ಕನ್ನಡ ಚಿತ್ರರಂಗದ ಖ್ಯಾತ ನಟ - ನಿರ್ದೇಶಕ ಉಪೇಂದ್ರ ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಯು ಐ' ಬಿಡುಗಡೆಗೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ನಟಿಸಿದ್ದಲ್ಲದೇ, ನಿರ್ದೇಶನವನ್ನೂ ಮಾಡಿರುವ ಹಿನ್ನೆಲೆ ಚಿತ್ರ ಪ್ರೇಮಿಗಳ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಯು ಐ ಬಹುಭಾಷೆಗಳಲ್ಲಿ ಇದೇ ಡಿಸೆಂಬರ್ 20ರಂದು ಬಿಡುಗಡೆ ಆಗಲಿದ್ದು, ಭಾನುವಾರ ಹೈದರಾಬಾದ್ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರ್ದೇಶಕ ಬುಚ್ಚಿಬಾಬು, ನಿರ್ಮಾಪಕ ಎಸ್‌ಕೆಎನ್ ಸೇರಿದಂತೆ ಗಣ್ಯರು ಭಾಗಿಯಾಗಿ, ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ತಮ್ಮ ಸಿನಿಮಾಗಳಲ್ಲಿ ದೇಶಕ್ಕೆ ಸಂಬಂಧಿಸಿದ ವಿಷಯಗಳ ಒಳಗೊಳ್ಳುವಿಕೆ ಬಗ್ಗೆ ವರದಿಗಾರರಿಂದ ಪ್ರಶ್ನೆ ಎದುರಾದಾಗ, ಉಪೇಂದ್ರ ಅವರು ಜಾಣ್ಮೆಯಿಂದ ಉತ್ತರಿಸಿದರು. ನೀವು ದೇಶವನ್ನು ಪ್ರೀತಿಸುತ್ತೀರಾ ಅಥವಾ ಕೋಪಗೊಂಡಿದ್ದೀರಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ರಿಯಲ್ ಸ್ಟಾರ್, "ದೇಹ ಮತ್ತು ದೇಶ ಒಂದೇ ರೀತಿ ಆಗಿರುತ್ತದೆ. ನಮ್ಮ ದೇಹ ಉತ್ತಮ ಆರೋಗ್ಯದಲ್ಲಿದ್ದಾಗ ನಾವು ಅದನ್ನು ಪ್ರೀತಿಸುತ್ತೇವೆ, ಅದೇ ಅನಾರೋಗ್ಯಗೊಂಡಾಗ ಕೋಪಗೊಳ್ಳುತ್ತೇವೆ. ಇದು ದೇಶಕ್ಕೂ ಅನ್ವಯಿಸುತ್ತದೆ"
ಮೆಗಾಸ್ಟಾರ್ ಚಿರಂಜೀವಿ ಜೊತೆ ಕೆಲಸ ಮಾಡುವ ಕನಸು: 90ರ ದಶಕದಲ್ಲಿ ಚಿರಂಜೀವಿ ಅವರೊಂದಿಗೆ ಕೆಲಸ ಮಾಡುವ ಕನಸು ಕಂಡಿದ್ದ ಕ್ಷಣವನ್ನೂ ಸಹ ಉಪೇಂದ್ರ ಹಂಚಿಕೊಂಡಿದ್ದಾರೆ. ''ಚಿರಂಜೀವಿ ಅವರ ಜೊತೆ ಸಿನಿಮಾ ಮಾಡಬೇಕೆಂಬ ಆಸೆಯಿಂದ ಒಂದು ವರ್ಷ ಸ್ಕ್ರಿಪ್ಟ್ ಹಿಡಿದು ತಿರುಗಾಡಿದೆ, ಆದ್ರೆ ಅದು ಕೈಗೂಡಲಿಲ್ಲ. ಆ ವೇಳೆ ಸ್ಟೋರಿ ಮತ್ತು ಡೈಲಾಗ್ಸ್ ಬಗ್ಗೆ ತೆಲುಗು ನಟರು ಎಷ್ಟು ಆಳವಾಗಿ ಯೋಚಿಸುತ್ತಾರೆ ಎಂಬುದನ್ನು ನಾನು ಅರಿತುಕೊಂಡೆ. ಹಾಗಾಗಿಯೇ, ಚಿರಂಜೀವಿ ಮೆಗಾಸ್ಟಾರ್ ಆದ್ರು. ಆ ಅನುಭವ ನನ್ನ ಸ್ಕ್ರಿಪ್ಟ್ ಬರೆಯುವ ವಿಧಾನವನ್ನೇ ಬದಲಿಸಿತು'' ಎಂದು ತಿಳಿಸಿದರು.
ಟಾಲಿವುಡ್ ಕೊಂಡಾಡಿದ ಉಪ್ಪಿ: ಬುದ್ಧಿವಂತ ನಟ ನಿರ್ದೇಶಕ ಎಂದೇ ಖ್ಯಾತರಾಗಿರುವ ಉಪೇಂದ್ರ ತೆಲುಗು ಚಿತ್ರೋದ್ಯಮವನ್ನು ಶ್ಲಾಘಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ 1,000 ಕೋಟಿಯಿಂದ 2,000 ಕೋಟಿ ರೂ.ಗಳವರೆಗಿನ ಬೃಹತ್ ಕಲೆಕ್ಷನ್ ವಿಚಾರವನ್ನು ಇಲ್ಲಿ ಉಲ್ಲೇಖಿಸಿದರು. ಕಲಾವಿದರ ಮೇಲೆ ತೆಲುಗು ಪ್ರೇಕ್ಷಕರು ಹೊಂದಿರುವ ಅಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, 'ಅವರು ಪೋಷಕ ಪ್ರತಿಭೆಗಳ ಬೆನ್ನು ತಟ್ಟುತ್ತಾರೆ, ನಾನು ಅವರಲ್ಲಿ ಒಬ್ಬನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ' ಎಂದು ತಿಳಿಸಿದರು. ಜೊತೆಗೆ, ಬುಚ್ಚಿ ಬಾಬು ಅವರ ಚೊಚ್ಚಲ ಚಿತ್ರ 'ಉಪ್ಪೇನಾ'ವನ್ನು ಶ್ಲಾಘಿಸಿದರು ಮತ್ತು ರಾಮ್ ಚರಣ್ ಅವರ ಮುಂದಿನ ಸಿನಿಮಾ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಡೈಲಾಗ್ ಹೊಡಿ, ಕೂತ್ಕೋ, ಒಂದಷ್ಟ್ ಹಣ್ ತಿನ್ನು': ಆರ್ಭಟಿಸುವ ರಜತ್ಗೆ ಟಾಂಗ್ ಕೊಟ್ಟ ಗೌತಮಿ
ತಾವು ಎದುರಿಸಿದ ಹಲವು ಸವಾಲುಗಳ ನಡುವೆಯೂ ಉಪೇಂದ್ರ ಸಿನಿಮಾಗಳ ಮೇಲಿನ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. "ಎಲ್ಲಿಯವರೆಗೆ ಈ ಹೋರಾಟ ಎಂದು ನನ್ನ ಕುಟುಂಬ ಆಗಾಗ್ಗೆ ನನ್ನಲ್ಲಿ ಪ್ರಶ್ನಿಸುತ್ತದೆ. ಆದರೆ ಪ್ರೇಕ್ಷಕರ ಹೆಮ್ಮೆ ಮತ್ತು ಬೆಂಬಲವು ಈ ಉದ್ಯಮದಲ್ಲಿ ನನ್ನನ್ನು ಮುಂದುವರಿಯಲು ಉತ್ಸಾಹ ನೀಡುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ: ಅತ್ಯದ್ಭುತ ನಿರ್ದೇಶನ ಮಾತ್ರವಲ್ಲ, ನೃತ್ಯಕ್ಕೂ ಸೈ ರಾಜಮೌಳಿ : ಜಕ್ಕಣ್ಣನ ಜಬರ್ದಸ್ತ್ ಡ್ಯಾನ್ಸ್ ನೋಡಿ
ಉಪೇಂದ್ರ ನಟಿಸಿ, ನಿರ್ದೇಶಿಸಿರುವ 'ಯು ಐ' ತನ್ನ ವಿಶಿಷ್ಟ ಪರಿಕಲ್ಪನೆಯೊಂದಿಗೆ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ. ಇದೇ ಶುಕ್ರವಾರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದ್ದು, ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಶೀಘ್ರದಲ್ಲೇ ತಿಳಿದುಬರಲಿದೆ.