ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಭಾರತದ ಹೆಸರಾಂತ ನಿರ್ದೇಶಕ ಎಸ್.ಎಸ್ ರಾಜಮೌಳಿ ಕಾಂಬೋದ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಬಿಗ್ ಪ್ರಾಜೆಕ್ಟ್ಗೆ 'ಎಸ್ಎಸ್ಎಂಬಿ29' ಎಂದು ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ಸಿನಿಮಾ ಹೇಗೆ ಮೂಡಿಬರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಇದೇ ಮೊದಲ ಬಾರಿಗೆ ಜನಪ್ರಿಯ ನಟ - ನಿರ್ದೇಶಕ ಜೋಡಿ, ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ. ಪ್ರಾಜೆಕ್ಟ್ ಬಗ್ಗೆ ಹೆಚ್ಚೇನೂ ಮಾಹಿತಿ ಇರದಿದ್ದರೂ, ಈಗಾಗಲೇ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಸಖತ್ ಸದ್ದು ಮಾಡಿದೆ. ಲೇಟೆಸ್ಟ್ ಅಪ್ಡೇಟ್ಸ್ ಎನ್ನುವಂತೆ ರಾಜಮೌಳಿ ಅವರು ಮಹೇಶ್ ಬಾಬು ಅವರ ಹುಟ್ಟುಹಬ್ಬದಂದು ಚಿತ್ರದಿಂದ ಫಸ್ಟ್ ಲುಕ್ ಗ್ಲಿಂಪ್ಸ್ ಅಥವಾ ಪೋಸ್ಟರ್ ಅನಾವರಣಗೊಳಿಸಲು ಯೋಜಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಆರ್ಆರ್ಆರ್ ಖ್ಯಾತಿಯ ನಿರ್ದೇಶಕ ಆಗಸ್ಟ್ 9ರಂದು ನಟ ಮಹೇಶ್ ಬಾಬು ಅವರ ಜನ್ಮದಿನದ ಸಲುವಾಗಿ ಚಿತ್ರದಿಂದ ಮಹೇಶ್ ಬಾಬು ಅವರನ್ನೊಳಗೊಂಡ ವಿಶೇಷ ವಿಡಿಯೋ ಅನಾವರಣಗೊಳಿಸುವ ಸಾಧ್ಯತೆ ಹೆಚ್ಚಿದೆ. ಚಿತ್ರದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ ಕೂಡ, ಇದು ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಅಭಿಮಾನಿಗಳಿಗೆ ಒಂದು ದೊಡ್ಡ ಸುದ್ದಿ ಅಂತಲೇ ಹೇಳಬಹುದು. ಆಗಸ್ಟ್ 9ರಂದು ನಾಯಕ ನಟನ ಜನ್ಮದಿನ ಹಿನ್ನೆಲೆ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಬಹುತೇಕ ಪಕ್ಕಾ ಅನ್ನೋದು ಅಭಿಮಾನಿಗಳ ನಂಬಿಕೆ.
ಇದನ್ನೂ ಓದಿ: 'ಅಪ್ಪಾಜಿ ಈ ರೀತಿಯ ಪಾತ್ರಗಳನ್ನು ಮಾಡುತ್ತಿದ್ದರು': ಭೈರವನ ಕೊನೆ ಪಾಠದ ಬಗ್ಗೆ ಶಿವಣ್ಣ ಹೀಗಂದ್ರು - Bhairavana Kone PaaTa
ಚಿತ್ರದ ಮತ್ತೊಂದು ಅಪ್ಡೇಟ್ ಪ್ರಕಾರ, ರಾಜಮೌಳಿ ಅವರ ಆಪ್ತ ಸ್ನೇಹಿತ ಮತ್ತು ಜನಪ್ರಿಯ ನಟ ನಾಸರ್ ಅವರು ಮಹೇಶ್ ಬಾಬು ಸೇರಿದಂತೆ 'ಎಸ್ಎಸ್ಎಂಬಿ29'ರ ನಟರಿಗೆ ಆಡುಭಾಷೆಯಲ್ಲಿ ಮಾತನಾಡಲು ತರಬೇತಿ ನೀಡಲು ಮಾತುಕತೆ ನಡೆಸಿದ್ದಾರೆ. ಡೈಲಾಗ್ಸ್ ನಿಖರತೆ ಮತ್ತು ಉಚ್ಚಾರಣೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಗಾರಗಳನ್ನು ಆಯೋಜಿಸುವ ಜವಾಬ್ದಾರಿ ಇವರಿಗಿದೆ. ನಾಸರ್ ಮತ್ತು ಮಹೇಶ್ ಬಾಬು ಈ ಹಿಂದೆ ಅಥಡು (2005), ಪೋಕಿರಿ (2006), ದೂಕುಡು (2011) ಮತ್ತು ಆಗಡು (2014) ನಂತಹ ಯಶಸ್ವಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಇದನ್ನೂ ಓದಿ: ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಜಾನಿ ನಿಧನ! - Usha Uthup Husband Passes Away
ರಾಜಮೌಳಿ ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷಾರಂಭ ಚಿತ್ರೀಕರಣ ಪ್ರಾರಂಭವಾಗಲಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ ಕೀರವಾಣಿ ಸಂಗೀತ ಸಂಯೋಜಿಸಿದರೆ, ಕೆ.ಎಲ್ ನಾರಾಯಣ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬಹು ನಿರೀಕ್ಷಿತ ಚಿತ್ರದ ಕಥೆಯನ್ನು ವಿಜಯೇಂದ್ರ ಪ್ರಸಾದ್ (ರಾಜಮೌಳಿ ಅವರ ತಂದೆ) ಬರೆದಿದ್ದಾರೆ. ಇದೊಂದು ಔಟ್ ಅಂಡ್ ಔಟ್ ಆ್ಯಕ್ಷನ್ ಎಂದು ಊಹಿಸಲಾಗಿದ್ದು, ಎಲ್ಲದಕ್ಕೂ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.