ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಆರೋಪಿತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ, ಭಾರತದ ಹೊರಗೆ ಸಕ್ರಿಯವಾಗಿರುವ ದೇಶವಿರೋಧಿ ಗುಂಪುಗಳಿಂದ ಹಣಕಾಸು ಅಥವಾ ಶಸ್ತ್ರಾಸ್ತ್ರಗಳ ರೂಪದ ನೆರವು ಇದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಇಬ್ಬರು ವ್ಯಕ್ತಿಗಳು ಹಲವು ಸುತ್ತುಗಳ ಗುಂಡು ಹಾರಿಸಿದ್ದರು. ನಂತರ, ಪೊಲೀಸರು ಗುಜರಾತ್ನ ಇಬ್ಬರು ಶೂಟರ್‌ಗಳಾದ ವಿಕ್ಕಿ ಗುಪ್ತಾ (24), ಸಾಗರ್ ಪಾಲ್ (21) ಹಾಗೂ ಗನ್ ಪೂರೈಸಿದ ಆರೋಪದ ಮೇಲೆ ಮತ್ತಿಬ್ಬರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದರು. ಪಂಜಾಬ್ ಮೂಲದ ಸೋನು ಕುಮಾರ್ ಚಂದರ್ ಬಿಷ್ಣೋಯ್ (37) ಮತ್ತು ಅನುಜ್ ಥಾಪನ್ (32) ಗನ್ ಪೂರೈಸಿದ ಆರೋಪಿಗಳು. ನಗರ ಪೊಲೀಸ್‌ನ ಅಪರಾಧ ವಿಭಾಗವು ಗುಪ್ತಾ, ಪಾಲ್ ಮತ್ತು ಥಾಪನ್‌ನನ್ನು ಸೋಮವಾರದಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮೇ 8ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಲಾರೆನ್ಸ್ ಬಿಷ್ಣೋಯ್ ಇದ್ದಾನೆ. ಅವನ ಕಿರಿಯ ಸಹೋದರ ಅನ್ಮೋಲ್ ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾದಲ್ಲಿದ್ದಾನೆ ಎಂದು ಊಹಿಸಲಾಗಿದ್ದು, ಈ ಪ್ರಕರಣದಲ್ಲಿ ಇಬ್ಬರೂ ಸಿಲುಕಿದ್ದಾರೆ. ಫೇಸ್‌ಬುಕ್ ಪೋಸ್ಟ್ ಮೂಲಕ ಗುಂಡಿನ ದಾಳಿ ತಾವೇ ನಡೆಸಿರುವುದು ಎಂದು ಅನ್ಮೋಲ್ ಹೇಳಿಕೊಂಡಿದ್ದಾನೆ. ಆದರೆ ಫೇಸ್ಬುಕ್ನ ಐಪಿ ವಿಳಾಸ ಪೋರ್ಚುಗಲ್‌ಗೆ ಲಿಂಕ್ ಆಗಿದೆ ಎಂದು ಅಧಿಕಾರಿಗಳು ಈ ಮೊದಲೇ ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ನ ಸಂಘಟಿತ ಗುಂಪು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಪೊಲೀಸರ ರಿಮಾಂಡ್ ಮನವಿಯ ಪ್ರಕಾರ, ಶಸ್ತ್ರಾಸ್ತ್ರ ಅಥವಾ ಹಣಕಾಸು ನೆರವನ್ನು ಭಾರತದ ಹೊರಗಿರುವ ದೇಶವಿರೋಧಿ ಗುಂಪುಗಳಿಂದ ನೆರವು ಪಡೆಯುತ್ತಿದೆಯೇ? ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ತಪ್ಪು ಸಾಬೀತಾದರೆ ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆಯಾಗಲಿ: ನಟ ಚೇತನ್ - Hassan Pen Drive Case
ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಈ ಫೈರಿಂಗ್ ಪ್ರಕರಣದಲ್ಲಿ ಆರೋಪಿತ ಶೂಟರ್‌ಗಳು ಬಳಸಿದ ಶಸ್ತ್ರಾಸ್ತ್ರಗಳ ಮೂಲದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಷ್ಣೋಯ್ ಗ್ಯಾಂಗ್ ದೇಶದ ಆರ್ಥಿಕ ಕೇಂದ್ರವಾಗಿರುವ ಮುಂಬೈನಲ್ಲಿ ಭಯ ಸೃಷ್ಟಿಸಲು ಉದ್ದೇಶಿಸಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೇ ಈ ಗ್ಯಾಂಗ್ನ ಸದಸ್ಯರು ನಗರದ ಉದ್ಯಮಿಗಳು, ಕಲಾವಿದರು ಮತ್ತು ಬಿಲ್ಡರ್‌ಗಳಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ ನೋಡಲು 1,500 ಕಿ.ಮೀ ಓಡಿದ ಅಭಿಮಾನಿ - Sonu Sood