ಕನ್ನಡ ಚಿತ್ರರಂಗದಲ್ಲಿ ಕುಚಿಕು ಗೆಳೆಯರಾಗಿ ಇವತ್ತಿಗೂ ಅಭಿಮಾನಿಗಳ ಹೃದಯವನ್ನು ಆವರಿಸಿರುವ ಇಬ್ಬರು ದಿಗ್ಗಜ ನಟರೆಂದರೆ ಅದು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್.
ಅನೇಕ ಬಾರಿ ಅಂಬರೀಶ್ ಅವರು ಸಂದರ್ಶನಗಳಲ್ಲಿ ಮಾತನಾಡುತ್ತಾ, ನನ್ನ ಮತ್ತು ವಿಷ್ಣುವರ್ಧನ್ ಸ್ನೇಹಕ್ಕೆ ಬೆಲೆನೇ ಕಟ್ಟೋಕಾಗಲ್ಲ. ವಿಷ್ಣು ಅಪರೂಪದ ಗೆಳೆಯ ಅಂದಿದ್ರು.
ಮೂಲತಃ ಮೈಸೂರಿನವರಾದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಸ್ನೇಹ ಶುರುವಾಗಿದ್ದು ನಾಗರಹಾವು ಸಿನಿಮಾದಿಂದ.
ನಾಗರಹಾವು ಸೆಟ್ನಲ್ಲಿ ಮೊದಲ ಭೇಟಿ: ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾಗಾಗಿ ಹೊಸ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಚಿಗುರು ಮೀಸೆಯ ತೀಕ್ಷ್ಣ ಕಣ್ಣಿನ ಹುಡುಗ ವಿಷ್ಣುವರ್ಧನ್ ನಾಯಕನಾಗಿ ಆಯ್ಕೆಯಾಗಿದ್ದರು. ಇದೇ ಚಿತ್ರದಲ್ಲಿ ಜಲೀಲನ ಪಾತ್ರಕ್ಕಾಗಿ ತುಸು ಪುಂಡನ ಲುಕ್ ಇರುವ ನಟನಿಗಾಗಿ ಪುಟ್ಟಣ್ಣ ಹುಡುಕಾಡುತ್ತಿದ್ದರು. ಆಗ ರೆಬಲ್ ಸ್ಟಾರ್ ಅಂಬರೀಶ್ ಜಲೀಲನ ಪಾತ್ರಕ್ಕೆ ಆಯ್ಕೆಯಾಗಿದ್ದರು.
ವಿಷ್ಣುವರ್ಧನ್ ಅವರದು ಸ್ವಲ್ಪ ತಮಾಷೆ ಮಾಡುವ ವ್ಯಕ್ತಿತ್ವ. ಹೀಗಾಗಿ ಅಂಬರೀಶ್ಗೆ ವಿಷ್ಣುವರ್ಧನ್ ಬಹಳ ಬೇಗನೆ ಇಷ್ಟವಾಗಿದ್ದರು. ಈ ಚಿತ್ರದಲ್ಲಿ ವಿಷ್ಣು ಹೀರೋ ಆಗಿದ್ರೆ, ಅಂಬರೀಶ್ ವಿಲನ್ ರೋಲ್‌ನಲ್ಲಿ ಮಿಂಚಿದ್ದರು. ನಿಜ ಜೀವನದಲ್ಲಿ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಲು ಈ ಚಿತ್ರವೂ ಕಾರಣವಾಯಿತು. ಜಲೀಲನ ಪಾತ್ರದಲ್ಲಿದ್ದ ಅಂಬರೀಶ್ ನಟಿ ಆರತಿ ಅವರನ್ನು ರೇಗಿಸುತ್ತಿದ್ದರೆ, ಇತ್ತ ವಿಷ್ಣುವರ್ಧನ್ ಸೈಕಲ್ನಲ್ಲಿ ಬಂದು ಫೈಟ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು.
ಸಾಹಸಸಿಂಹ ವಿಷ್ಣು ಬಗ್ಗೆ ಅಂಬಿಗೆ ಎಲ್ಲಿಲ್ಲದ ಅಭಿಮಾನ. ಇಬ್ಬರೂ ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಾ, ಒಬ್ಬರ ಕಾಲು ಮತ್ತೊಬ್ಬರು ಎಳೆದು ನಕ್ಕು ನಲಿಯುತ್ತಿದ್ದರು. ಚಿತ್ರದುರ್ಗದಲ್ಲಿ ನಾಗರಹಾವು ಶೂಟಿಂಗ್ ಸಂದರ್ಭದಲ್ಲಿ ಇಬ್ಬರೂ ಒಂದೇ ರೂಂನಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭವಿತ್ತು. ಈ ಸಂದರ್ಭದಲ್ಲಂತೂ ಇಬ್ಬರೂ ಮತ್ತಷ್ಟು ಕ್ಲೋಸ್ ಆದರು. ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಶೂಟಿಂಗ್ ಯಾವಾಗ ಬೆಂಗಳೂರಿಗೆ ಶಿಫ್ಟ್ ಆಯ್ತೋ ಆಗ ಅಂಬರೀಶ್ ಸಿನಿಮಾ ಶೂಟಿಂಗ್ ಬಿಡುವು ಸಿಕ್ಕಾಗೆಲ್ಲಾ ವಿಷ್ಣುವರ್ಧನ್ ಮನೆಗೆ ಹೋಗುತ್ತಿದ್ದರು. ಬಹುಶಃ ನಾಗರಹಾವು ಚಿತ್ರದ ಮೂಲಕ ಚಿಗುರಿದ ಸ್ನೇಹ ಆದರ್ಶ ಸ್ನೇಹವಾಗುತ್ತೆ ಅಂತಾ ಅವರಿಬ್ಬರಿಗೂ ಅಂದು ಅರಿವೇ ಇರಲಿಲ್ಲ.
ಇನ್ನೂ ನಾಗರಹಾವು ಬಿಡುಗಡೆಗೂ ಮುನ್ನವೇ ಮೊದಲ ಪ್ರಿಂಟ್ ಮದ್ರಾಸ್‍ನ ಖಾಸಗಿ ಚಿತ್ರ ಮಂದಿರವೊಂದರಲ್ಲಿ ಪ್ರದರ್ಶನವಾಗಿತ್ತು. ಮದ್ರಾಸ್‍ನ ನಿರ್ಮಾಪಕರು, ನಿರ್ದೇಶಕರು ಅದಾಗಲೇ ಚಿತ್ರ ನೋಡಿ ಅದ್ಭುತ ಎಂದು ಹೊಗಳಿದ್ದರು. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅಲ್ಲಿರಲಿಲ್ಲ. ಆಗ ಈ ಸುದ್ದಿಯನ್ನು ಅಂಬರೀಶ್ ಮೊದಲು ವಿಷ್ಣುವರ್ಧನ್ಗೆ ಫೋನ್ ಮಾಡಿ ತಿಳಿಸಿದ್ದರು.
ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ..: ಇಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಆದರೆ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದ್ದು ಡಿ.ರಾಜೇಂದ್ರ ಬಾಬು ನಿರ್ದೇಶನದ ದಿಗ್ಗಜರು ಸಿನಿಮಾದಲ್ಲಿ. ಈ ಚಿತ್ರದಲ್ಲಿ ನಿಜ ಜೀವನದಲ್ಲಿ ಅಂಬಿ ಮತ್ತು ವಿಷ್ಣು ಇರುವಂತೆಯೇ ತೋರಿಸಲಾಗಿತ್ತು. ಈ ಚಿತ್ರದಲ್ಲಿ ಅಂಬರೀಶ್ 'ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ' ಅಂತಾ ವಿಷ್ಣುವರ್ಧನ್ ಬಗ್ಗೆ ಹಾಡುವ ಗೀತೆ ಗೆಳೆತನದ ಎವರ್‌ಗ್ರೀನ್ ಹಾಡು ಆಗಿದೆ.
ಇಬ್ಬರೂ ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ವಿಷ್ಣುವರ್ಧನ್ ಸಿನಿಮಾ ಕಾರ್ಯಕ್ರಮವಾಗಲಿ ಅಥವಾ ಹೊರೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಂಬರೀಶ್ ಅಲ್ಲಿರಬೇಕಿತ್ತು. ಅಂಬಿಯಿಲ್ಲದೇ ವಿಷ್ಣುವರ್ಧನ್ ಯಾವುದೇ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ವಂತೆ.
ಈ ಸಂಗತಿ ನಿಮಗೆ ಗೊತ್ತೇ?: ಈ ಸ್ಟಾರ್ ಸ್ನೇಹಿತರ ಬಗ್ಗೆ ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅಂಬಿ-ವಿಷ್ಣು ಆಪ್ತರಾಗಿದ್ದರೂ ಅವರ ಆಲೋಚನೆಗಳು ಮಾತ್ರ ತದ್ವಿರುದ್ಧ. ಜನರ ಜೊತೆ ಬೆರೆಯುವ ವಿಚಾರದಲ್ಲಿ ವಿಷ್ಣುವರ್ಧನ್ ಸ್ವಲ್ಪ ದೂರ ಸರಿಯುತ್ತಿದ್ದರು. ಆದರೆ ಅಂಬರೀಶ್ ಸದಾ ಜನರೊಂದಿಗೆ ಬೆರೆಯುತ್ತಿದ್ದರು. ವಿಷ್ಣು ರಾಜಕೀಯ ಎಂದರೆ ದೂರ ಸರಿದು ನಿಲ್ಲುತ್ತಿದ್ದರು. ಹಾಗಾಗಿ ರಾಜಕೀಯಕ್ಕೆ ಕಾಲಿಡಲೇ ಇಲ್ಲ. ಆದರೆ ಮಂಡ್ಯದಲ್ಲಿ ಅಂಬರೀಶ್ ಸ್ಪರ್ಧಿಸುವ ವೇಳೆ ನಾಮಿನೇಷನ್ ದಿನ ಗೆಳೆಯನ ಜೊತೆ ವಿಷ್ಣುವರ್ಧನ್ ಬಂದಿದ್ದರು. ಸದ್ಯ ನಮ್ಮೊಂದಿಗೆ ಇಬ್ಬರೂ ಇಲ್ಲ. ಆದರೆ ರೀಲ್ ಹಾಗೂ ರಿಯಲ್ ಲೈಫ್ನಲ್ಲೂ ಅವರ ಗೆಳೆತನ ಇಂದಿಗೂ ಮಾದರಿ.
ಇದನ್ನೂ ಓದಿ: ಫ್ರೆಂಡ್‌ಶಿಪ್ ಡೇ: ಸ್ನೇಹದ ಮಹತ್ವ ಸಾರಿದ ಸ್ಯಾಂಡಲ್ವುಡ್ ಸೂಪರ್ ಹಿಟ್ ಚಿತ್ರಗಳಿವು - Movies On Friendship