'ಉತ್ತರಕಾಂಡ' ಚಿತ್ರದ ಮುಹೂರ್ತ 2022ರಲ್ಲೇ ಆಗಿತ್ತು. ಬಯಲು ಸೀಮೆಯ ಸಂಸ್ಕೃತಿಯನ್ನು ಎಳೆ-ಎಳೆಯಾಗಿ ಬಿಚ್ಚಿಡುವ ಕಥಾನಕವೇ 'ಉತ್ತರಕಾಂಡ'. ಆ ಭಾಗದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರೀಕರಣಕ್ಕೆ ನಿಖರ ಸಂಶೋಧನೆ ಮತ್ತು ಪ್ಲಾನಿಂಗ್ ಅಗತ್ಯವಿತ್ತು. ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಶೂಟಿಂಗ್ ವಿಳಂಬವಾಗಿತ್ತು. ಇದೀಗ ಸರ್ವ ಸಿದ್ಧತೆಯೊಂದಿಗೆ ಚಿತ್ರೀಕರಣ ಮತ್ತೆ ಶುರುವಾಗಿದೆ.
15 ದಿನಗಳ ಮೊದಲ ಹಂತದ ಚಿತ್ರೀಕರಣ ವಿಜಯಪುರದಲ್ಲಿ ನಡೆಯಲಿದೆ. ಸೋಮವಾರ (ಇಂದು) ಶೂಟಿಂಗ್ ಆರಂಭಗೊಂಡಿದ್ದು, ಸಿನಿಮಾ ತಂಡ ಉತ್ಸುಕವಾಗಿದೆ.
ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ''ಪ್ಲಾನಿಂಗ್ ಹಾಗು ಸಂಶೋಧನೆಗಾಗಿ ನಾನು ಮತ್ತು ನಿರ್ಮಾಪಕರು ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ. ಶಿವರಾಜ್ಕುಮಾರ್ ಮತ್ತು ಧನಂಜಯ್ ಮುಖ್ಯ ಪಾತ್ರದಲ್ಲಿರುವ ಬಹುದೊಡ್ಡ ತಾರಾಗಣದ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಈ ಕುರಿತು ಕುಂದುಕೊರತೆ ಬಾರದಂತೆ ನಾನು ಮತ್ತು ಕೆ.ಆರ್.ಜಿ ಕೆಲಸ ಮಾಡಲಿದ್ದೇವೆ'' ಎಂದರು.
ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ''ಉತ್ತರಕಾಂಡ ಚಿತ್ರ ಕೆ.ಆರ್.ಜಿ.ಯ ಹೆಮ್ಮೆ ಎಂದರೆ ಉತ್ಪ್ರೇಕ್ಷೆಯಲ್ಲ. ಕೇವಲ ನಾವಷ್ಟೇ ಅಲ್ಲದೆ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಉತ್ತರಕಾಂಡ ಮೂಡಿಬರಲಿದೆ" ಎಂದು ಭರವಸೆ ನೀಡಿದರು.
ಉತ್ತರಕಾಂಡದಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ನಿರ್ಮಿಸಲಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಮುಖ್ಯ ಛಾಯಾಗ್ರಹಣವಿರಲಿದೆ. ಪ್ರೊಡಕ್ಷನ್ ವಿನ್ಯಾಸ (ಡಿಸೈನ್) ಕೆಲಸ ವಿಶ್ವಾಸ್ ಕಶ್ಯಪ್ ಅವರದ್ದು. ಸದ್ಯದಲ್ಲೇ ಬಹುದೊಡ್ಡ ತಾರಾಬಳಗದ ಬಗ್ಗೆ ಮಾಹಿತಿ ಹೊರಬೀಳಲಿದೆ.
ಇದನ್ನೂ ಓದಿ: ಬನಾರಸ್ ಸೀರೆಯ ಪ್ರಚಾರದಲ್ಲಿ ರಣವೀರ್ ಸಿಂಗ್, ಕೃತಿ ಸನೋನ್: ಕಾಶಿಘಾಟ್ನಲ್ಲಿ ರ‍್ಯಾಂಪ್ ವಾಕ್