪೌಷ್ಟಿಕಾಂಶ ತಜ್ಞೆ ಡಾ ಲತಾಶಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾನಸಿಕ ಆರೋಗ್ಯ ಸವಾಲುಗಳಿಗೆ ಸಂಜೀವಿನಿ Tele MANASಗೆ ಪ್ರತಿನಿತ್ಯ 3,500 ಕರೆ