ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಇಂದು ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಅನೌನ್ಸ್ಮೆಂಟ್ ಮಾಡಿದ್ದಾರೆ. ನಟ ತಮ್ಮ ಮುಂದಿನ ಪ್ರೊಜೆಕ್ಟ್ನ ಶೀರ್ಷಿಕೆ ರಿವೀಲ್ ಮಾಡಿದ್ದಾರೆ. 'ಸೂರರೈ ಪೊಟ್ರು' ಹಿಂದಿ ರೀಮೇಕ್ಗೆ 'ಸರ್ಫಿರಾ' (Sarfira) ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಶೀರ್ಷಿಕೆ ಜೊತೆ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನೂ ಬಹಿರಂಗಪಡಿಸಲಾಗಿದೆ.
ಬಾಲಿವುಡ್ ಕಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್ ಜೊತೆ ರಾಧಿಕಾ ಮದನ್ ಮತ್ತು ಪರೇಶ್ ರಾವಲ್ ಸೇರಿದಂತೆ ಕೆಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೌತ್ ಸೂಪರ್ ಸ್ಟಾರ್ ಸೂರ್ಯ ಮುಖ್ಯಭೂಮಿಕೆಯ ತಮಿಳಿನ ಹಿಟ್ ಸಿನಿಮಾ 'ಸೂರರೈ ಪೊಟ್ರು'ವಿನ ಅಧಿಕೃತ ಹಿಂದಿ ರೀಮೇಕ್ 2022ರ ಏಪ್ರಿಲ್ನಲ್ಲಿ ಸೆಟ್ಟೇರಿತ್ತು.
'ಸೂರರೈ ಪೊಟ್ರು' ರೀಮೇಕ್ 'ಸರ್ಫಿರಾ' ಅನೌನ್ಸ್ಮೆಂಟ್ಗೆ ನಟ ಅಕ್ಷಯ್ ಕುಮಾರ್ ಬೈಕ್ನಲ್ಲಿ ಕುಳಿತಿರೋ ವಿಡಿಯೋವನ್ನೂ ಅನಾವರಣಗೊಳಿಸಲಾಗಿದೆ. ಏರ್‌ಲಿಫ್ಟ್, ಬೇಬಿ, ಜೈ ಭೀಮ್, ಓ ಮೈ ಗಾಡ್ 2 ಮತ್ತು ಟಾಯ್ಲೆಟ್: ಏಕ್ ಪ್ರೇಮ್ ಕಥಾ ಸಿನಿಮಾಗಳ ಹಿಂದಿರುವ ಪ್ರೊಡಕ್ಷನ್ಸ್ ಈ ಸರ್ಫಿರಾ ಜೊತೆ ಕೈ ಜೋಡಿಸಿದೆ. ಜೈ ಭೀಮ್ ಹೊರತುಪಡಿಸಿ ಈ ಎಲ್ಲಾ ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರೆಂಬುದು ಗಮನಾರ್ಹ ಸಂಗತಿ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸರ್ಫಿರಾ ಅನೌನ್ಸ್ಮೆಂಟ್ ವಿಡಿಯೋ ಹಂಚಿಕೊಂಡ ಅಕ್ಷಯ್ ಕುಮಾರ್, "ದೊಡ್ಡ ಕನಸು ಕಾಣಿ, ಅವರು ನಿಮ್ಮನ್ನು ಕ್ರೇಜಿ ಎಂದು ಕರೆಯುತ್ತಾರೆ. ಸರ್ಫಿರಾ ಇದೇ ಸಾಲಿನ ಜುಲೈ 12ರಂದು ಚಿತ್ರಮಂದಿರ ಪ್ರವೇಶಿಸಲಿದೆ'' ಎಂದು ಬರೆದುಕೊಂಡಿದ್ದಾರೆ.
ಸೂರ್ಯ ಅಭಿನಯಿಸಿದ್ದ ತಮಿಳಿನ ಸೂರರೈ ಪೊಟ್ರು ಚಿತ್ರವನ್ನು ನಿರ್ದೇಶಿಸಿದ್ದ ಸುಧಾ ಕೊಂಗರ ಅವರೇ ಈ ಚಿತ್ರವನ್ನೂ ನಿರ್ದೇಶಿದ್ದಾರೆ. ಸರ್ಫಿರಾ ಟೀಸರ್‌ನಲ್ಲಿ, "ನಿಮ್ಮ ಕನಸುಗಳನ್ನು ಬೆನ್ನಟ್ಟುವ ಅದ್ಭುತ ಕಥೆಯನ್ನು" ನೀಡುವುದಾಗಿ ಭರವಸೆ ನೀಡಿದ್ದಾರೆ. ಸಿನಿಮಾದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ, ಅಕ್ಷಯ್ ಕುಮಾರ್ ಪಾತ್ರದ ಒಂದು ನೋಟವನ್ನೂ ಒದಗಿಸಲಾಗಿದೆ. ರೋಮಾಂಚಕ ಬೈಕ್ ರೈಡ್ ಅನ್ನು ಆನಂದಿಸುತ್ತಿರುವಂತೆ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ರವಿಕೆ ಪ್ರಸಂಗ': ಉಡುಪಿಯ ಖ್ಯಾತ ಬಟ್ಟೆ ಮಳಿಗೆಗೆ ಭೇಟಿ ಕೊಟ್ಟ ಚಿತ್ರತಂಡ - ವಿಡಿಯೋ
"ಡ್ರೀಮ್ ಸೋ ಬಿಗ್, ದೇ ಕಾಲ್ ಯೂ ಕ್ರೇಜಿ" ಎಂಬ ಚಿತ್ರದ ಟ್ಯಾಗ್ಲೈನ್ ಕೂಡ ನೋಡುಗರ ಕುತೂಹಲ ಕೆರಳಿಸಿದೆ. ಅರುಣಾ ಭಾಟಿಯಾ, ಜ್ಯೋತಿಕಾ, ಸೂರ್ಯ ಮತ್ತು ವಿಕ್ರಮ್ ಮಲ್ಹೋತ್ರಾ ನಿರ್ಮಾಣದ ಸರ್ಫಿರಾ ಈಗಾಗಲೇ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಚಿತ್ರ ಜುಲೈ 12ರಂದು ಬಿಡುಗಡೆ ಆಗಲಿದ್ದು, ತಮಿಳು ವರ್ಷನ್ನಂತೆಯೇ ಹಿಂದಿ ಆವೃತ್ತಿ ಕೂಡ ದೊಡ್ಡ ಗೆಲುವು ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಸಿನಿಮಾ ಸ್ಥಗಿತ ವದಂತಿ; 'ಹರಿ ಹರ ವೀರ ಮಲ್ಲು' ನಿರ್ಮಾಪಕರ ಸ್ಪಷ್ಟನೆ ಹೀಗಿದೆ
2020ರಲ್ಲಿ ಸೂರರೈ ಪೊಟ್ರು ತೆರೆಕಂಡಾಗ ಭರ್ಜರಿ ರೆಸ್ಪಾನ್ಸ್ ಸ್ವೀಕರಿಸಿ, ಐದು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿತ್ತು. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ (ಸೂರ್ಯ), ಅತ್ಯುತ್ತಮ ನಟಿ (ಅಪರ್ಣಾ ಬಾಲಮುರಳಿ), ಅತ್ಯುತ್ತಮ ಚಿತ್ರಕಥೆ (ಸುಧಾ ಕೊಂಗರ ಮತ್ತು ಶಾಲಿನಿ ಉಷಾ ನಾಯರ್) ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತ (ಪ್ರಕಾಶ್ ಕುಮಾರ್) ಪ್ರಶಸ್ತಿಗಳು ಈ ಯಶಸ್ವಿ ಚಿತ್ರದ ಪಾಲಾಗಿತ್ತು.