ಹಲವು ಯಶಸ್ವಿ ತಾರಾ ದಂಪತಿ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ. ಆದ್ರೆ 2024ರಲ್ಲಿ, ಕೆಲ ಸೆಲೆಬ್ರಿಟಿಗಳ ವಿಚ್ಛೇದನದಂತಹ ಆಘಾತಕಾರಿ ಸುದ್ದಿಯಿಂದ ಮನರಂಜನಾ ಕ್ಷೇತ್ರ ತತ್ತರಿಸಿದೆ. ಹೌದು, ಭಾರತೀಯ ಚಿತ್ರರಂಗದ ಕೆಲ ಗಣ್ಯರು ತಮ್ಮ ವಿಚ್ಛೇದನವನ್ನು ಘೋಷಿಸಿದರು. ಒಂದು ಕಾಲದಲ್ಲಿ ಮೇಡ್ ಫಾರ್ ಈಚ್ ಅದರ್ ಎಂದನಿಸಿಕೊಂಡ ದಂಪತಿ ಸಹ ಈ ವರ್ಷ ತಮ್ಮ ದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 2024ರಲ್ಲಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿದ ಸೆಲೆಬ್ರಿಟಿ ಡಿವೋರ್ಸ್ ಲಿಸ್ಟ್ ಇಲ್ಲಿದೆ ನೋಡಿ.
ಚಂದನ್ ಶೆಟ್ಟಿ-ನಿವೇದಿತಾ ಗೌಡ: ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಎಂದೇ ಜನಪ್ರಿಯರಾಗಿದ್ದ ಬಿಗ್ ಬಾಸ್ ತಾರಾ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಈ ಸಾಲಿನ ಜೂನ್ನಲ್ಲಿ ವಿಚ್ಛೇದನ ಪಡೆದಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆ ನಿರ್ಧಾರ ಕೈಗೊಂಡಿದ್ದು, ಈ ವಿಚ್ಛೇದನ ಅಭಿಮಾನಿಗಳಿಗೆ ಶಾಕ್ ನೀಡಿತ್ತು.
ಸೋಷಿಯಲ್ ಮೀಡಿಯಾ ಪೋಸ್ಟ್ ಏನಿತ್ತು? ಜೂನ್ 7ರಲ್ಲಿ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದ ನಿವೇದಿತಾ ಗೌಡ, 'ಈ ದಿನ ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತೀ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲ ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು.
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 5'ರ ಮನೆಯಲ್ಲಿ ಪರಿಚಯರಾದ ಚಂದನ್ ಶೆಟ್ಟಿ-ನಿವೇದಿತಾ ಗೌಡ ಬಹಳ ಆತ್ಮೀಯರಾಗಿ ಗುರುತಿಸಿಕೊಂಡಿದ್ದರು. 2019ರಲ್ಲಿ ದಸರಾ ವೇದಿಕೆಯಲ್ಲಿ ಚಂದನ್ ಅವರು ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. 2020ರಲ್ಲಿ ಹಸೆಮಣೆ ಏರಿ ಕ್ಯೂಟ್ ಕಪಲ್ ಎಂದೇ ಹೆಸರು ಮಾಡಿದ್ದರು. 'ರಾಜ-ರಾಣಿ' ಸೇರಿ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಮದುವೆಯಾಗಿ ನಾಲ್ಕು ವರ್ಷಗಳ ನಂತರ ವಿಚ್ಛೇದನ ಪಡೆದಿದ್ದಾರೆ. ಚಂದನ್ ಶೆಟ್ಟಿ ಗಾಯನದಲ್ಲಿ ಗುರುತಿಸಿಕೊಂಡರೆ, ನಿವೇದಿತಾ ರೀಲ್ಸ್ ವಿಡಿಯೋ ಮೂಲಕ ಜನಪ್ರಿಯರಾಗಿದ್ದಾರೆ.
ಯುವ ರಾಜ್ಕುಮಾರ್-ಶ್ರೀದೇವಿ: ಕನ್ನಡ ಚಿತ್ರರಂಗದ ದೊಡ್ಮನೆ ಕುಡಿ, ನಟ ಯುವ ರಾಜ್ಕುಮಾರ್ ಡಿವೋರ್ಸ್ ಸುದ್ದಿ ಈ ವರ್ಷದ ಮಧ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಯುವ ರಾಜ್ಕುಮಾರ್ ಶ್ರೀದೇವಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.
ಎಆರ್ ರೆಹಮಾನ್-ಸೈರಾ ಬಾನು: ಈ ವರ್ಷದ ಅತ್ಯಂತ ಆಶ್ಚರ್ಯಕರ ವಿಚ್ಛೇದನವೆಂದರೆ ಅದು ಖ್ಯಾತ ಸಂಯೋಜಕ ಎಆರ್ ರೆಹಮಾನ್ ಮತ್ತು ಸೈರಾ ಬಾನು ಡಿವೋರ್ಸ್. ಸರಿಸುಮಾರು ಮೂರು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿರುವ ಇವರು ನವೆಂಬರ್ನಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. ಎಆರ್ ರೆಹಮಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, ಸಂಬಂಧದಲ್ಲಿನ ಭಾವನಾತ್ಮಕ ಒತ್ತಡದ ಕಾರಣದಿಂದ ಈ ನಿರ್ಧಾರ ಕೈಗೊಂಡೆವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್ವುಡ್ ಸೂಪರ್ಸ್ಟಾರ್ಗಳಿವರು
1995ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದ ಈ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ವಿಚ್ಛೇದನದ ಹೊರತಾಗಿಯೂ, ಉತ್ತಮ ಸ್ನೇಹಿತರಾಗಿ ಮುಂದುವರಿಯುತ್ತೇವೆ ಮತ್ತು ಪರಸ್ಪರ ಬೆಂಬಲಿಸುತ್ತೇವೆ ಎಂದು ಇಬ್ಬರೂ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದರು. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಮೆಚ್ಚುಗೆ ಪಡೆದ ದಂಪತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಹಿನ್ನೆಲೆ ಅವರ ವಿಚ್ಛೇದನ ಅಭಿಮಾನಿಗಳಿಗೆ ಆಘಾತ ತಂದಿತ್ತು. ಅದರಲ್ಲೂ 29 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನ ಪಡೆದಿರುವುದು ಎಂಥವರಿಗೂ ಶಾಕ್ ಆಗುತ್ತದೆ.
ಇಶಾ ಡಿಯೋಲ್-ಭರತ್ ತಖ್ತಾನಿ: 2024ರ ಆರಂಭದಲ್ಲೇ ನಟಿ ಇಶಾ ಡಿಯೋಲ್ ಮತ್ತು ಉದ್ಯಮಿ ಭರತ್ ತಖ್ತಾನಿ ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಹಿರಿಯ ತಾರಾ ದಂಪತಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಪುತ್ರಿ ಇಶಾ ಮತ್ತು ಭರತ್ ಒಂದು ದಶಕಕ್ಕೂ ಹೆಚ್ಚು ಕಾಲ ವೈವಾಹಿಕ ಜೀವನ ನಡೆಸಿದರಾದರೂ, ಬೇರೆಯಾಗಲು ಪರಸ್ಪರ ನಿರ್ಧರಿಸಿದರು. ವಿಚ್ಛೇದಿತ ದಂಪತಿಗೆ ರಾಧ್ಯಾ ಮತ್ತು ಮಿರಾಯಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
ದಲ್ಜೀತ್ ಕೌರ್ ಮತ್ತು ನಿಖಿಲ್ ಪಟೇಲ್: ಕಿರುತೆರೆ ತಾರೆ ದಲ್ಜಿತ್ ಕೌರ್ ಮತ್ತು ಉದ್ಯಮಿ ನಿಖಿಲ್ ಪಟೇಲ್ ಕೂಡಾ ಈ ವರ್ಷ ತಮ್ಮ ದಾಂಪತ್ಯ ಜೀವನ ಕೊನೆಗೊಳಿಸಿದ್ದಾರೆ. ಮದುವೆಯಾದ ಕೇವಲ 10 ತಿಂಗಳ ನಂತರ, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2023ರ ಮಾರ್ಚ್ನಲ್ಲಿ ನಿಖಿಲ್ ಅವರನ್ನು ವಿವಾಹವಾದ ದಲ್ಜೀತ್ ಅವರು ನಿಂದನೆ ಮತ್ತು ದಾಂಪತ್ಯ ದ್ರೋಹಗಳಂತಹ ಆರೋಪಗಳನ್ನು ಹೊರಿಸಿದ್ದರು. ನಿಖಿಲ್ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದ್ದರು. ಈ ಪ್ರತ್ಯೇಕತೆಯು ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿತು.
ಇದನ್ನೂ ಓದಿ: 'ಸಿನಿಮಾ ತಡವಾಗಿದ್ದಕ್ಕೆ ಕ್ಷಮಿಸಿ, ಲೇಟಾದ್ರೂ ಲೇಟೆಸ್ಟಾಗಿ ಬರ್ತೀವಿ': ಸುದೀಪ್
2024ರ ಸೆಲೆಬ್ರಿಟಿ ಡಿವೋರ್ಸ್ ರಾಷ್ಟ್ರಕ್ಕೆ ಶಾಕ್ ನೀಡಿದೆ. ವಿಚ್ಛೇದನದ ಹೊರತಾಗಿಯೂ, ಕೆಲವರು ಸಕಾರಾತ್ಮಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ಮಕ್ಕಳ ಯೋಗಕ್ಷೇಮದ ಮೇಲೆ ಗಮನ ಕೇಂದ್ರೀಕರಿಸುವ ತಮ್ಮ ಬದ್ಧತೆಯನ್ನು ಒತ್ತಿಹೇಳಿದ್ದಾರೆ.