ಕನ್ನಡ ಚಿತ್ರರಂಗದಲ್ಲಿ ನೈಜ ಘಟನೆ ಆಧಾರಿತ ಸಿನಿಮಾಗಳು ಬರುತ್ತಿರುವುದು ಹೊಸತೇನಲ್ಲ. ಇದೀಗ ನಾಡಪ್ರಭು ಕೆಂಪೇಗೌಡರ ಬಗ್ಗೆ ಚಿತ್ರ ಮಾಡಬೇಕು ಅಂದಾಗ, ಅದಕ್ಕೆ ಸಂಬಂಧಿಸಿದ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಅವರು 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದ ಬೆನ್ನಲ್ಲೇ ಹಿರಿಯ ನಿರ್ದೇಶಕ ನಾಗಾಭರಣ ವಿರೋಧ ವ್ಯಕ್ತಪಡಿಸಿದ್ದರು.
ಸ್ಯಾಂಡಲ್ವುಡ್ನಲ್ಲಿ ಹಲವು ವರ್ಷಗಳಿಂದ ಸಂಗೀತ ನಿರ್ದೇಶಕರಾಗಿರುವ ಕಿರಣ್ ತೋಟಂಬೈಲ್, 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುವ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಸದ್ಯ ಕೆಂಪೇಗೌಡರ ಅವತಾರದಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ನಿಮ್ಮ ಸಿನಿಮಾದ ಹೀರೋನಾ ಎಂಬ ಪ್ರಶ್ನೆಗೆ ಸ್ವತಃ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಕಿರಣ್ ಉತ್ತರಿಸಿದ್ದಾರೆ.
''ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕೆ ಹಿರಿಯ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ, ಅಷ್ಟರಲ್ಲೇ ಸಿನಿಮಾ ನಿರ್ಮಾಣ ಮಾಡದಂತೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ ತರಲಾಗಿದೆ'' ಎಂದು ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಹೇಳಿದ್ದಾರೆ.
''ಕೆಂಪೇಗೌಡರ ಸಂಬಂಧಪಟ್ಟಂತೆ ಯಾವುದೇ ರೀತಿಯ ಸಿನಿಮಾ ನಿರ್ಮಾಣ, ಪ್ರಸಾರ ಮಾಡುವುದು, ಧ್ವನಿ ಮುದ್ರಣ, ಪ್ರಸಾರ ಹಾಗೂ ಜಾಹೀರಾತು ಸೇರಿದಂತೆ ಯಾವುದೇ ಕೆಲಸ ಮಾಡದಂತೆ ನಿರ್ಮಾಪಕ ಕಿರಣ್ ತೋಟಂಬೈಲ್, ಕಥೆಗಾರ ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮತ್ತು ದಿನೇಶ್ ಬಾಬು ಸೇರಿದಂತೆ ಅವರ ಮೇಲೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಮುಂದಿನ ತಿಂಗಳ ಜೂನ್ 3ರಂದು ಈ ಬಗ್ಗೆ ಕೋರ್ಟ್ನಲ್ಲಿ ವಿಚಾರಣೆ ಇದೆ, ಅದಕ್ಕೆ ನಾವು ಸಿದ್ದರಿದ್ದೇವೆ'' ಎಂದಿದ್ದಾರೆ.
ರಾಜವರ್ಧನ್ ಪೋಸ್ಟರ್ ವೈರಲ್: ''ಈ ಮಧ್ಯೆ ಕೆಂಪೇಗೌಡರ ಪಾತ್ರಕ್ಕೆ ನಾವು ಸಾಕಷ್ಟು ಸ್ಟಾರ್ ನಟರನ್ನು ಸಂಪರ್ಕ ಮಾಡಿದ್ದೇವೆ. ಅಷ್ಟರಲ್ಲಿ 'ಬಿಚ್ಚುಗತ್ತಿ' ಸಿನಿಮಾ ಖ್ಯಾತಿಯ ರಾಜವರ್ಧನ್ ಅವರು ಕೆಂಪೇಗೌಡ ಅವತಾರದಲ್ಲಿರುವ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನು ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ಸಿನಿಮಾದಲ್ಲಿ ಒಬ್ಬ ಕನ್ನಡದ ಸ್ಟಾರ್ ನಟ ಕೆಂಪೇಗೌಡರ ಪಾತ್ರ ಮಾಡಬೇಕೆಂಬುದು ಕನ್ಫರ್ಮ್ ಆಗಿದೆ. ರಾಜವರ್ಧನ್ ನಮ್ಮ ಸಿನಿಮಾದ ಹೀರೋ ಅಲ್ಲ'' ಎಂದು ತೋಟಂಬೈಲ್ ಸ್ಪಷ್ಟಪಡಿಸಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಕೆಂಪೇಗೌಡರ ಪಾತ್ರದಲ್ಲಿ ರಾಜವರ್ಧನ್ ಬಳಸಿ ಮಾಡಿದ್ದ ಪೋಸ್ಟರ್‌ಗಳು ಹರಿದಾಡಿದ್ದವು. ಇದನ್ನು ಕಂಡು ಫ್ಯಾನ್ಸ್ ಖುಷಿ ಪಟ್ಟಿದ್ದರು.
ಅದ್ಧೂರಿ ಮುಹೂರ್ತಕ್ಕೆ ಸಿದ್ಧತೆ: ''ಕೆಂಪೇಗೌಡರ ಹುಟ್ಟುಹಬ್ಬದ ದಿನ ನಮ್ಮ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರದ ಮುಹೂರ್ತವನ್ನು ಸುಮಾರು 50 ಲಕ್ಷ ರೂ. ಖರ್ಚು ಮಾಡಿ, ನಾಯಂಡಹಳ್ಳಿಯ ಸಮೀಪ ಇರುವ ನಂದಿನ ಮೈದಾನದಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ ದಿನವೇ ಈ ಚಿತ್ರದ ಸ್ಟಾರ್ ನಟನನ್ನು ಪರಿಚಯಿಸಲಾಗುತ್ತೆ'' ಎಂದು ಕಿರಣ್ ತೋಟಂಬೈಲ್ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಬರುತ್ತಿದ್ದು, ಚಿತ್ರರಂಗದ ಸಾಕಷ್ಟು ತಾರೆಯರು ಆಗಮಿಸಲಿದ್ದಾರೆ ಅಂತಾರೆ ನಿರ್ಮಾಪಕ ಕಿರಣ್ ತೋಟಂಬೈಲ್. ಕೋರ್ಟ್ನಲ್ಲಿ ತೀರ್ಫು ತಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸದಲ್ಲಿರುವ ಕಿರಣ್ ತೋಟಂಬೈಲ್, ಸಿನಿಮಾವನ್ನು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪಿನ ಮೇಲೆ ಚಿತ್ರದ ಮುಂದಿನ ನಡೆ ಗೊತ್ತಾಗಲಿದೆ.
ಇದನ್ನೂ ಓದಿ: 'ಅಂಬರೀಶ್ಗೆ ನಾನು ಕೊಟ್ಟಿದ್ದ ಹಾರ್ಟ್ ಪೆಂಡೆಂಟ್ ಬಹಳ ಇಷ್ಟವಾಗಿತ್ತು': ಸುಮಲತಾ - Pooja to Ambareesh Tomb