ಅನೇಕರಲ್ಲಿ ಸ್ವಲ್ಪ ಆಹಾರ ತಿಂದರೂ ಇದರಿಂದ ತೂಕ ಹೆಚ್ಚುತ್ತದೆ ಎಂಬ ಮನೋಭಾವ ಇರುತ್ತದೆ. ಇದೊಂದು ರೀತಿಯಲ್ಲಿ ತಿನ್ನುವಿಕೆಯ ಅಸ್ವಸ್ಥತೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಅನೋರೆಕ್ಸಿಯಾ ನರ್ವೋಸಾ ಎಂದು ಕರೆಯುತ್ತಾರೆ. ಇಂಥ ಮನೋಭಾವ ಗಂಭೀರ ಮನೋವೈದ್ಯಕೀಯ ಪರಿಸ್ಥಿತಿ ಮತ್ತು ಅಕಾಲಿಕ ಸಾವಿನ ಅಪಾಯ ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಮಯೋ ಕ್ಲಿನಿಕ್, ಅನೋರೆಕ್ಸಿಯಾ ನರ್ವೋಸಾ ಎಂಬುದು ತಿನ್ನುವಿಕೆಯ ಅಸ್ವಸ್ಥತೆ. ಇಂತಹ ಜನರು ಸಾಮಾನ್ಯವಾಗಿ ತೂಕ ಹೆಚ್ಚುವ ಭಯ ಹೊಂದಿದ್ದು, ಆಹಾರ ತ್ಯಜಿಸಲು ಮುಂದಾಗುತ್ತಾರೆ. ಇವರು ದೇಹದ ಆಕೃತಿ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಾರೆ. ಇದರಿಂದಾಗ ಅಗತ್ಯ ಪೋಷಕಾಂಶವನ್ನು ಹೊಂದುವುದಿಲ್ಲ. ಜೀರ್ಣಕ್ರಿಯೆ ವ್ಯವಸ್ಥೆ, ಮೂಳೆ, ಹಲ್ಲು ಮತ್ತು ಬಾಯಿ ಹಾಗೂ ಹೃದಯದ ಆರೋಗ್ಯದ ಅಪಾಯವೂ ಎದುರಾಗುತ್ತದೆ. ಅಷ್ಟೇ ಅಲ್ಲ, ಅಸಾಮಾನ್ಯ ಮಟ್ಟದಲ್ಲಿ ತೂಕ ಕಡಿಮೆಯಾಗುತ್ತದೆ ಎಂದಿದೆ.
ಅಧ್ಯಯನ ವರದಿಯನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಈಟಿಂಗ್ ಡಿಸಾರ್ಡರ್ನಲ್ಲಿ ಪ್ರಕಟಿಸಲಾಗಿದೆ. ಅಷ್ಟೇ ಅಲ್ಲ, ಮನೋವೈದ್ಯಕೀಯ ಪರಿಸ್ಥಿತಿ ಹೊಂದಿರುವವರಿಗೆ ಹೋಲಿಕೆ ಮಾಡಿದಾಗ ಅನೋರೆಕ್ಸಿಯಾ ನರ್ವಸ್ನಿಂದ ಬಳಲುತ್ತಿರುವವರ ಸಾವಿನ ದರ ಕೂಡ ಜಾಸ್ತಿ ಇದೆ.
ಅಧ್ಯಯನಕ್ಕಾಗಿ 9.1 ವರ್ಷಗಳ ಕಾಲ 14,774 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದರ ಫಲಿತಾಂಶದಲ್ಲಿ ಅನೋರೆಕ್ಸಿಯಾ ನರ್ವೋಸಾ ಹೊಂದಿರುವ ರೋಗಿಗಳನ್ನು ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದಾಗ ಸಾವಿನ ಅಪಾಯ ದರ 4.5ಪಟ್ಟು ಹೆಚ್ಚು. ಅನೋರೆಕ್ಸಿಯಾ ನರ್ವೋಸ್ ಹೊಂದಿರುವ ರೋಗಿಗಳಲ್ಲಿ ಆತ್ಮಹತ್ಯೆಗೆ ಶರಣಾಗುವ ದರ 13.9ರಷ್ಟಿದೆ. ಇವರಲ್ಲಿ ಖಿನ್ನತೆ, ಆತಂಕ, ಸ್ವಯಂ ಹಾನಿ ಮತ್ತು ನಡವಳಿಕೆ ಬದಲಾವಣೆಗಳನ್ನು ಕಾಣಬಹುದು.
ಇಂಥ ಸಮಸ್ಯೆ ಹೊಂದಿರುವವರು ಅಗತ್ಯ ವೈದ್ಯಕೀಯ ಸಂಪರ್ಕಕ್ಕೆ ಒಳಗಾಗುವುದು ಅಗತ್ಯ. ಸೂಕ್ತ ಚಿಕಿತ್ಸೆ ಮತ್ತು ಆರೋಗ್ಯಯುತ ಆಹಾರ ಸೇವನೆ ಅಭ್ಯಾಸದಿಂದ ಗಂಭೀರ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂದು ಡೆನ್ಮಾರ್ಕ್ನ ಅರ್ಹುಸ್ ಯುನಿವರ್ಸಿಟಿಯ ಮೆಟ್ಟೆ ಸೊಯಿಬೆ ಸಲಹೆ ನೀಡಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ದೇಹದ ತೂಕ ಕಡಿಮೆ ಮಾಡಲು ದಿನವೂ ಕಸರತ್ತು ನಡೆಸಿದ್ದೀರಾ?: ಹೀಗೆ ಮಾಡಿದರೆ ವಾರದಲ್ಲೇ ವೇಟ್ ಲಾಸ್ ಪಕ್ಕಾ