ಹೈದರಾಬಾದ್ನ ಜನಪ್ರಿಯ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಜೈಲುವಾಸ ಅನುಭವಿಸಿದ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಅವರು ಇಂದು ಬೆಳಗ್ಗೆ ಮನೆಗೆ ಮರಳಿದರು. ಚಂಚಲಗುಡ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡ ಜನಪ್ರಿಯ ನಟ, ಜುಬ್ಲಿ ಹಿಲ್ಸ್ನ ತಮ್ಮ ನಿವಾಸದ ಹೊರಗೆ ನೆರೆದಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಂಬಲ ಸೂಚಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದರು. ಜೊತೆಗೆ ಪುಷ್ಪ ಸೀಕ್ವೆಲ್ ಪ್ರೀ ರಿಲೀಸ್ ಈವೆಂಟ್ನಲ್ಲಿ 35ರ ಹರೆಯದ ಮಹಿಳೆ ಸಾವನ್ನಪ್ಪಿದ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಕೆಳ ನ್ಯಾಯಾಲಯ ಅಲ್ಲು ಅರ್ಜುನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ತೆಲಂಗಾಣ ಹೈಕೋರ್ಟ್ 50,000 ರೂ. ಬಾಂಡ್ ಷರತ್ತಿನ ಮೇಲೆ ನಟನಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಅದಾಗ್ಯೂ, ನಟ ಇಂದು ಬೆಳಗ್ಗೆ ಬಿಡುಗಡೆ ಆಗಿದ್ದು, ಅದಕ್ಕೂ ಮೊದಲು ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಯಿತು. ಶುಕ್ರವಾರ ತಡರಾತ್ರಿವರೆಗೂ ಜೈಲು ಅಧಿಕಾರಿಗಳಿಗೆ ಜಾಮೀನಿನ ಪ್ರತಿ ಸಿಗದ ಕಾರಣ, ಅಲ್ಲು ಅರ್ಜುನ್ ಜೈಲಿನಲ್ಲಿ ರಾತ್ರಿ ಕಳೆಯಬೇಕಾಯಿತು. ಇಂದು ಬೆಳಗ್ಗೆ ಬಿಡುಗಡೆ ಆಗಿದ್ದು, ಕಠಿಣ ಸಮಯದಲ್ಲಿ ಬೆಂಬಲ ತೋರಿದ ಸರ್ವರಿಗೂ ಧನ್ಯವಾದ ತಿಳಿಸಿದರು.
ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅಲ್ಲು ಅರ್ಜುನ್, ಇಂಥ ಸಮಯದಲ್ಲಿ ಪ್ರೀತಿ, ಬೆಂಬಲ ತೋರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. "ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಚಿಂತೆ ಬೇಡ. ನಾನು ಚೆನ್ನಾಗಿದ್ದೇನೆ. ನಾನೋರ್ವ ಕಾನೂನು ಪಾಲಿಸುವ ನಾಗರಿಕ" ಎಂದು ತಿಳಿಸಿದರು. ಮೃತರ ಕುಟುಂಬಕ್ಕೆ ತಮ್ಮ ಕೈಯಲ್ಲಾಗುವ ಸಹಾಯ ಮಾಡುತ್ತೇನೆ'' ಎಂದು ಭರವಸೆ ನೀಡಿದರು.
ಇದನ್ನೂ ಓದಿ: ವಿಡಿಯೋ: ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ; ಐಕಾನ್ ಸ್ಟಾರ್ ಬಿಗಿದಪ್ಪಿದ ರಿಯಲ್ ಸ್ಟಾರ್
ಡಿಸೆಂಬರ್ 4ರ ತಡರಾತ್ರಿ ಅಲ್ಲು ಅರ್ಜುನ್ ಮತ್ತು ಅವರ ಕುಟುಂಬ ಸಂಧ್ಯಾ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದ್ದರು. ಹೊರಗೆ, ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು "ಇದು ಸಂಪೂರ್ಣ ಆಕಸ್ಮಿಕ ಘಟನೆ ಮತ್ತು ಉದ್ದೇಶಪೂರ್ವಕವಲ್ಲದ ಅಪಘಾತ. ನಾನು ಈ ಚಿತ್ರಮಂದಿರಕ್ಕೆ ಸುಮಾರು 20 ವರ್ಷಗಳಿಗೂ ಹೆಚ್ಚು ಸಮಯದಿಂದ ಬರುತ್ತಿದ್ದೇನೆ. ಈ ಸ್ಥಳಕ್ಕೆ 30ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದೇನೆ. ಈ ರೀತಿಯ ಅಪಘಾತ ಹಿಂದೆಂದೂ ಸಂಭವಿಸಿಲ್ಲ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಾನು ಬಯಸುವುದಿಲ್ಲ, ಹಾಗಾಗಿ ನಾನು ಈಗ ಯಾವುದೇ ಕಾಮೆಂಟ್ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: 'ಆರ್.ಚಂದ್ರು ನನ್ನ ಸ್ನೇಹಿತ, ಸದಾ ಅವರೊಂದಿಗಿರುತ್ತೇನೆ': ಫಾದರ್ ಸಿನಿಮಾಗೆ ಸುದೀಪ್ ಸಾಥ್, ಕಿಚ್ಚ ಹೇಳಿದ್ದಿಷ್ಟು