ಡಾ. ರಾಜ್‌ಕುಮಾರ್ ಎಂಬ ದಂತಕಥೆ ಅಪಾರ ಸಂಖ್ಯೆಯ ಜನರ ಪ್ರೀತಿ ಸಂಪಾದಿಸಿ, ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೊರಟ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಇಹಲೋಕ ತ್ಯಜಿಸಿಯೂ, ಅಭಿಮಾನಿಗಳ ಮನದಲ್ಲಿ ಅವರು ಅಚ್ಚಳಿಯದೇ ಉಳಿದಿದ್ದಾರೆ. ರಾಜ್ ಎಂಬ ದಿವ್ಯ ಜ್ಯೋತಿ ಅನೇಕ ಮನಸ್ಸುಗಳಲ್ಲಿ ಜೀವಂತವಾಗಿದ್ದಾರೆ.
ರಾಜ್‌ಕುಮಾರ್ ಎಂದೆಂದಿಗೂ ಶಾಶ್ವತ ಎಂಬ ಮಾತು ಕನ್ನಡಿಗರ ಹೃದಯಗಳಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ರಾಜ್ ಎಂಬ ನಟಸಾರ್ವಭೌಮ ನಮ್ಮನ್ನಗಲಿ 18 ವರ್ಷಗಳಾಯ್ತಾ? ಎಂಬ ಕಹಿಸತ್ಯ ಗೊತ್ತಿದ್ದರೂ ಅವರ ಹುಟ್ಟಿದ ದಿನವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಅಣ್ಣಾವ್ರು ಬದುಕಿದ್ದರೆ ಇಂದು ಕುಟುಂಬಸ್ಥರು, ಅಭಿಮಾನಿಗಳ ಜೊತೆ 95ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದ್ರೀಗ ಅವರು ನೆನಪು ಮಾತ್ರ. ಈ ಹಿನ್ನೆಲೆ, ರಾಜ್ ಸಮಾಧಿಗೆ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಟುಂಬಸ್ಥರಾದ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಗಳು ವಂದಿತಾ, ಅಣ್ಣಾವ್ರ ಹೆಣ್ಣು ಮಕ್ಕಳಾದ ಪೂರ್ಣಿಮಾ, ಲಕ್ಷ್ಮೀ ಗೋವಿಂದರಾಜ್ ಆಗಮಿಸಿ ರಾಜ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಮಾಧಿಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಇನ್ನು ಶಿವರಾಜ್ಕುಮಾರ್ ಅವರು ಪತ್ನಿ ಗೀತಾ ಪರ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರುವ ಹಿನ್ನೆಲೆ, ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಂದೆಯನ್ನು ಸ್ಮರಿಸಿದ್ದಾರೆ. ರಾಜ್‌ಕುಮಾರ್ ಅವರ ಅಭಿಮಾನಿಯೂ ಆಗಿರುವ ನಟ ಜಗ್ಗೇಶ್ ಈ ಬಾರಿ ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಡಾ. ರಾಜ್ ಜನ್ಮದಿನ: ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ನಟಸಾರ್ವಭೌಮ - Dr Raj Birth Anniversary
ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ವಿಶೇಷ ಅಂದ್ರೆ ಇಂದು ಸ್ವಾತಿ ನಕ್ಷತ್ರ. ಅಪ್ಪಾಜಿ ಅವರು ಹುಟ್ಟಿದ ದಿನವೂ ಇದೇ ಬಂದಿತ್ತು. ಹಿಂದೂ ಕ್ಯಾಲೆಂಡರ್ ಪ್ರಕಾರ, ಅಪ್ಪ ನಿನ್ನೆ ಹುಟ್ಟಿದ್ದು. ಅಭಿಮಾನಿಗಳ ಪ್ರೀತಿಯೇ ನಮ್ಮನ್ನು ಉಳಿಸಿರೋದು. ಜನರ ಜೈಕಾರಕ್ಕೆ ಅಪ್ಪಾಜಿ ಖುಷಿ ಪಡ್ತಿದ್ರು. ಅದರಲ್ಲೂ ಡಾಕ್ಟರ್ ರಾಜ್‌ಕುಮಾರ್ ಅಂತಾ ಕರೆದ್ರೆ ಅಪ್ಪನಿಗೆ ಏನೋ ಒಂದು ರೀತಿಯ ಸಂತೋಷ ಆಗುತ್ತಿತ್ತು. ಅಪ್ಪಾಜಿ ಆಶೀರ್ವಾದ ಎಲ್ಲರ ಮೇಲಿದೆ. ರಾಜ್ ಇಲ್ಲ ಅನ್ನೋಕೆ ಕಾರಣವೇ ಇಲ್ಲ. ನಾನು ಅವರ ಫೋಟೋ ನೋಡಿಯೇ ನನ್ನ ದಿನ ಶುರು ಮಾಡೋದು. ಗಂಧದಗುಡಿ ಅಗರಭತ್ತಿ ಲಾಂಚ್ ಆಗಿದೆ. ಗಂಧದ ಕಡ್ಡಿಯಿಂದಲೇ ನಾವು ದೇವರಿಗೆ ಹತ್ತಿರವಾಗೋದು. ಅದೇ ರೀತಿ ಅಪ್ಪಾಜಿ ಕೂಡ ಅಭಿಮಾನಿಗಳಿಗೆ ಹತ್ತಿರ ಆಗಿದ್ದರು'' ಎಂದು ತಿಳಿಸಿದರು.
ಇದನ್ನೂ ಓದಿ: ’ನಾನು ಡಿಸಿಗೆ ತುಂಬಾ ಕ್ಲೋಸ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಠ ರೀತಿಯ ಚುನಾವಣಾ ಪ್ರಚಾರ - Voting Awareness
ಅಣ್ಣಾವ್ರ ಜನ್ಮದಿನ ಹಿನ್ನೆಲೆ, ಅವರ ಸಮಾಧಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಅಣ್ಣಾವ್ರ ಹೆಸರಿನಲ್ಲಿ ಅನ್ನದಾನ ಹಾಗೂ ರಕ್ತದಾನ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲ ಲೆಜೆಂಡ್ಸ್ ಕೋಟ್ಯಂತರ ಮನಸ್ಸುಗಳಲ್ಲಿ ಶಾಶ್ವತವಾಗಿ ಉಳಿದುಬಿಡ್ತಾರೆ ಎಂಬುದಕ್ಕೆ ರಾಜ್‌ಕುಮಾರ್ ಅವರಿಗಿಂತ ಬೇರೆ ಉದಾಹರಣೆ ಬೇಕಿಲ್ಲ.