ಕೊಚ್ಚಿ (ಕೇರಳ): ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ಹಿರಿಯ ನಟಿ ಕವಿಯೂರ್ ಪೊನ್ನಮ್ಮ ಅವರು ಶುಕ್ರವಾರ ಸಂಜೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 75ರ ಹರೆಯದ ಪೊನ್ನಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ನಟಿ ಇನ್ನಿಲ್ಲ ಎಂಬ ಸುದ್ದಿ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
1950ರ ದಶಕದ ಉತ್ತರಾರ್ಧದಲ್ಲಿ ಮಲಯಾಳಂ ನಾಟಕಗಳ ಮೂಲಕ ತಮ್ಮ ನಟನಾ ವೃತ್ತಿ ಪ್ರಾರಂಭಿಸಿ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿದ್ದಾರೆ. ತಾಯಿ ಮತ್ತು ಅಜ್ಜಿಯ ಪಾತ್ರಗಳಿಗೆ ಇವರು ಹೆಚ್ಚಿನ ಬೇಡಿಕೆ ಹೊಂದಿದ್ದರು.
ಸತ್ಯನ್, ಪ್ರೇಮ್ ನಾಜಿರ್, ಮಮ್ಮುಟ್ಟಿ, ಮೋಹನ್ ಲಾಲ್, ಸುರೇಶ್ ಗೋಪಿ ಸೇರಿದಂತೆ ಹಲವು ಸ್ಟಾರ್ ನಟರಿಗೆ 'ತಾಯಿ'ಯಾಗಿ ನಟಿಸಿದ್ದಾರೆ. ತಮ್ಮ ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನದಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಇವರು ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ಬಣ್ಣ ಹಚ್ಚಿದ್ದಾರೆ. ಕೊನೆಯದಾಗಿ 2022ರಲ್ಲಿ ಬಣ್ಣ ಹಚ್ಚಿದ್ದು, ನಂತರದ ದಿನಗಳಲ್ಲಿ ವಯೋಸಹಜ ಅನಾರೋಗ್ಯಕ್ಕೆ ಒಳಗಾದರು. ಹಾಗಾಗಿ ಹೆಚ್ಚಾಗಿ ಮನೆಯಲ್ಲಿಯೇ ಇದ್ದರು.
ಕವಿಯೂರ್ ಪೊನ್ನಮ್ಮ ಅವರ ಪತಿ 2011ರಲ್ಲಿ ನಿಧನರಾದರು. ಓರ್ವ ಮಗಳು ಯುಎಸ್ನಲ್ಲಿ ನೆಲೆಸಿದ್ದಾರೆ. ಕಳೆದ ಕೆಲ ವಾರಗಳಿಂದ ಹಿರಿಯ ನಟಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆ ಹೆಚ್ಚಾಗಿ ಅವರು ಆಸ್ಪತ್ರೆಯಲ್ಲೇ ತಮ್ಮ ಕೊನೆಯ ದಿನಗಳನ್ನೇ ದೂಡಿದರು. ನಿಧನದ ಸುದ್ದಿ ಮಲಯಾಳಂ ಚಿತ್ರರಂಕ್ಕೆ ಆಘಾತವಾಗಿದ್ದು, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಕವಿಯೂರ್ ಪೊನ್ನಮ್ಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ನಟಿ ನೈವಾ ನಾಯರ್ ಬೇಸರ ವ್ಯಕ್ತಪಡಿಸಿದ್ದಾರೆ. ''ನಾನು ಅವರನ್ನು ನೋಡಲು ಸಾಧ್ಯವಾಗಲಿಲ್ಲ, ನಿಜವಾಗಿಯೂ ಬಹಳ ದುಃಖವಾಗಿದೆ. ಅವರನ್ನು ಪೊನ್ನು ಎಂದು ಕರೆಯುತ್ತಿದ್ದೆ. ಚಿತ್ರೀಕರಣದ ಸಂದರ್ಭ ಅವರೊಂದಿಗೆ ಕಳೆದ ಕ್ಷಣಗಳು ನಿಜವಾಗಿಯೂ ಉಲ್ಲಾಸದಾಯಕವಾಗಿದ್ದವು. ಅವರು ಕೇವಲ ಸಿನಿಮಾಗಳಲ್ಲಿ ತಾಯಿಯಲ್ಲ, ನಮ್ಮೊಂದಿಗೆ ನಿಜವಾದ ತಾಯಿಯಂತಿದ್ದರು'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಚ್ಚನ್ ಕುಟುಂಬದೊಂದಿಗಿನ ಐಶ್ವರ್ಯಾ ರೈ ಫೋಟೋಗಳಿವು: ಮರೆಯಾದ ಕ್ಷಣಗಳ ಮೆಲುಕು - Bachchan Family
ದುಃಖ ವ್ಯಕ್ತಪಡಿಸಿರುವ ನಟಿ ಊರ್ವಶಿ, ''ನನಗೆ ಅವರು ಪೊನ್ನು ಆಂಟಿ ಮತ್ತು ನನ್ನ ತಾಯಿಗೆ ಉತ್ತಮ ಸ್ನೇಹಿತರಾಗಿದ್ದರು. ಅವರಿಬ್ಬರು ಬಹಳ ಆತ್ಮೀಯ ಸಂಬಂಧ ಹೊಂದಿದ್ದರು. ಪೊನ್ನು ಆಂಟಿ ನನ್ನನ್ನು ಬಹಳ ಇಷ್ಟಪಡುತ್ತಿದ್ದರು. ಅವರು ತೆರೆ ಮೇಲಿನ ತಾಯಿಯಂತೆ ಅಲ್ಲ, ಹೀರೋಯಿನ್ ಆಗಿ ಬದುಕಿದ್ದರು. ಅವರು ಆಹಾರಪ್ರಿಯೆ ಕೂಡಾ ಹೌದು. ಜೊತೆಗೆ, ಅತ್ಯುತ್ತಮ ಸೌಂದರ್ಯವರ್ಧಕಗಳನ್ನು ಬಳಸುತ್ತಿದ್ದರು. ಆಗಾಗ್ಗೆ ನನಗೆ ಸಲಹೆಗಳನ್ನು ನೀಡುತ್ತಿದ್ದರು. ಸೆಟ್‌ನಲ್ಲಿ ನನಗೆ ಸೂಕ್ತ ಗೌರವ ಸಿಗದಿದ್ದಾಗ ಅವರು ಕೋಪಗೊಂಡಿದ್ದ ಕ್ಷಣ ನನಗೆ ನೆನಪಿದೆ. ಅವರು ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯುತ್ತಾರೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ಗೆ 14 ದಿನಗಳ ನ್ಯಾಯಾಂಗ ಬಂಧನ - Jani Master Case
ಕವಿಯೂರ್ ಪೊನ್ನಮ್ಮ ಅವರು ಕೇರಳ ರಾಜ್ಯ ಸರ್ಕಾರದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕಿರುತೆರೆಯಲ್ಲಿಯೂ ಜನಪ್ರಿಯರಾಗಿದ್ದರು. ಅವರು ಆಸ್ಪತ್ರೆಯಲ್ಲಿದ್ದಾಗ ಅನೇಕ ಸಿನಿ ಗಣ್ಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.