ಅಮರಾವತಿ: ಆಂಧ್ರಪ್ರದೇಶದ ಹಿಂದೂಪುರ ವಿಧಾನಸಭಾ ಕ್ಷೇತ್ರದ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಮತ್ತು ಟಾಲಿವುಡ್ ನಟ ಎನ್.ಬಾಲಕೃಷ್ಣ ಅವರ ಕುಟುಂಬದ ಆಸ್ತಿ 483 ಕೋಟಿ ರೂ. ಹೀಗೆಂದು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಹೇಳಿದ್ದಾರೆ.
ವಿಶೇಷ ಎಂದರೆ ಬಾಲಕೃಷ್ಣ ಅವರ ಪತ್ನಿ ವಸುಂಧರಾ, ನಟನಿಗಿಂತ ಹೆಚ್ಚು ಚರಾಸ್ತಿ ಹೊಂದಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಸುವಾಗ ಬಾಲಕೃಷ್ಣ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರು 81.63 ಕೋಟಿ ರೂ.ಗೂ ಹೆಚ್ಚು ಚರಾಸ್ತಿ ಹೊಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಪತ್ನಿಯ ಚರಾಸ್ತಿಯು 140.38 ಕೋಟಿ ಎಂದು ವಿವರ ಸಲ್ಲಿಕೆ ಮಾಡಿದ್ದಾರೆ. ಬಾಂಡ್‌ಗಳು, ಡಿಬೆಂಚರ್‌ಗಳು/ಷೇರುಗಳು ಇತ್ಯಾದಿಗಳಲ್ಲಿ ಅವರ ಪತ್ನಿ ಹೂಡಿಕೆ ಮಾಡಿದ್ದಾರೆ.
ಬಾಲಕೃಷ್ಣ ಅವರು ಹಿಂದೂ ಅವಿಭಜಿತ ಕುಟುಂಬ 2.41 ಕೋಟಿ ರೂಪಾಯಿಗೂ ಹೆಚ್ಚು ಚರಾಸ್ತಿ ಹೊಂದಿದೆ. ಅವರ ಅವಲಂಬಿತ ಪುತ್ರ ಮೋಕ್ಷಜ್ಞ ತಾರಕ ರಾಮ ತೇಜ 58.63 ಕೋಟಿ ಚರಾಸ್ತಿ ಹೊಂದಿದ್ದಾರೆ. ಸದ್ಯ ಬಾಲಕೃಷ್ಣ ಅವರ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ 103.35 ಕೋಟಿ ರೂ.ಗಳಾಗಿದ್ದು, ಅವರ ಪತ್ನಿಯ ಸ್ಥಿರಾಸ್ತಿಯ ಮೌಲ್ಯ 38.90 ಕೋಟಿ ರೂಗಳಾಗಿವೆ. ಎಚ್‌ಯುಎಫ್‌ನ ಚರ ಆಸ್ತಿ ಮೌಲ್ಯ 46.52 ಕೋಟಿ ರೂಪಾಯಿ ಮತ್ತು ಮೋಕ್ಷಜ್ಞ ತಾರಕ ರಾಮ ತೇಜ ಅವರ ಮೌಲ್ಯ 11.11 ಕೋಟಿ ರೂಪಾಯಿ.
ಬಾಲಕೃಷ್ಣ 2022-23ರ ಅವಧಿಯಲ್ಲಿ 10.02 ಕೋಟಿ ರೂ.ಗಳ ಆದಾಯವನ್ನು ಘೋಷಿಸಿದ್ದರೆ, ಅದೇ ಹಣಕಾಸು ವರ್ಷದಲ್ಲಿ ಅವರ ಪತ್ನಿಯ ಆದಾಯ 38.46 ಲಕ್ಷ ರೂ. ಎಚ್‌ಯುಎಫ್‌ನ ಆದಾಯ 19.02 ಲಕ್ಷ ಮತ್ತು ಅವರ ಅವಲಂಬಿತ ಮಗನ ಆದಾಯ 18.80 ಲಕ್ಷ ರೂ. ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.
63 ವರ್ಷದ ಅವರು ಸತತ ಮೂರನೇ ಅವಧಿಗೆ ಹಿಂದೂಪುರದಿಂದ ಮರು ಆಯ್ಕೆ ಬಯಸಿದ್ದಾರೆ. ಬಾಲಕೃಷ್ಣ ಅವರು ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸೋದರ ಮಾವ ಮತ್ತು ನಾಯ್ಡು ಅವರ ಪುತ್ರ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಮಾವನವರಾಗಿದ್ದಾರೆ.
ಆಂಧ್ರಪ್ರದೇಶದಲ್ಲಿ ವೈಎಸ್ಆರ್ಪಿ ಮತ್ತು ಟಿಡಿಪಿ, ಜನಸೇನಾ - ಬಿಜೆಪಿ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಇದೆ. ಈ ಬಾರಿ ಆಡಳಿತಾರೂಢ ವೈಎಸ್ಆರ್ಪಿಯನ್ನು ಸೋಲಿಸಲು ಟಿಡಿಪಿ ಸನ್ನದ್ಧವಾಗಿದೆ.
ಇದನ್ನು ಓದಿ: ಮೊದಲ ಬಾರಿಗೆ ಮೊಬೈಲ್ ನೆಟ್ವರ್ಕ್ಗೆ ಸಿಕ್ಕ ಹಿಮಾಚಲದ ಹಳ್ಳಿ; ಗ್ರಾಮಸ್ಥರಿಗೆ ಪ್ರಧಾನಿ ಮೋದಿ ಕರೆ! - Lahaul Spiti