ಹೈದರಾಬಾದ್ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯದಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಜನಪ್ರಿಯ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಇಂದು (ಶನಿವಾರ) ಮುಂಜಾನೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಐಕಾನ್ ಸ್ಟಾರ್ನ 'ಪುಷ್ಪ 2: ದಿ ರೂಲ್' ಚಿತ್ರದ ಪ್ರೀ ರಿಲೀಸ್ ಶೋ ಸಂದರ್ಭ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.
ಶುಕ್ರವಾರ ತಡ ರಾತ್ರಿವರೆಗೂ ಜೈಲು ಅಧಿಕಾರಿಗಳಿಗೆ ಜಾಮೀನಿನ ಪ್ರತಿ ಸಿಗದ ಕಾರಣ, ಹೈಕೋರ್ಟ್ ರಿಲೀಫ್ ಹೊರತಾಗಿಯೂ ನಟ ಜೈಲಿನಲ್ಲಿ ರಾತ್ರಿ ಕಳೆಯಬೇಕಾಯಿತು. ಇಂದು ಮುಂಜಾನೆ ಹೊರಬಂದು ಮನೆ ತಲುಪಿದ್ದಾರೆ. ಇದೀಗ ಸೌತ್ ಐಕಾನ್ ಸ್ಟಾರ್ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಭೇಟಿಯಾಗಿದ್ದಾರೆ.
ಅಲ್ಲು ಉಪ್ಪಿ ಸ್ಕ್ರೀನ್ ಶೇರ್: 2015ರ ಏಪ್ರಿಲ್ 9ರಂದು ತೆರೆಕಂಡು ಯಶಸ್ವಿಯಾದ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿ ಉಪೇಂದ್ರ ಮತ್ತು ಅಲ್ಲು ಅರ್ಜುನ್ ತೆರೆ ಹಂಚಿಕೊಂಡಿದ್ದರು. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡರೆ, ಉಪ್ಪಿ ಖಳನಾಯಕನ ಪಾತ್ರ ನಿರ್ವಹಿದ್ದರು. ಟಾಲಿವುಡ್, ಅಲ್ಲು ಅರ್ಜುನ್ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಉಪೇಂದ್ರ ಅವರಿಂದು ಐಕಾನ್ ಸ್ಟಾರ್ನನ್ನು ಭೇಟಿಯಾಗಿ ಒಂದೊಳ್ಳೆ ಕ್ಷಣ ಕಳೆದಿದ್ದಾರೆ. ರಿಯಲ್ ಸ್ಟಾರ್ ತಮ್ಮ ಮುಂದಿನ ಬಹುನಿರೀಕ್ಷಿತ 'ಯು ಐ' ಸಿನಿಮಾ ಸಲುವಾಗಿ ಹೈದರಾಬಾದ್ನಲ್ಲಿದ್ದಾರೆ ಎಂಬ ಮಾಹಿತಿ ಇದೆ.
ಯು ಐ ಮೀಟ್ಸ್ ಎಎ: ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಪ್ರೊಡಕ್ಷನ್ಸ್, ಗೀತಾ ಆರ್ಟ್ಸ್, ಲಹರಿ ಫಿಲ್ಮ್ಸ್ ಅಲ್ಲು ಅರ್ಜುನ್ ಭೇಟಿಯ ಫೋಟೋ ಹಂಚಿಕೊಂಡು ''ಇದು ನಾವು ಇಷ್ಟಪಡುವ ಎನರ್ಜಿ, ಯು ಐ ಮೀಟ್ಸ್ ಎಎ'' ಎಂದು ಬರೆದುಕೊಂಡಿದೆ.
ಇದನ್ನೂ ಓದಿ: 'ಆರ್.ಚಂದ್ರು ನನ್ನ ಸ್ನೇಹಿತ, ಸದಾ ಅವರೊಂದಿಗಿರುತ್ತೇನೆ': ಫಾದರ್ ಸಿನಿಮಾಗೆ ಸುದೀಪ್ ಸಾಥ್, ಕಿಚ್ಚ ಹೇಳಿದ್ದಿಷ್ಟು
ಇದೇ ಡಿಸೆಂಬರ್ 5ಕ್ಕೆ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಅದ್ಧೂರಿಯಾಗಿ ಬಿಡುಗಡೆ ಆಯಿತು. ಅಲ್ಲು ಅರ್ಜುನ್ ತಮ್ಮ ಬಹುನಿರೀಕ್ಷಿತ ಚಿತ್ರದ ಪ್ರೀ ಶೋಗಾಗಿ ಡಿ.4ರ ಮಧ್ಯರಾತ್ರಿ ಹೈದರಾಬಾದ್ನ ಪ್ರಸಿದ್ಧ ಚಿತ್ರಮಂದಿರ ಸಂಧ್ಯಾಗೆ ಭೇಟಿ ನೀಡಿದ್ದರು. ಅಂದು ತಮ್ಮ ಮೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರು. ಪೊಲೀಸರ ಪ್ರಕಾರ, ಜನಸಂದಣಿಯಲ್ಲಾದ ಕಾಲ್ತುಳಿತದಲ್ಲಿ ರೇವತಿ ಎಂಬ ಅಭಿಮಾನಿ ಸಾವನ್ನಪ್ಪಿದ್ದು, ಮಗ ಗಾಯಗೊಂಡನು. ಹಾಗಾಗಿ ನಟನ ಮೇಲೆ ಆರೋಪಗಳು ಕೇಳಿಬಂದು, ಪ್ರಕರಣ ದಾಖಲಾಯಿತು. ಕಳೆದ ದಿನ ನಟನನಿಗೆ 14 ದಿನಗಳ ನ್ಯಾಯಾಂಗ ಬಂಧನ ಘೋಷಣೆಯಾಯಿತಾದರೂ, ತೆಲಂಗಾಣ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ಇಂದು ಬೆಳಗ್ಗೆ ಬಿಡುಗಡೆಗೊಂಡರು. ಸದ್ಯ ಪುಷ್ಪ ಸ್ಟಾರ್ ನಿವಾಸಕ್ಕೆ ಚಿತ್ರರಂಗದ ಗಣ್ಯರು ಭೇಟಿ ಕೊಡುತ್ತಿದ್ದಾರೆ.
ಇದನ್ನೂ ಓದಿ: Watch- ಜೈಲಿನಲ್ಲಿ ಒಂದು ರಾತ್ರಿ ಕಳೆದ ಅಲ್ಲು ಅರ್ಜುನ್ ವಾಪಸ್; ಬಿಗಿದಪ್ಪಿದ ಪತ್ನಿ, ಮಕ್ಕಳು: ರಶ್ಮಿಕಾ ಹೇಳಿದ್ದಿಷ್ಟು