ಭರವಸೆಯ ನಟ ವಿನಯ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪೆಪೆ'. ರಗಡ್ ಟೀಸರ್ ಮೂಲಕ ಸಿನಿರಸಿಕರಲ್ಲಿ ಕುತೂಹಲ ಹುಟ್ಟಿಸಿದ್ದ ಪೆಪೆ ಸಿನಿಮಾಗೀಗ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾಥ್ ಸಿಕ್ಕಿದೆ. ಚಿತ್ರದ ಅಫೀಶಿಯಲ್ ಟ್ರೇಲರ್ ಅನಾವರಣಗೊಳಿಸುವ ಜೊತೆಗೆ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿದೆ.
ನಟ ಶಿವರಾಜ್ಕುಮಾರ್ ತಮ್ಮ ನಿವಾಸದಲ್ಲೇ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದರು. ಈ ಚಿತ್ರ ಒಂದು ಮಲಯಾಳಂ ಜಾನರ್ನಂತಿದೆ. ವಿನು ಈ ಹಿಂದಿನ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ. ಕ್ಯೂಟ್ ಬಾಯ್ನಂತಿದ್ದ ವಿನಯ್ ಈ ಸಿನಿಮಾದಲ್ಲಿ ಬಹಳ ರಫ್ ಆಗಿ ಮಲೆಯಾಳಂ ಆ್ಯಕ್ಟರ್ನಂತೆ ಆ್ಯಕ್ಟಿಂಗ್ ಮಾಡಿದ್ದಾನೆ. ನಾನು ಸಿನಿಮಾ ವೀಕ್ಷಿಸಲಿದ್ದೇನೆ. ಶ್ರೀಲೇಶ್ ನಿರ್ದೇಶನ ಸೇರಿದಂತೆ ಪ್ರತಿಯೊಬ್ಬ ಕಲಾವಿದರ ಅಭಿನಯ ಚೆನ್ನಾಗಿದೆ. ಟೀಸರ್ ಬಿಟ್ಟಾಗ ನನಗೆ ಸಿನಿಮಾ ನೋಡಬೇಕಂದನಿಸಿತ್ತು. ಖಂಡಿತವಾಗಿಯೂ ಸಿನಿಮಾ ವೀಕ್ಷಿಸಲಿದ್ದೇನೆ ಎಂದು ತಿಳಿಸಿದರು.
ಪೆಪೆ ಚಿತ್ರದ ಟ್ರೇಲರ್ ನೋಡಿದಾಗ ವ್ಯವಸ್ಥೆಯೊಳಗಿನ ಬದುಕು, ಬವಣೆ, ನೋವು, ಊಳಿಗಮಾನ ಪದ್ಧತಿಯ ಛಾಯೆ ಕಾಣಸಿಗುತ್ತದೆ. ಸ್ವಾಭಿಮಾನದ ಕಿಚ್ಚಿದೆ. ಈ ನೆಲದ ವಾಸನೆಯೂ ಇದೆ. ರಕ್ತಸಿಕ್ತ ಬದುಕಿನ ತೊಳಲಾಟವೂ ಇದೆ. ಮುಖ್ಯವಾಗಿ ಸಾಮಾಜಿಕ ವ್ಯವಸ್ಥೆಯೊಳಗಿನ ಸಂಘರ್ಷದ ಹೋರಾಟವಿದೆ. ವಿನಯ್ ಅವರೊಂತೂ ಮಾಸ್ ಲುಕ್ನಲ್ಲಿ ಕಾಣಿಸಕೊಂಡಿದ್ದಾರೆ. ನೋಡುಗರಿಗೆ ಇದು ವಿನಯ್ ಅವರೇನಾ ಎಂದನಿಸೋದು ಸಹಜ. ಒಟ್ಟಾರೆ ವಿನಯ್ ರಾಜ್ಕುಮಾರ್ ನಯಾ ಅವತಾರ, ಮಾಸ್ ಲುಕ್ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೇಲರ್ ಅನಾವರಣಕ್ಕೆ ದಿನ ನಿಗದಿ - Rakshit Shetty movie
'ಪೆಪೆ' ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಚಿತ್ರ. ಗ್ಯಾಂಗ್ಸ್ಟರ್ ಸಿನಿಮಾ ಇದಾಗಿದ್ದು, ವಿನಯ್ ರಾಜ್ಕುಮಾರ್ ತಮ್ಮ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಅವತಾರ ತಾಳಿದ್ದಾರೆ. ಒಂದೇ ಜಾನರ್ ಸಿನಿಮಾಗೆ ಒಗ್ಗಿಕೊಳ್ಳದೇ, ಪ್ರತೀ ಬಾರಿ ವಿಭಿನ್ನ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವ ವಿನಯ್ ಈ ಚಿತ್ರದಲ್ಲಿ ಮಾಸ್ ಲುಕ್ನಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. ಗ್ಯಾಂಗ್ ಲೀಡರ್ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈ ಟ್ರೇಲರ್ ನೋಡಿದ ಅಭಿಮಾನಿ ಬಳಗ ವಿನಯ್ ಲುಕ್ ಬಗ್ಗೆ ಥ್ರಿಲ್ ಆಗಿದ್ದು, ಸಿನಿಮಾ ಮೇಲಿನ ಅವರ ನಿರೀಕ್ಷೆ, ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ನಂಜುಂಡೇಶ್ವರನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ಕುಮಾರ್, ಶಾಸಕ ಜಿ.ಟಿ.ದೇವೇಗೌಡ: ವಿಡಿಯೋ - Nanjundeshwara Temple
ವಿನಯ್ ರಾಜ್ಕುಮಾರ್ ಜೋಡಿಯಾಗಿ ಕಾಜಲ್ ಕುಂದರ್ ತೆರೆಹಂಚಿಕೊಂಡಿದ್ದು, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಒಳಗೊಂಡ ತಾರಾಬಳಗವಿದೆ. ಚಿತ್ರಕ್ಕೆ ಅಭಿಷೇಕ್ ಜಿ.ಕಾಸರಗೋಡು ಅವರ ಕ್ಯಾಮರಾ ವರ್ಕ್ ಇದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶ ಮಾಡಿದ್ದಾರೆ. ಡಾ.ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್ ಅಡಿ ಉದಯ್ ಮತ್ತು ಶ್ರೀರಾಮ್ ಸೇರಿಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೇಲರ್ನಿಂದ ಸದ್ದು ಮಾಡುತ್ತಿರುವ ಪೆಪೆ ಇದೇ ತಿಂಗಳ 30ಕ್ಕೆ ತೆರೆಗಪ್ಪಳಿಸಲಿದೆ.