ಚಾಮರಾಜನಗರ: ಯುವ ರಾಜ್ಕುಮಾರ್ ನಟನೆಯ 'ಯುವ' ಚಿತ್ರದ ಮೊದಲ ಹಾಡು 'ಒಬ್ಬನೇ ಶಿವ ಒಬ್ಬನೇ' ಚಾಮರಾಜನಗರದಲ್ಲಿ ಬಿಡುಗಡೆಯಾಯಿತು. ಚಾಮರಾಜೇಶ್ವರ ದೇಗುಲ ಮುಂಭಾಗ ನಿರ್ಮಿಸಿದ್ಧ ವೇದಿಕೆಯಲ್ಲಿ ಜಿಲ್ಲೆಯ 5 ತಾಲೂಕಿನಿಂದ ತಲಾ ಓರ್ವ ಅಭಿಮಾನಿಯನ್ನು ಆಯ್ದು ಅವರ ಮೂಲಕ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಅಪ್ಪು, ಯುವ ಎಂಬ ಘೋಷಣೆಗಳನ್ನು ಕೂಗಿದರು.
ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಂ ಮಾತನಾಡಿ, "ಪುನೀತ್ ಜೊತೆ 7 ವರ್ಷ ಕಳೆದಿದ್ದೇನೆ, ಅವರ ಅಗಲಿಕೆಯ ಬಳಿಕ ಯಾವತ್ತೂ ಅಭಿಮಾನಿಗಳು ನನ್ನನ್ನು ಒಬ್ಬಂಟಿಯಾಗಿ ಬಿಡಲಿಲ್ಲ. ಸಾಕಷ್ಟು ಮಂದಿ ನನ್ನ ಜೊತೆಗೆ ನಿಂತರು. ಅಪ್ಪು ಬಿಟ್ಟು ಹೋದ ನೆನಪು, ಆಶೀರ್ವಾದದಿಂದ ಯುವ ಜೊತೆ ಕೆಲಸ ಮಾಡುವಂತಾಯಿತು. ಪುನೀತ್ ಅವರ ಪೂರ್ತಿ ಆಶೀರ್ವಾದ ಚಿತ್ರದ ಮೇಲಿದೆ. ಅವರ ಅಭಿಮಾನಿಗಳು ಹೆಮ್ಮೆಪಡುವ ಸಿನಿಮಾ ಇದಾಗಲಿದೆ. ತುಂಬಾ ಅಭಿಮಾನದಿಂದ ಚಿತ್ರ ಮಾಡಿದ್ದೇನೆ, ಅಪ್ಪು ಜನ್ಮದಿನಕ್ಕೆ ಮತ್ತೊಂದು ಹಾಡು ಬರಲಿದೆ" ಎಂದು ತಿಳಿಸಿದರು.
ಪುನೀತ್ ರಾಜ್ಕುಮಾರ್ ಅಭಿನಯದ ಜಾಕಿ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ ಯುವ ರಾಜ್ಕುಮಾರ್ ಅಭಿಮಾನಿಗಳನ್ನು ರಂಜಿಸಿದರು. ಬಳಿಕ ಮಾತನಾಡಿದ ಅವರು, "ಚಾಮರಾಜನಗರ ಜನತೆಯನ್ನು ನೋಡಿ ನನಗೆ ಮಾತೇ ಬರುತ್ತಿಲ್ಲ. ಇಷ್ಟೆಲ್ಲಾ ಪ್ರೀತಿ ಕೊಟ್ಟರೆ ನಾನು ಏನು ಮಾಡಲಿ?. ಐವತ್ತು ವರ್ಷದಿಂದ ನಮಗೆ ಪ್ರೀತಿ ಕೊಟ್ಟಿದ್ದೀರಿ. ನಮ್ಮ ಕಲಾಕ್ಷೇತ್ರ ಚಾಮರಾಜನಗರ. ನನ್ನ ಹೆಜ್ಜೆ ಇಲ್ಲಿಂದಲೇ ಶುರುವಾಗಬೇಕು. ನಿಮ್ಮ ಆಶೀರ್ವಾದಕ್ಕೆ ನಾನು ಮತ್ತಷ್ಟು ಕಷ್ಟಪಡುತ್ತೇನೆ. ನಮ್ಮ ಇಡೀ ಕುಟುಂಬದವರನ್ನು ನಾನು ನಿಮ್ಮಲ್ಲಿ ನೋಡುತ್ತೇನೆ" ಎಂದರು.
ಅಭಿಮಾನಿಗಳ ಜತೆ ಅಪ್ಪು ಅಪ್ಪು ಎಂದು ಕೂಗಿದ ಯುವ, "ನನ್ನ ಹೃದಯ ಅಪ್ಪು ಅಪ್ಪು ಎಂದು ಹೊಡೆದುಕೊಳ್ಳುತ್ತಿದೆ. ನನ್ನನ್ನು ಈ ಊರಿನ ಮಗ ಎಂದುಕೊಂಡು ಬೆಳೆಸಿ" ಎಂದು ಮನವಿ ಮಾಡಿದರು.
ಇದನ್ನೂ ಓದಿ: 'ಯುವ': ರಾಜ್ಕುಮಾರ್ ಮೊಮ್ಮಗನ ಚೊಚ್ಚಲ ಚಿತ್ರದ ಮೊದಲ ಹಾಡು ಅನಾವರಣ