'ಬನಾರಸ್' ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಝೈದ್ ಖಾನ್ ಹಾಗೂ ಈ ವರ್ಷದ ಮೊದಲ ಹಿಟ್ 'ಉಪಾಧ್ಯಕ್ಷ' ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಕಾಂಬಿನೇಶನ್ನಲ್ಲಿ ನೂತನ ಚಿತ್ರವೊಂದು ಆರಂಭವಾಗುತ್ತಿರುವುದು ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಈ ಕುರಿತಂತೆ ಇಂದು ಚಿತ್ರತಂಡ ಕುತೂಹಲಕಾರಿ ಪೋಸ್ಟರ್ ಅನಾವರಣಗೊಳಿಸಿದೆ. ಪೋಸ್ಟರ್ ಮೂಲಕವೇ ಈ ಹೊಸ ಚಿತ್ರ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಶೀಘ್ರದಲ್ಲೇ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿಯೂ ಪೋಸ್ಟರ್ ಮುಖೇನ ಮಾಹಿತಿ ಹಂಚಿಕೊಂಡಿದೆ.
ಝೈದ್ ಖಾನ್ ಪೋಸ್ಟ್: ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡ ಝೈದ್ ಖಾನ್, ''ನಮ್ಮ ಮತ್ತೊಂದು ವಿಭಿನ್ನ ಪ್ರಯತ್ನ. ನಿಮ್ಮ ಆಶೀರ್ವಾದವಿರಲಿ'' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಜೊತೆಗೆ ಶೀಘ್ರದಲ್ಲೇ ಶೀರ್ಷಿಕೆ ಮತ್ತು ಮೊದಲ ನೋಟ ಹಂಚಿಕೊಳ್ಳುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ಪೋಸ್ಟರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನೂತನ ಚಿತ್ರದ ಫಸ್ಟ್ ಲುಕ್ ಹೇಗಿರಬಹುದು? ಎಂಬ ಕುತೂಹಲ ಪ್ರೇಕ್ಷಕರು, ಅಭಿಮಾನಿ ಬಳಗದಲ್ಲಿದೆ. ಫಸ್ಟ್ ಲುಕ್ ಜೊತೆಯೇ ಚಿತ್ರದ ಅಧಿಕೃತ ಶೀರ್ಷಿಕೆ ಸಹ ಬಹಿರಂಗವಾಗಲಿದೆ. ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. 'ಬನಾರಸ್' ಚಿತ್ರದ ನಂತರ ಸಾಕಷ್ಟು ಕಥೆ ಕೇಳಿರುವ ಝೈದ್ ಖಾನ್ ಈ ಚಿತ್ರದ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಕ್ಲಾಸ್ ಆ್ಯಂಡ್ ಮಾಸ್ ಆಡಿಯನ್ಸ್ ಇಷ್ಟಪಡುವ ಕಥೆಯಂತೆ.
ಇದನ್ನೂ ಓದಿ: ತಾಯಿ, ಪತಿ, ಪುತ್ರಿ ಜೊತೆ ಅಯೋಧ್ಯೆಗೆ ಭೇಟಿ ಕೊಟ್ಟ ಪ್ರಿಯಾಂಕಾ ಚೋಪ್ರಾ: ವಿಡಿಯೋ
ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನಿಲ್ ಕುಮಾರ್, ಸುಮಂತ್ - ರಾಧಿಕಾ ಪಂಡಿತ್ ಅಭಿನಯದ ದಿಲ್ ವಾಲ ಚಿತ್ರದ ಮೂಲಕ ನಿರ್ದೇಶಕರಾದರು. ಮಾಲಾಶ್ರೀ ಅವರು ನಾಯಕಿಯಾಗಿ ನಟಿಸಿರುವ ಶಕ್ತಿ ಹಾಗೂ ಶರಣ್ ನಟನೆಯ ರ‍್ಯಾಂಬೊ 2 ಚಿತ್ರದ ನಿರ್ದೇಶಕರು ಸಹ ಅನಿಲ್ ಕುಮಾರ್ ಅವರೇ. ಇತ್ತೀಚಿಗೆ ತೆರೆಕಂಡ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಸಹ ದೊಡ್ಡಮಟ್ಟದ ಯಶಸ್ಸು ಕಂಡಿದೆ. ಉಪಾಧ್ಯಕ್ಷ ನಂತರ, ಅನಿಲ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.
ಇದನ್ನೂ ಓದಿ: ಪ್ರವೀಣ್ ಕುಮಾರ್ ನಟನೆಯ 'ದೇಸಾಯಿ' ಸಿನಿಮಾಗೆ ಲಕ್ಷ್ಮಣ್ ಸವದಿ ಸಾಥ್; ಟೀಸರ್ ನೋಡಿ
ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅನಿಲ್ ಕುಮಾರ್ ಹೊತ್ತಿದ್ದಾರೆ. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ ಪ್ರಕಾಶ್ ಸಂಕಲನ ಹಾಗೂ ರವಿವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ.