'ಯಲಾಕುನ್ನಿ', ಈ ಫೇಮಸ್ ಡೈಲಾಗ್ ಅನ್ನು ಮರೆಯೋದು ತಾನೇ ಹೇಗೆ ಹೇಳಿ. ಖಳನಟರ ಖಳನಟ ದಿ. ವಜ್ರಮುನಿ ಅವರ ಪಾಪ್ಯುಲರ್ ಡೈಲಾಗ್. ಇದು ಇಂದಿಗೂ ಅಷ್ಟೇ ಫೇಮಸ್. 'ಯಲಾಕುನ್ನಿ' ಶೀರ್ಷಿಕೆಯಡಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾವೊಂದು ನಿರ್ಮಾಣ ಆಗುತ್ತಿರೋದು ನಿಮಗೆ ತಿಳಿದಿರುವ ವಿಚಾರವೇ. ಇದೀಗ ಈ ಬಹುನಿರೀಕ್ಷಿತ ಚಿತ್ರದ ಟೀಸರ್ ಅನಾವರಣಗೊಂಡಿದ್ದು, ಸಂಪೂರ್ಣ ಸಿನಿಮಾ ನೋಡುವ ಕುತೂಹಲವನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.
ಕೋಮಲ್ ಕುಮಾರ್, ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಕಾಮಿಡಿ ಮಾಡುತ್ತಾ ಗುರುತಿಸಿಕೊಂಡಿರುವ ನಟ. ಹಾಸ್ಯನಟನೆ ಜೊತೆ ಜೊತೆಗೆ ನಾಯಕ ನಟ ಆದವರ ಪೈಕಿ ಕೋಮಲ್ ಕುಮಾರ್ ಕೂಡಾ ಒಬ್ಬರು. ದಿ. ಡಾ.ವಿಷ್ಣುವರ್ಧನ್, ಶಿವರಾಜ್ಕುಮಾರ್, ದಿ. ಪುನೀತ್ ರಾಜ್‍ಕುಮಾರ್, ಜಗ್ಗೇಶ್, ರಮೇಶ್ ಅರವಿಂದ್ ಹೀಗೆ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಜೊತೆ ಕಾಮಿಡಿ ಮಾಡಿ ಬಳಿಕ ಹೀರೋ ನಟ ಕೋಮಲ್ ಕುಮಾರ್ ಸದ್ಯ ಯಲಾಕುನ್ನಿ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ.
![Yela Kunni film team](https://etvbharatimages.akamaized.net/etvbharat/prod-images/17-09-2024/22471366_tgr7duigs4u.jpg)
'ಯಲಾಕುನ್ನಿ ಮೇರಾ ನಾಮ್ ವಜ್ರಮುನಿ' ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿರೋ ಚಿತ್ರದ ಟೀಸರ್ ಇತ್ತೀಚೆಗೆ ಅನಾವರಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಿರಿಯ ನಟ ವಜ್ರಮುನಿ ಅವರ ಗೆಟಪ್ನಲ್ಲಿ ಕೋಮಲ್ ಕುಮಾರ್ ಕಾಣಿಸಿಕೊಂಡಿದ್ದು, ಸಿನಿಪ್ರೇಮಿಗಳಿಂದ ಭೇಷ್ ಅನ್ನಿಸಿಕೊಳ್ಳುತ್ತಿದ್ದಾರೆ.
ಸದ್ಯ ಅನಾವರಣಗೊಂಡಿರುವ ಯಲಾಕುನ್ನಿ ಚಿತ್ರದ ಟೀಸರ್ನಲ್ಲಿ ಕೋಮಲ್ ಕುಮಾರ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಎಲ್ಲಾ ವಿಲನ್ಗಳಿಗೂ ಅಪ್ಪ ಎಂದು ಹೇಳುವ ಡೈಲಾಗ್ನಲ್ಲಿ ಕೋಮಲ್ ಅಬ್ಬರಿಸಿದ್ದಾರೆ. ವಜ್ರಮುನಿ ಅವರ ಗೆಟಪ್ ನೋಡುಗರ ಗಮನ ಸೆಳೆದಿದೆ. 'ಮೇರಾ ನಾಮ್ ವಜ್ರಮುನಿ' ಎಂಬ ಅಡಿಬರಹ ಹಾಗೂ "ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ" ಎಂಬ ಬರಹದೊಂದಿಗೆ "ಯಲಾಕುನ್ನಿ" ಚಿತ್ರ ಮೂಡಿಬರಲಿದೆ. ನವರಸನಾಯಕ ಜಗ್ಗೇಶ್ ಅವರ ಮಗ ಯತಿರಾಜ್ ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.
'ಯಲಾಕುನ್ನಿ' ಸಿನಿಮಾವನ್ನು ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ನಿರ್ಮಿಸಿದ್ದಾರೆ. ಹೊಸ ಪ್ರತಿಭೆ ಎನ್ಅರ್ ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ರಿವೀಲ್ ಆಗಿರುವ ಯಲಾಕುನ್ನಿ ಟೀಸರ್ ಕೋಮಲ್ ಅವರಿಗೆ ಮತ್ತೆ ಒಳ್ಳೆ ಹೆಸರು ತಂದುಕೊಡುವ ಸುಳಿವನ್ನು ನೀಡಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಮಾಡುವ ತಯಾರಿಯಲ್ಲಿ ಚಿತ್ರತಂಡವಿದೆ.