ದಾವಣಗೆರೆ: ಸಾಮಾಜಿಕ ಜವಾಬ್ದಾರಿ ನೆನಪಿಸುವ ಚಿತ್ರ 'ವಿಕಾಸಪರ್ವ' ಬಿಡುಗಡೆಗೆ ಸಿದ್ಧತೆ ನಡೆಸಿದೆ. ಕರ್ನಾಟಕ ರಾಜ್ಯವಲ್ಲದೇ ಅಮೆರಿಕದಲ್ಲೂ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರದ ನಾಯಕ ನಟ ರೋಹಿತ್ ನಾಗೇಶ್ ತಿಳಿಸಿದ್ದಾರೆ.
ಸಮಾಜದ ಪ್ರತೀ ಮನೆಯಲ್ಲೂ ಇರುವಂಥ ಒಂದು ಸಮಸ್ಯೆಯನ್ನು ಇಟ್ಟುಕೊಂಡು ನಿರ್ದೇಶಕ ಅನ್ನು ಅರಸ್ ಅವರು "ವಿಕಾಸಪರ್ವ" ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಹಾಗೂ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಯುವನಟ ರೋಹಿತ್ ನಾಗೇಶ್ ಅವರು ಈ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ಸ್ವಾತಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಗೆ ಸಜ್ಜಾಗುತ್ತಿರುವ ಈ ಚಿತ್ರದ ಕಥೆಯನ್ನು ಚಿತ್ರತಂಡ ಈವರೆಗೂ ಬಿಟ್ಟುಕೊಟ್ಟಿಲ್ಲ.
ಒಂದು 'ಸಾಮಾಜಿಕ ಜವಾಬ್ದಾರಿ' ಇಟ್ಟುಕೊಂಡು ಮಾಡಿರುವ ಚಿತ್ರ ಎಂದಷ್ಟೇ ಚಿತ್ರತಂಡ ಹೇಳಿಕೊಂಡಿದೆ. 'ವಿಕಾಸಪರ್ವ' ಒಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದ್ದು, ಈ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ಕಮರ್ಷಿಯಲ್ ಆಗಿ ಹೇಳುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ವಿಶ್ವತ್ ನಾಯಕ್ ಅವರು ವಿಕಾಸಪರ್ವ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಜೊತೆಗೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅನ್ನು ಅರಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮನುಷ್ಯ ಸ್ವಲ್ಪ ವಿವೇಚನೆಯಿಂದ ನಡೆದುಕೊಂಡರೆ ಅದು ವಿಕಾಸಪರ್ವ ಆಗುತ್ತದೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಮಧ್ಯಮ, ವಯಸ್ಕರ ಸುತ್ತ ನಡೆಯುವ ಸಾಂಸಾರಿಕ ಕಥೆಯ ಜೊತೆಗೊಂದು ಮೆಸೇಜ್ ಈ ಚಿತ್ರದಲ್ಲಿದೆ.
ಇದನ್ನೂ ಓದಿ: ದರ್ಶನ್ ಮತ್ತು ಸಹಚರರು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ; ದಾಸ ಬಳ್ಳಾರಿ ಜೈಲಿಗೆ - DARSHAN JAIL SHIFT
ಈ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ, ಶನಿವಾರಸಂತೆ ಸುತ್ತಮುತ್ತ 2 ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ 3 ಹಾಡುಗಳಿದ್ದು, ಎಲ್ಲಾ ಹಾಡುಗಳು ಕಥೆಯ ಜೊತೆಜೊತೆಗೆ ಸಾಗುತ್ತವೆ. ಅದೇ ರೀತಿ ಬರುವ ಒಂದು ಹೊಡೆದಾಟದ ಸೀನ್ ಕೂಡ ಚಿತ್ರಕಥೆಗೆ ಅನುಗುಣವಾಗಿದೆ. ಎಲ್ಲಾ ಹಾಡುಗಳಿಗೂ ಡಾ.ವಿ.ನಾಗೇಂದ್ರಪ್ರಸಾದ್ ಅವರೇ ಸಾಹಿತ್ಯ ರಚಿಸಿದ್ದು, ಎಪಿಒ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ನವೀನ್ ಸುವರ್ಣ ಕ್ಯಾಮರಾ ವರ್ಕ್ ನಿಭಾಯಿಸಿದ್ದಾರೆ. ಶ್ರೀನಿವಾಸ ಕಲಾಲ್ ಅವರ ಸಂಕಲನ, ಟೈಗರ್ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಬೃಹತ್ ಗೋಡೆಯಲ್ಲಿ ಮೂಡಿಬಂದ ಹ್ಯಾಟ್ರಿಕ್ ಹೀರೋನ ಲುಕ್ಗೆ ಫ್ಯಾನ್ಸ್ ಫಿದಾ - Shiva Rajkumar Graffiti Art