ಮಂಗಳವಾರ ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಕಾಂತಾರ' ಚಿತ್ರಕ್ಕಾಗಿ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಟ, ನಿರ್ದೇಶಕ ರಿಷಭ್ ಶೆಟ್ಟಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನ ಮಾಡಿದ 'ಕಾಂತಾರ' ಸಿನಿಮಾಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ಗೌರವಗಳು ಸಂದಿವೆ. 'ಕಾಂತಾರ' ಅತ್ಯುತ್ತಮ ಮನೋರಂಜನಾ ಚಿತ್ರ ಹಾಗೂ ಚಿತ್ರದಲ್ಲಿನ ನಟನೆಗಾಗಿ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸ್ಯಾಂಡಲ್ವುಡ್ ಮಾತ್ರವಲ್ಲದೇ, ಭಾರತೀಯ ಸಿನಿಮಾ ರಂಗದಲ್ಲೇ ಅದ್ಧೂರಿ ಹಾಗೂ ಕಂಟೆಂಟ್ ಆಧಾರಿತ ಚಿತ್ರಗಳ ಮೂಲಕ ಯಶಸ್ಸು ಕಂಡಿರುವ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಗೆ ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಸಂಭ್ರಮದಲ್ಲಿದೆ.
ಜೊತೆಗೆ, ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಅದ್ಧೂರಿ ವೆಚ್ಚದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿದ್ದ ಜಗಮೆಚ್ಚಿದ ಚಿತ್ರ 'ಕೆಜಿಎಫ್-2'. ಇದಕ್ಕೂ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಹಾಗೂ ಚಿತ್ರದ ಸಾಹಸ ನಿರ್ದೇಶಕ ಅನ್ವರಿವು ಅವರಿಗೆ ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹೊಂಬಾಳೆ ಫಿಲಂಸ್ನ ಶೈಲಜಾ ವಿಜಯ್ ಕುಮಾರ್ ಹಾಗೂ ಸಾಹಸ ನಿರ್ದೇಶಕ ಅನ್ಬರಿವು ಪ್ರಶಸ್ತಿಗಳನ್ನು ಪಡೆದರು.
ರಾಷ್ಟ್ರ ಪ್ರಶಸ್ತಿ ಬರುತ್ತೆ ಅಂತಾ ಅಂದುಕೊಂಡಿರಲಿಲ್ಲ: ರಾಷ್ಟ್ರ ಪ್ರಶಸ್ತಿ ಪಡೆದು ಮಾತನಾಡಿದ ನಿರ್ಮಾಪಕ ವಿಜಯ ಕಿರಗಂದೂರು, ''ನಾನು ಈ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ನಮ್ಮ ಟೀಮ್ ಶ್ರಮಕ್ಕೆ ಸಿಕ್ಕ ಗೌರವ ಇದು. ಇನ್ಮುಂದೆ ನಮ್ಮ ಹೊಂಬಾಳೆ ಸಂಸ್ಥೆಯಿಂದ ಜವಾಬ್ದಾರಿಯುತ ಸಿನಿಮಾಗಳನ್ನು ಮಾಡುವ ಹೊಣೆ ಜಾಸ್ತಿ ಆಗಿದೆ. ಹಾಗೆಯೇ, ಕೆಜಿಎಫ್-2 ನಂತಹ ಜನಪ್ರಿಯ ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಇಡೀ ದೇಶವೇ ಮೆಚ್ಚಿಕೊಂಡ 'ಕಾಂತಾರ' ಸಿನಿಮಾವನ್ನ ಅಭಿನಯಿಸಿ, ನಿರ್ದೇಶಿಸಿದ ರಿಷಬ್ ಶೆಟ್ಟಿಗೆ ವಿಶೇಷ ಕೃತಜ್ಞತೆಗಳನ್ನು ಹೇಳುತ್ತೇನೆ'' ಎಂದು ತಿಳಿಸಿದ್ದಾರೆ.
It’s often hard to grasp the magnitude of a moment until it unfolds. We are deeply honored to receive the #NationalFilmAwards for #Kantara & #KGFChapter2 ♥️
— Vijay Kiragandur (@VKiragandur) October 8, 2024
This recognition reflects the passion and dedication of everyone involved, from @shetty_rishab, @TheNameIsYash,… pic.twitter.com/CVkNK0QUyO
''ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಉತ್ಸಾಹ ಮತ್ತು ಸಮರ್ಪಣಾ ಭಾವದಿಂದ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಿಷಬ್ ಶೆಟ್ಟಿ, ಯಶ್, ಪ್ರಶಾಂತ್ ನೀಲ್ ಹಾಗೂ ನಮ್ಮ ಅದ್ಭುತ ತಂಡದ ಜೊತೆಗೆ ಎಲ್ಲ ಪ್ರೇಕ್ಷಕರನ್ನೂ ಪ್ರತಿಬಿಂಬಿಸುತ್ತದೆ. ಈ ಸಂಭ್ರಮದ ಕ್ಷಣದಲ್ಲಿ, ಭಾರತೀಯ ಸಿನಿಮಾವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುವ ನಮ್ಮ ಬದ್ಧತೆ ಮುಂದುವರೆಯಲಿದೆ ಎಂದು ತಿಳಿಸುತ್ತೇವೆ. ಈ ಪ್ರಯಾಣದಲ್ಲಿ ನಮ್ಮೊಂದಿಗೆ ಇದ್ದಿದ್ದಕ್ಕಾಗಿ ಧನ್ಯವಾದಗಳು'' ಎಂದು ಹೊಂಬಾಳೆ ಫಿಲಂಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.