ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟನಾಗಿ ಬಹು ಕಾಲ ಬೆಳ್ಳಿಪರದೆ ಮೇಲೆ ರಾರಾಜಿಸಿದ್ದ ವರನಟ ಡಾ. ರಾಜ್ಕುಮಾರ್ ಅವರ ಮೊಮ್ಮಗ ಯುವ ರಾಜ್ಕುಮಾರ್ ತೆರೆ ಮೇಲೆ ಮಿಂಚು ಹರಿಸಲು ಕೆಲವೇ ಕೆಲ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಿ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಅದರ ಭಾಗವಾಗಿ ಇಂದು ಉದಯೋನ್ಮುಖ ನಟನ ಚೊಚ್ಚಲ ಚಿತ್ರದ ಮೊದಲ ಹಾಡು ಅನಾವರಣಗೊಂಡು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
- " class="align-text-top noRightClick twitterSection" data="">
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಎದರಿರುವ ಮೈದಾನದಲ್ಲಿ ಆಯೋಜಿಸಲಾಗಿರೋ ಅದ್ಧೂರಿ ಸಮಾರಂಭದಲ್ಲಿ "ಒಬ್ಬನೇ ಶಿವ ಒಬ್ಬನೇ ಯುವ" ಹಾಡು ಅನಾವರಣಗೊಂಡಿದೆ. ಚೊಚ್ಚಲ ಚಿತ್ರದ ಮೊದಲ ಹಾಡು ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದರು. ಹಾಡು ಬಿಡುಗಡೆ ಆಗುತ್ತಿದ್ದಂತೆ ಸೋಷಿಯಲ್ ಮಿಡಿಯಾದಲ್ಲಿ ಸಿನಿಪ್ರಿಯರು ತಮ್ಮ ಮೆಚ್ಚುಗೆ, ಉತ್ಸಾಹ, ಕುತೂಹಲವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.
ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ 'ಯುವ' ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ರಾಜ್ಕುಮಾರ್ ಮೊಮ್ಮಗನ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಇಂದು ಹಾಡು ಬಿಡುಗಡೆ ಆಗಿದೆ. ಈ ಮೂಲಕ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ.
ಇದನ್ನೂ ಓದಿ: ತಾತನ ಮೆಚ್ಚಿನ ತಾಣಕ್ಕೆ ಮೊಮ್ಮಗ ಭೇಟಿ: ಅಣ್ಣಾವ್ರ ಊರಲ್ಲಿ 'ಯುವ' ಹವಾ
''ಯುವ'' ಟೈಟಲ್ ಟೀಸರ್ ಮತ್ತು ಪೋಸ್ಟರ್ಗಳ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗಮನ ಸೆಳೆದಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರ ಅಂದಮೇಲೆ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವೇ?. ರಾಜಕುಮಾರ, ಕೆ.ಜಿ.ಎಫ್, ಕಾಂತಾರದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇನ್ನು ರಾಜ್ಕುಮಾರ್ ಕುಟುಂಬದ ಅಭಿಮಾನಿಗಳ ಸಂಖ್ಯೆ ಕೂಡ ಅಸಂಖ್ಯಾತ. ಹಾಗಾಗಿ ಈ ಚಿತ್ರ ಬಹುತೇಕ ಗೆಲ್ಲಲಿದೆ ಅನ್ನೋದು ಹೆಚ್ಚಿನವರ ವಿಶ್ವಾಸ.
ಇದನ್ನೂ ಓದಿ: ಚಾಮರಾಜನಗರದಲ್ಲಿಂದು 'ಯುವ' ಟೈಟಲ್ ಸಾಂಗ್ ರಿಲೀಸ್; ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ
ಯುವ ರಾಜ್ಕುಮಾರ್ ಜೊತೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ತೆರೆ ಹಂಚಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಇದೇ ಮಾರ್ಚ್ 28 ರಂದು 'ಯುವ' ಚಿತ್ರಮಂದಿರ ಪ್ರವೇಶಿಸಲಿದ್ದಾನೆ. ರಾಜ್ಕುಮಾರ್ ಮೊಮ್ಮಗನ ಚೊಚ್ಚಲ ಚಿತ್ರ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದು, ಚಿತ್ರ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.