ಚೆನ್ನೈ(ತಮಿಳುನಾಡು): ಹೃದಯ ರಕ್ತನಾಳದಲ್ಲಿ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮಿಳಿನ ಹಿರಿಯ ನಟ ರಜನಿಕಾಂತ್ ಸೋಮವಾರ ತಡರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. 73ರ ಹರೆಯದ ನಟನ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿದ್ದವು. ಇದೀಗ ಆಸ್ಪತ್ರೆ ಅಧಿಕೃತ ಹೆಲ್ತ್ ಅಪ್ಡೇಟ್ಸ್ ನೀಡಿದೆ.
ಆಸ್ಪತ್ರೆಯಿಂದ ಹೆಲ್ತ್ ಅಪ್ಡೇಟ್: ರಜನಿಕಾಂತ್ ಅವರ ಹೃದಯದ ಒಂದು ಭಾಗದ ರಕ್ತನಾಳದಲ್ಲಿ (ಮಹಾಪಧಮನಿ) ಊತ ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೇತರ ವಿಧಾನ ಟ್ರಾನ್ಸ್‌ಕ್ಯಾಥೆಟರ್ ಮೂಲಕ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿದೆ.
ಹಿರಿಯ ಹೃದ್ರೋಗ ತಜ್ಞ ಡಾ.ಸಾಯಿ ಸತೀಶ್ ಅವರು ಊತ ಗುಣಪಡಿಸಲು ಸ್ಟೆಂಟ್ ಬಳಸಿ ಚಿಕಿತ್ಸೆ ನೀಡಿದ್ದಾರೆ. ಇದನ್ನು ಎಂಡೋವಾಸ್ಕುಲರ್ ಚಿಕಿತ್ಸೆ ಎಂದು ಕರೆಯಲಾಗುತ್ತದೆ ಎಂದು ತಿಳಿಸಲಾಗಿದೆ.
ನೆಚ್ಚಿನ ನಟನ ಆರೋಗ್ಯದ ಕುರಿತು ಕಳವಳ ಹೊಂದಿದ್ದ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಆಸ್ಪತ್ರೆಯ ಹೇಳಿಕೆ ನಿರಾಳತೆ ಮೂಡಿಸಿದೆ. ಇನ್ನೆರಡು ದಿನಗಳಲ್ಲಿ ರಜನಿಕಾಂತ್ ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ನಟಿ ರಚಿತಾ ರಾಮ್ - Rachita Ram Apology
ಅಪಾರ ಸಂಖ್ಯೆಯ ಅಭಿಮಾನಿಗಳಿಂದ 'ತಲೈವರ್' ಎಂದು ಕರೆಸಿಕೊಳ್ಳುವ ರಜನಿಕಾಂತ್ ತಮ್ಮ 73ರ ಹರೆಯದಲ್ಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟನ ಕೊನೆಯ ಚಿತ್ರ 'ಜೈಲರ್' ಸಿನಿಪ್ರಿಯರಿಂದ ಮೆಚ್ಚುಗೆ ಸ್ವೀಕರಿಸಿದ್ದಲ್ಲದೇ, ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿತ್ತು. ಇದೀಗ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸೇರಿದಂತೆ ಅವರ ಮುಂಬರುವ ಚಿತ್ರಗಳಿಗಾಗಿ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ. ರಜನಿಕಾಂತ್ ಮತ್ತೊಮ್ಮೆ ತಮ್ಮ ಪ್ರೇಕ್ಷಕರನ್ನು ಮನರಂಜಿಸಲು ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದಾರೆ.
ಇದನ್ನೂ ಓದಿ: ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್ - Rajinikanth Hospitalised
ಬಹುಬೇಡಿಕೆಯ ನಟನ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ವೆಟ್ಟೈಯನ್'. ಬಿಡುಗಡೆ ಹೊಸ್ತಿಲಿನಲ್ಲಿರುವ ಈ ಚಿತ್ರವನ್ನು ಟಿ.ಜೆ.ಜ್ಞಾನವೆಲ್ ನಿರ್ದೇಶಿಸಿದ್ದಾರೆ. ಅಕ್ಟೋಬರ್ 10ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಜನಿ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ, ಫಹದ್ ಫಾಸಿಲ್ ಮತ್ತು ಮಂಜು ವಾರಿಯರ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.