ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ನಯನತಾರಾ ಅವರ ಎಕ್ಸ್ (ಟ್ವಿಟರ್) ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿರುವ ಅವರು ಅನಗತ್ಯ ಟ್ವೀಟ್ಸ್ ನಿರ್ಲಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನಯನತಾರಾ ಟ್ವೀಟ್: ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು, ''ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಯಾವುದೇ ಅನಗತ್ಯ ಅಥವಾ ವಿಚಿತ್ರ ಟ್ವೀಟ್‌ಗಳು ಬಂದರೆ ಅವುಗಳನ್ನು ದಯವಿಟ್ಟು ನಿರ್ಲಕ್ಷಿಸಿ'' ಎಂದು ಬರೆದುಕೊಂಡಿದ್ದಾರೆ.
Account has been hacked. Please ignore any unnecessary or strange tweets being posted.
— Nayanthara✨ (@NayantharaU) September 13, 2024
ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ಸಖತ್ ಸ್ಟಾರ್ಡಮ್ ಹೊಂದಿರುವ ನಯನತಾರಾ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆ ಹ್ಯಾಕ್ ಆಗಿದೆ ಎಂಬುದನ್ನು ತಿಳಿಸೋ ಮೂಲಕ ತಮ್ಮ ಫಾಲೋವರ್ಸ್ ಅನ್ನು ಎಚ್ಚರಿಸಿದ್ದಾರೆ. ಸೂಕ್ತ ಸಮಯಕ್ಕೆ ಎಚ್ಚರಿಕೆ ಕೊಟ್ಟ ಹಿನ್ನೆಲೆ ನಟಿಯ ಅಭಿಮಾನಿಗಳು ಅಲರ್ಟ್ ಆಗಿರಬಹುದು. ಫ್ಯಾನ್ಸ್ ಅಥವಾ ಫಾಲೋವರ್ಸ್ ಯಾವುದೇ ಅನಧಿಕೃತ, ಅನುಮಾನಾಸ್ಪದ ಅಥವಾ ತಪ್ಪುದಾರಿಗೆಳೆಯುವ ವಿಷಯದಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಲು ಈ ಎಚ್ಚರಿಕೆ ಸಹಾಯಕ. 2013ರ ಆಗಸ್ಟ್ನಲ್ಲಿ ಈ ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಸೇರಿದ ಸೌತ್ ಬ್ಯೂಟಿ ಈ ಪ್ಲ್ಯಾಟ್ಫಾರ್ಮ್ನಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಗಳನ್ನು ಸಂಪಾದಿಸಿದ್ದಾರೆ.
ಅದೇ ಎಕ್ಸ್ ಖಾತೆ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು, ಫ್ಯಾನ್ಸ್ ಕಳವಳಗೊಂಡಿದ್ದಾರೆ. ಎಕ್ಸ್ ಅಕೌಂಟ್ಗೆ ಮರಳಿ ಬರೋದನ್ನು ಅಥವಾ ಹೊಸ ಖಾತೆ ತೆರೆಯೋದನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರದ ನಯನತಾರಾ 2023ರ ಆಗಸ್ಟ್ 31ಕ್ಕೆ ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟರು. ಅಂದೇ ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ವಿಡಿಯೋ ಮೂಲಕ ರಿವೀಲ್ ಮಾಡಿದ್ರು. ಈ ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ 8.9 ಮಿಲಿಯನ್ ಫಾಲೋವರ್ಸ್ ಸಂಪಾದಿಸಿರುವ ಅವರು ಈವರೆಗೆ 119 ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ದೀಪಿಕಾ, ಮಗು ನೋಡಲು ಆಸ್ಪತ್ರೆಗೆ ಭೇಟಿ ಕೊಟ್ಟ ಶಾರುಖ್: ವಿಡಿಯೋ - Shah Rukh Khan Met Deepika
ನಯನತಾರಾ ಕೊನೆಯದಾಗಿ 'ಅನ್ನಪೂರ್ಣಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ಮನ್ನಂಗಟ್ಟಿ: ಸಿನ್ಸ್ 1960' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಟಾಕ್ಸಿಕ್ ಅಖಾಡಕ್ಕೆ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಯನತಾರಾ ಎಂಟ್ರಿ ಕೊಡಲಿದ್ದಾರೆ. ಬೆಂಗಳೂರಿನಲ್ಲಿ 1,000 ಜನರೊಂದಿಗೆ ಚಿತ್ರೀಕರಣ ನಡೆಸಲಾಗುತ್ತಿದೆ ಎಂಬ ವದಂತಿಗಳು ಹರಡಿದ್ದವು. ಹಾಗಾಗಿ ಈಟಿವಿ ಭಾರತ ಕೆವಿಎನ್ ಪ್ರೊಡಕ್ಷನ್ನ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಅವರನ್ನು ಸಂಪರ್ಕಿಸಿತ್ತು.
ಊಹಾಪೂಹಳಿಗೆ ಪ್ರತಿಕ್ರಿಯಿಸಿದ್ದ ನಿರ್ಮಾಪಕರು ''ಸಮಯ ಬಂದಾಗ ನಾಯಕನೇ ನಟಿಯ ಬಗ್ಗೆ ಮಾಹಿತಿ ಕೊಡಲಿದ್ದಾರೆ. ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂಬುದನ್ನಷ್ಟೇ ಹೇಳಬಲ್ಲೆ. ಎಲ್ಲೂ ಶಿಫ್ಟ್ ಆಗದೇ, ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗುತ್ತಿದೆ. ಬಾಕಿ ವಿಚಾರಗಳನ್ನು ಈಗಲೇ ಹೇಳಲು ಸಾಧ್ಯವಿಲ್ಲ'' ಎಂದು ತಿಳಿಸಿದ್ದರು. ಆದ್ರೆ ನಯನತಾರಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿದೆ. ಯಾವುದಕ್ಕೂ ಚಿತ್ರತಂಡ ಕಾಸ್ಟ್ ಬಗ್ಗೆ ಅಧಿಕೃತ ಘೋಷಣೆ ಮಾಡಿದಾಗಷ್ಟೇ ತಿಳಿಯಲಿದೆ.