ಮಂಗಳೂರು (ದಕ್ಷಿಣ ಕನ್ನಡ): ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಯಾವ ಚಿತ್ರರಂಗ ಕೂಡಾ ಮಕ್ಕಳ ಸಿನಿಮಾ ನಿರ್ಮಾಣದತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಈ ಕೊರತೆಯ ನಡುವೆ ಕನ್ನಡದಲ್ಲಿ ಮಕ್ಕಳ ಚಿತ್ರವೊಂದು ನಿರ್ಮಾಣವಾಗಿದೆ. ಫಿನಿಕ್ಸ್ ಫಿಲ್ಮ್ ಲಾಂಛನದಡಿಯಲ್ಲಿ 'ದಿ ಜರ್ನಿ ಅಫ್ ಬೆಳ್ಳಿ' ಎಂಬ ಸಿನಿಮಾ ನಿರ್ಮಾಣಗೊಂಡಿದ್ದು, ಸೆ.13ರಂದು ತೆರೆಕಾಣಲಿದೆ.
'ದಿ ಜರ್ನಿ ಅಫ್ ಬೆಳ್ಳಿ' ದೇಶಪ್ರೇಮ ಬಿಂಬಿಸುವ ಕನ್ನಡ ಸಿನಿಮಾ. 9 ವರ್ಷದ ಹುಡುಗಿ ಗಡಿಭಾಗದಲ್ಲಿ ಕರ್ತವ್ಯನಿರತನಾಗಿರುವ ತನ್ನ ತಂದೆಯ ಬರುವಿಕೆಗಾಗಿ ಕಾಯುವ ಕಥೆಯನ್ನೊಳಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಇದರಲ್ಲಿ ಕೊಡಗು ಸಂಸ್ಕೃತಿಯನ್ನು ತೋರಿಸಲಾಗಿದೆ.
ಈ ಸಿನಿಮಾವನ್ನು ಮಂಗಳೂರಿನ ಮಹೇಂದ್ರ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಈ ಮೊದಲು ಮಹೇಂದ್ರ ಕುಮಾರ್ 'ಕಾರ್ನಿಕದ ಕಲ್ಲುರ್ಟಿ' ಎಂಬ ಚಿತ್ರ ನಿರ್ಮಾಣ ಮಾಡಿದ್ದರು. 'ದಿ ಜರ್ನಿ ಅಫ್ ಬೆಳ್ಳಿ' ಅವರ ಎರಡನೇ ಸಿನಿಮಾ. 'ದಿ ಜರ್ನಿ ಅಫ್ ಬೆಳ್ಳಿ' ಬಿಡುಗಡೆಗೂ ಮುನ್ನ ಹಲವು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಭಾಗವಹಿಸಿದೆ.
ಮೊಕ್ಕೊ ಇಂಟರ್ನ್ಯಾಷನಲ್ ಫೆಸ್ಟಿವಲ್ನಲ್ಲಿ ಬೆಸ್ಟ್ ಪ್ರೊಡ್ಯೂಸರ್, ಬೆಸ್ಟ್ ಡೆಬ್ಯೂ ಫಿಲ್ಮ್ ಮೇಕರ್, ಕ್ರೌನ್ ವುಡ್ ಇಂಟರ್ನ್ಯಾಷನಲ್ ಫೆಸ್ಟಿವಲ್ನಲ್ಲಿ ಬೆಸ್ಟ್ ಚಿಲ್ಡ್ರನ್ಸ್ ಫಿಲ್ಮ್, ಇಂಡೋ ಫ್ರೆಂಚ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ವಿನ್ನರ್, ತ್ರಿಲೋಕ ಇಂಟರ್ ನ್ಯಾಷನಲ್ ಫಿಲ್ಮ್ ಫೇರ್ ಅವಾರ್ಡ್ನಲ್ಲಿ ಬೆಸ್ಟ್ ಪ್ರೊಡ್ಯೂಸರ್, ಬೆಸ್ಟ್ ವುಮೆನ್ ಡೈರೆಕ್ಟರ್, ಬಿರ್ಸಮುಂಡ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ ಸ್ಪೆಷಲ್ ಜ್ಯೂರಿ ಅವಾರ್ಡ್, ರೋಶನಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬೆಸ್ಟ್ ಚಿಲ್ಡ್ರನ್ ಫಿಲ್ಮ್ ಅವಾರ್ಡ್ ಪಡೆದುಕೊಂಡಿದೆ.
ಈ ಬಗ್ಗೆ ಮಾತನಾಡಿದ ನಿರ್ಮಾಪಕ ಮಹೇಂದ್ರ ಕುಮಾರ್, ಇದು ಸೈನಿಕ ಮತ್ತು ಮಗಳ ಭಾಂದವ್ಯದ ಮೇಲೆ ತೆಗೆದ ಕಥೆ. ಹತ್ತಕ್ಕೂ ಹೆಚ್ಚು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಸ್ತಿಗಳು ಬಂದಿವೆ. ಸಿನಿಮಾ ಅದ್ಬುತವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಗೌರಿ ಶ್ರೀನಿವಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಲಿಚ್ಚಿ ಫಿಲಂಸ್ ಸಂಸ್ಥಾಪಕರಾದ ಗೌರಿ ಶ್ರೀನಿವಾಸ್ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿದ ಅವರು, ಈ ಸಿನಿಮಾಗೆ ಕಥೆ ಬರೆಯುವಾಗ ಒಂದು ಹೊಸತನ ತರಬೇಕೆಂದಿತ್ತು. ಈ ಕಥೆಯನ್ನು ನಿರ್ಮಾಪಕರಿಗೆ ಹೇಳಿದಾಗ ತುಂಬಾ ಖುಷಿ ಪಟ್ಟರು. ಸಿನಿಮಾದ ಬೆಳ್ಳಿ ಪಾತ್ರಕ್ಕೆ ಅಡಿಷನ್ನಲ್ಲಿ ಸಮನ್ವಿ ಆಯ್ಕೆಯಾದರು. ಸಮನ್ವಿಯದ್ದು ಇದು ಚೊಚ್ಚಲ ಚಿತ್ರ ಎಂದು ತಿಳಿಸಿದರು.
ಇದನ್ನೂ ಓದಿ: 'ಅಮ್ಮ' ಅಧ್ಯಕ್ಷ ಸ್ಥಾನಕ್ಕೆ ಸೂಪರ್ಸ್ಟಾರ್ ಮೋಹನ್ ಲಾಲ್ ರಾಜೀನಾಮೆ - Actor Mohanlal Resigns
ಈ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿರುವ ಬಾಲ ಕಲಾವಿದೆ ಸಮನ್ವಿ ಎಸ್ ಪಾಟೀಲ್ ಮೂಲತಃ ಹುಬ್ಬಳ್ಳಿಯ ಬಾಲಕಿ. ಭರವಸೆ ಮೂಡಿಸುವ ಈ ಬಾಲ ಪ್ರತಿಭೆ ಸಿನಿಮಾದಲ್ಲಿ ತುಂಬಾನೇ ಚೆನ್ನಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಮನ್ವಿ, ಪಾತ್ರ ನಿರ್ವಹಿಸುವಾಗ ಚಿತ್ರತಂಡದವರು ಉತ್ತಮವಾಗಿ ತಿಳಿಸಿಕೊಟ್ಟರು. ನಿರ್ದೇಶಕಿ ಚೆನ್ನಾಗಿ ಹೇಳಿಕೊಟ್ಟರು. ನನಗೆ ಮೊದಲ ಬಾರಿ ಕೊಡಗು ಸೀರೆ ಹಾಕಿದಾಗ ವಿಭಿನ್ನ ಎನಿಸಿತು. ಕೊಡಗು ಸಂಸ್ಕೃತಿ ತುಂಬಾನೇ ಇಷ್ಟವಾಯಿತು. ಸಿನಿಮಾ ಕೂಡಾ ಇಷ್ಟವಾಯಿತು ಎಂದು ತಿಳಿಸಿದರು.
ಸೆ.13 ರಂದು ರಾಜ್ಯದ 30 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಲವು ವರ್ಷಗಳ ಬಳಿಕ ಬರುತ್ತಿರುವ ಈ ಮಕ್ಕಳ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.