ಹೈದರಾಬಾದ್: ವಾಕಿಂಗ್ ಒಂದು ಸುಲಭವಾದ ವ್ಯಾಯಾಮವಾಗಿದ್ದು, ಅದನ್ನು ಎಲ್ಲಿ ಬೇಕಾದರೂ ಮಾಡಬಹುದು. ಆದರೆ ವಾಕಿಂಗ್ ಬಗ್ಗೆ ಅನೇಕರಿಗೆ ಹಲವು ಅನುಮಾನಗಳಿರುತ್ತವೆ. ದಿನದ ಯಾವ ಸಮಯದಲ್ಲಿ ವಾಕಿಂಗ್ ಮಾಡಿದ್ರೆ ಹೆಚ್ಚು ಪ್ರಯೋಜನಗಳಿವೆ ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಅಷ್ಟೇ ಅಲ್ಲ, ಕೆಲವರಿಗೆ ಬೆಳಗಿನ ವಾಕಿಂಗ್ ಒಳ್ಳೆಯದೇ? ಸಂಜೆ ವಾಕಿಂಗ್ ಪ್ರಯೋಜನಕಾರಿಯೇ? ಎಂಬ ಪ್ರಶ್ನೆಗಳು ಮನದಲ್ಲಿ ಕಾಡುತ್ತಿರುತ್ತವೆ. ಈ ಬಗ್ಗೆ ತಜ್ಞರು ಹೇಳುವ ಸಲಹೆ ಈ ರೀತಿಯಾಗಿದೆ.
ವಾಕಿಂಗ್ ಮಾಡಲು ಈ ಅವಧಿ ಅತ್ಯುತ್ತಮ : ದಿನನಿತ್ಯ ವಾಕಿಂಗ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ನಡಿಗೆಯಿಂದ ದೇಹ ಫಿಟ್ ಆಗುತ್ತದೆ. ದಿನವಿಡೀ ಆ್ಯಕ್ಟೀವ್ ಆಗಿ ಇರುವಂತೆ ಮಾಡುತ್ತದೆ. ಬಿಪಿ ನಿಯಂತ್ರಣಕ್ಕೆ ಬರುತ್ತದೆ. ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ. ಆದರೆ ನಿಜವಾದ ಸಮಸ್ಯೆ ಏನೆಂದರೆ. ದಿನದ ಯಾವ ಸಮಯದಲ್ಲಿ ವಾಕಿಂಗ್ ಮಾಡುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದೆಂಬುದು ಕೆಲವರ ಪ್ರಶ್ನೆಯಾಗಿದೆ. ಆದ್ರೂ ಕೆಲವು ಅಧ್ಯಯನಗಳ ಪ್ರಕಾರ, ವಿವಿಧ ಸಮಯಗಳಲ್ಲಿ ನಡೆಯುವ ಪ್ರಯೋಜನಗಳು ಸಹ ವಿಭಿನ್ನವಾಗಿವೆ. ಬೆಳಗ್ಗೆ ಮತ್ತು ಸಂಜೆಯ ವಾಕಿಂಗ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಈ ಎರಡರಲ್ಲಿ ಯಾವುದು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ ಎಂಬುದನ್ನು ಈಗ ನೋಡೋಣ.
ಬೆಳಗ್ಗೆ ವಾಕಿಂಗ್‌ನ ಪ್ರಯೋಜನಗಳು: ಹೆಚ್ಚಿನ ಜನರು ಬೆಳಗಿನ ವಾಕಿಂಗ್ ಅನ್ನು ಹೆಚ್ಚು ಮಾಡುತ್ತಾರೆ. ವಾಸ್ತವವಾಗಿ, ಬೆಳಗಿನ ಬಿಸಿಲಿನಲ್ಲಿ ನಡೆಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಕಾರಣದಿಂದಾಗಿ, ದೇಹವು ಅಗತ್ಯವಾದ ವಿಟಮಿನ್ ಡಿ ಅನ್ನು ಪಡೆಯುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಇದರಿಂದ ಕ್ಯಾಲೋರಿ ಬೇಗ ಬರ್ನ್ ಆಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಬೆಳಗಿನ ನಡಿಗೆ ನಿದ್ರೆಯ ಚಕ್ರವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಅವರು ದಿನವಿಡೀ ಕ್ರಿಯಾಶೀಲರಾಗಿರುತ್ತಾರೆ. ಇವುಗಳ ಜೊತೆಗೆ ಮುಂಜಾನೆಯ ಪ್ರಶಾಂತ ಹಾಗೂ ಶುದ್ಧ ಗಾಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಚಳಿಗಾಲದಲ್ಲಿ ಬೆಳಗಿನ ನಡಿಗೆ ಸ್ವಲ್ಪ ಕಷ್ಟಕರವಾಗಿದ್ದು, ತಣ್ಣನೆಯ ಗಾಳಿಯಿಂದ ಕೀಲು ನೋವು ಹೆಚ್ಚುತ್ತದೆ. ಜರ್ನಲ್ ಆಫ್ ಫಿಸಿಕಲ್ ಆಕ್ಟಿವಿಟಿ ಅಂಡ್ ಹೆಲ್ತ್‌ನಲ್ಲಿ ಪ್ರಕಟವಾದ 2014 ರ ಅಧ್ಯಯನವು ಬೆಳಗಿನ ನಡಿಗೆಯು ಮನಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿದಿದೆ.
ಸಂಜೆಯ ವಾಕ್ನ ಪ್ರಯೋಜನಗಳು: ಸಂಜೆಯ ನಡಿಗೆ ಇಡೀ ದಿನದ ಆಯಾಸ ಮತ್ತು ಒತ್ತಡವನ್ನು ಹೋಗಲಾಡಿಸುತ್ತದೆ ಎನ್ನುತ್ತಾರೆ ತಜ್ಞರು. ಜರ್ನಲ್ ಆಫ್ ಸ್ಪೋರ್ಟ್ಸ್ ಸೈನ್ಸ್ ಅಂಡ್ ಮೆಡಿಸಿನ್‌ನಲ್ಲಿ ಪ್ರಕಟವಾದ 2010 ರ ಅಧ್ಯಯನ ಪ್ರಕಾರ, ಸಂಜೆ ವಾಕಿಂಗ್ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಅಂತೆಯೇ ದೇಹದಲ್ಲಿನ ಸ್ನಾಯುಗಳಿಗೆ ಸಾಕಷ್ಟು ವಿಶ್ರಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ರಾತ್ರಿಯ ನಿದ್ದೆಗೆ ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಸಂಜೆ ವಾಕಿಂಗ್‌ನ ಪ್ರಮುಖ ಸಮಸ್ಯೆ ಎಂದ್ರೆ ಶುದ್ಧ ಗಾಳಿಯ ತೊಂದರೆ ಎದುರಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ಸಂಜೆ ವಾಕಿಂಗ್ ಮಾಡುವುದರಿಂದ ಹಸಿವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಂತಿಮವಾಗಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆದಷ್ಟು ಸಂಜೆ ವಾಕಿಂಗ್ ಮಾಡುವುದಕ್ಕಿಂತ ಬೆಳಗ್ಗೆ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಓದಿ: ಒಂದು ಕಿಲೋ ತೂಕ ಕರಗಿಸಲು ನೀವು ಎಷ್ಟು ದೂರ ನಡೆಯಬೇಕು? ಎಷ್ಟು ಕ್ಯಾಲೊರಿ ಬರ್ನ್ ಮಾಡಬೇಕು ಗೊತ್ತಾ?