'ಯು ಐ' ಸೌತ್ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ. ಪೋಸ್ಟರ್, ಟೀಸರ್ನಿಂದಲೇ ಕನ್ನಡ ಮಾತ್ರವಲ್ಲದೇ ದಕ್ಷಿಣ ಚಿತ್ರರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಬುದ್ಧಿವಂತ ನಿರ್ದೇಶಕ-ನಟ ಎಂದು ಕರೆಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಬರೋಬ್ಬರಿ 7 ವರ್ಷಗಳ ಬಳಿಕ ಆ್ಯಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಸಿನಿಮಾ ಇದು.
ಹಾಗಾಗಿ ಸಿನಿಪ್ರಿಯರು, ಉಪ್ಪಿ ಅಭಿಮಾನಿಗಳಲ್ಲಿ ಈ ಚಿತ್ರ ಹೇಗಿರಬಹುದೆಂಬ ಕೌತುಕ ಹುಟ್ಟಿದೆ. ಶೂಟಿಂಗ್ ಮುಗಿಸಿ ಮ್ಯೂಸಿಕ್ ಜೊತೆಗೆ ವಿಎಫ್ಎಕ್ಸ್ ವರ್ಕ್ನಲ್ಲಿ ಬ್ಯುಸಿಯಾಗಿರೋ ಚಿತ್ರತಂಡ ಎಂದು ಸಿನಿಮಾ ಬಿಡುಗಡೆಗೊಳಿಸಲಿದೆ ಎಂದು ಸಿನಿರಸಿಕರು ಕಾತರರಾಗಿದ್ದರು. ಇಂಥ ಸಂದರ್ಭದಲ್ಲಿ ರಿಯಲ್ ಸ್ಟಾರ್ ತಮ್ಮ ಅಭಿಮಾನಿಗಳಿಗೆ ಯು ಐ ಚಿತ್ರದ ಬಿಡುಗಡೆ ಬಗ್ಗೆ ಸುಳಿವು ನೀಡಿದ್ದಾರೆ. ಗ್ಲಿಂಪ್ಸ್ ಒಂದನ್ನು ಶೇರ್ ಮಾಡಿರುವ ನಾಯಕ ನಟ, ಅಕ್ಟೋಬರ್ನಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ ಎಂದು ತಿಳಿಸಿದ್ದಾರೆ.
ಉಪ್ಪಿ ಅಂದ್ಮೇಲೆ ರೆಗ್ಯುಲರ್ ಸಿನಿಮಾ ನಿರೀಕ್ಷಿಸಲು ಸಾಧ್ಯವೇ? ಉಪೇಂದ್ರ ಸಿನಿಮಾವನ್ನು ನೋಡುವ ರೀತಿಯೇ ಬೇರೆ. ನಿರ್ಮಿಸುವ ವಿಧಾನವೂ ವಿಭಿನ್ನ. ಈ ಹಿಂದೆ ಬಂದ ಸಿನಿಮಾಗಳು ಕೂಡ ಇದನ್ನೇ ಸಾಬೀತುಪಡಿಸಿವೆ. ಯು ಐ ಕೂಡಾ ಉಪೇಂದ್ರ ವೃತ್ತಿಜೀವನದ ವಿಶಿಷ್ಟ ಸಿನಿಮಾವಾಗುವ ಎಲ್ಲಾ ಲಕ್ಷಣಗಳಿವೆ. ಅದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಟೀಸರ್ ಹಾಗೂ ಟ್ರೋಲ್ ಸಾಂಗ್ ರಿವೀಲ್ ಆಗಿವೆ.
ಸದಾ ವಿಭಿನ್ನವಾಗಿ ಯೋಚನೆ ಮಾಡುವ ಉಪೇಂದ್ರ ಯು ಐ ಚಿತ್ರದ ಮೂಲಕ ಒಂದು ಮೆಸೇಜ್ ಕೊಡೋದಿಕ್ಕೆ ಸಜ್ಜಾಗಿದ್ದಾರೆ. ಟ್ರೋಲ್ ಸಾಂಗ್ನಲ್ಲಿ ಕರ್ನಾಟಕದಲ್ಲಿ ನಡೆದ ಟ್ರೋಲ್ ಘಟನೆಗಳನ್ನು ಹೇಳುವ ಮೂಲಕ ಸಿನಿಪ್ರಿಯರ ಕುತೂಹಲ ಕೆರಳಿಸಿದ್ದರು. ಹೀಗೆ ಚಿತ್ರದ ಯಶಸ್ಸಿಗಾಗಿ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಜೊತೆಗೂಡಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ.
ಇದೇ ಅಕ್ಟೋಬರ್ ನಲ್ಲಿ ನಿಮ್ಮಮುಂದೆ…
— Upendra (@nimmaupendra) August 16, 2024
In cinemas from October 2024 pic.twitter.com/0fGYuUcIqa
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಯುಐ ಒಂದು ವಿಭಿನ್ನ ಚಿತ್ರ. ಅದನ್ನು ಮಾತಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಈ ಚಿತ್ರದ ಮೂಲಕ ಉಪೇಂದ್ರ ಅವರು ಪ್ರೇಕ್ಷಕರನ್ನು ಎಂಟರ್ಟೈನ್ ಮಾಡುವುದರ ಜೊತೆಗೆ ಸಮಾಜಕ್ಕೊಂದು ಸಂದೇಶ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಬಿಟ್ಟು, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಡಬ್ಬಿಂಗ್ ಕೆಲಸಗಳು ಮುಗಿದಿವೆ.
ಇದರ ಜೊತೆಗೆ ಉಪೇಂದ್ರ ಅವರು ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ತಂತ್ರಜ್ಞಾನ ಬಳಸಿದ್ದಾರೆ. ಸುಮಾರು 200 ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್ ಕ್ಯಾಮರಾನ್ ಅವರ ಅವತಾರ್ 2 ಸಿನಿಮಾಗೆ ಬಳಸಲಾಗಿತ್ತು. ಹೆಚ್ಚು ಕೆಲಸವಿರುವ ಹಿನ್ನೆಲೆ ಸಿನಿಮಾ ಬಿಡುಡಗೆ ತಡವಾಗುತ್ತಿದೆ. ಇದೇ ವರ್ಷ ಅಕ್ಟೋಬರ್ನಲ್ಲಿ ಯು ಐ ಬಿಡುಗಡೆ ಪಕ್ಕಾ. ಆದ್ರೆ ಯಾವ ದಿನ ಅನ್ನೋದನ್ನು ಉಪೇಂದ್ರ ಅವರ ಹುಟ್ಟಿದ ದಿನದಂದು ಅನೌನ್ಸ್ ಮಾಡಲಿದ್ದೇವೆ. ಸದ್ಯ ವಿಭಿನ್ನ ಮೋಷನ್ ಪಿಕ್ಚರ್ ಬಿಡುಗಡೆ ಮಾಡಿದ್ದೇವೆಂದು ತಿಳಿಸಿದರು.
ಇದನ್ನೂ ಓದಿ: 'ಪೌಡರ್' ಹಬ್ಬದಲ್ಲಿ ಭಾಗಿಯಾದ ದುನಿಯಾ ವಿಜಯ್, ಶ್ರೀಮುರಳಿ: ಫೋಟೋಗಳಿಲ್ಲಿವೆ - Powder Habba
ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡುಗಳ ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಉಪೇಂದ್ರ ಅವರು ಈ ಚಿತ್ರವನ್ನು ಬಹಳ ವಿಶೇಷವಾಗಿ ಪ್ರೆಸೆಂಟ್ ಮಾಡಬೇಕೆಂದುಕೊಂಡಿದ್ದು, ಇದೇ ಕಾರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯುರೋಪ್ನಲ್ಲಿ ಸೌಂಡ್ ಮಿಕ್ಸಿಂಗ್ ಕೆಲಸ ನಡೆದಿದೆ.
ಇನ್ನು ಉಪ್ಪಿ ನಿರ್ದೇಶನದ ಸಿನಿಮಾಗಳಲ್ಲೇ ದುಬಾರಿ ಚಿತ್ರವಿದು ಎಂದು ನಂಬಲಾಗಿದೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಅಲ್ಲದೇ, ತಾಂತ್ರಿಕವಾಗಿಯೂ ಈ ಸಿನಿಮಾ ಅಡ್ವಾನ್ಸ್ ಆಗಿರುತ್ತದೆ ಅನ್ನೋದು ಗೊತ್ತಾಗಿದೆ. ಟಗರು, ಸಲಗ ಸಿನಿಮಾದ ಬಳಿಕ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ನವೀನ್ ಮನೋಹರ್ ಜಂಟಿಯಾಗಿ ನಿರ್ಮಾಣ ಮಾಡಿರೋ ಬಹುಕೋಟಿ ವೆಚ್ಚದ ಸಿನಿಮಾ ಇದು. ಚಿತ್ರದ ಫೈನಲ್ ಅಫಿಶಿಯಲ್ ರಿಲೀಸ್ ಡೇಟ್ ಶೀಘ್ರದಲ್ಲೇ ಗೊತ್ತಾಗಲಿದೆ.